ಸುದ್ದಿಯ ಸ್ಥಳ: Shivamogga district, Karnataka
ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಕಾಳಿಂಗ ಸರ್ಪವನ್ನು ಸೆರೆಹಿಡಿದು ಛಾಯಾಚಿತ್ರ ತೆಗೆದಿದ್ದಾರೆ ಎಂಬ ಆರೋಪದಡಿ ತೀರ್ಥಹಳ್ಳಿಯ ಉರಗ ರಕ್ಷಕ ಡಾ. ಪಿ. ಗೌರಿಶಂಕರ್ ವಿರುದ್ಧ ಅರಣ್ಯ ಇಲಾಖೆ ಆಗುಂಬೆ ವಿಭಾಗ ದಾಖಲಿಸಿದ್ದ ಕ್ರಿಮಿನಲ್ ಪ್ರಕರಣವನ್ನು ಕರ್ನಾಟಕ ಹೈಕೋರ್ಟ್ ರದ್ದುಪಡಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾದ ದೋಷಾರೋಪಣಾ ಪಟ್ಟಿಯಲ್ಲಿರುವ ದಾಖಲೆಗಳನ್ನು ಪರಿಶೀಲಿಸಿದ ನ್ಯಾಯಾಲಯ, ಗೌರಿಶಂಕರ್ ಕಾಳಿಂಗ ಸರ್ಪವನ್ನು ಬಂಧನದಲ್ಲಿ ಇರಿಸಿದ್ದರು ಅಥವಾ ಅದಕ್ಕೆ ಹಾನಿ ಮಾಡಿದ್ದರು ಎಂಬುದನ್ನು ದೃಢಪಡಿಸುವ ಅಂಶಗಳಿಲ್ಲ ಎಂದು ಅಭಿಪ್ರಾಯಪಟ್ಟಿದೆ.
ನವೆಂಬರ್ 2, 2026ರಂದು ನ್ಯಾಯಮೂರ್ತಿ ಅನಂತ ರಾಮನಾಥ ಹೆಗಡೆ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ಹೊರಡಿಸಿದೆ. ಕಾಳಿಂಗ ಸರ್ಪದ ಛಾಯಾಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟವಾಗಿವೆ ಎಂಬ ಕಾರಣಕ್ಕೆ ಮಾತ್ರ ಅರ್ಜಿದಾರರು ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಅಪರಾಧ ಎಸಗಿದ್ದಾರೆ ಎಂಬ ತೀರ್ಮಾನಕ್ಕೆ ಬರಲು ಸಾಧ್ಯವಿಲ್ಲ ಎಂಬುದು ನ್ಯಾಯಾಲಯದ ಆದೇಶದ ಪ್ರಮುಖ ಅಂಶವಾಗಿದೆ.
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ತುರ್ಚಿಹಕ್ಕಲು, ಗುಡ್ಡೆಕೆರೆ ಅಂಚೆ ವ್ಯಾಪ್ತಿಯ ಕಾಳಿಂಗ ಮನೆ ನಿವಾಸಿ ಡಾ. ಪಿ. ಗೌರಿಶಂಕರ್ ಅವರು ತಮ್ಮ ವಿರುದ್ಧದ ಕ್ರಿಮಿನಲ್ ಪ್ರಕರಣ ರದ್ದುಪಡಿಸುವಂತೆ ಕೋರಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಪುರಸ್ಕರಿಸಿರುವ ನ್ಯಾಯಪೀಠ, ತೀರ್ಥಹಳ್ಳಿಯ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್ಸಿ ನ್ಯಾಯಾಲಯದಲ್ಲಿ ವಿಚಾರಣೆಗೆ ಬಾಕಿಯಿದ್ದ ಪ್ರಕರಣದ ಸಂಪೂರ್ಣ ಪ್ರಕ್ರಿಯೆಯನ್ನು ರದ್ದುಪಡಿಸಿದೆ.
ಕಾಳಿಂಗ ಸರ್ಪದ ಛಾಯಾಚಿತ್ರದಿಂದ ಆರಂಭವಾದ ಪ್ರಕರಣ
ಕಾಳಿಂಗ ಸರ್ಪವನ್ನು ಸೆರೆಹಿಡಿದು ಬಂಧನದಲ್ಲಿರಿಸಿ ಛಾಯಾಚಿತ್ರ ತೆಗೆದಿದ್ದಾರೆ ಹಾಗೂ ಇತರರಿಗೂ ಅದರ ಫೋಟೊಗಳನ್ನು ತೆಗೆಯಲು ಅವಕಾಶ ಕಲ್ಪಿಸಿದ್ದಾರೆ ಎಂಬ ಆರೋಪದ ಮೇಲೆ 2025ರ ಸೆಪ್ಟೆಂಬರ್ 26ರಂದು ಆಗುಂಬೆ ವಲಯದ ಮೇಗರವಳ್ಳಿ ಅರಣ್ಯಾಧಿಕಾರಿ, ಡಾ. ಪಿ. ಗೌರಿಶಂಕರ್ ವಿರುದ್ಧ ದೂರು ದಾಖಲಿಸಿದ್ದರು.ಈ ದೂರಿನ ಆಧಾರದಲ್ಲಿ ವನ್ಯಜೀವಿ ಸಂರಕ್ಷಣಾ ಕಾಯ್ದೆ-1972ರ ಸೆಕ್ಷನ್ 2(1)(16), 9, 50, 51, 55 ಮತ್ತು 57ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ತನಿಖೆಯ ನಂತರ ಪ್ರಕರಣವು ತೀರ್ಥಹಳ್ಳಿ ಜೆಎಂಎಫ್ಸಿ ನ್ಯಾಯಾಲಯದ ಮುಂದೆ ಬಂದಿತ್ತು.
ಮೂರನೇ ವ್ಯಕ್ತಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದ ವಿಡಿಯೊದಲ್ಲಿ ಗೌರಿಶಂಕರ್ ಕಾಣಿಸಿಕೊಂಡಿದ್ದರು. ಈ ವಿಡಿಯೊ ಹಾಗೂ ಕಾಳಿಂಗ ಸರ್ಪದ ಛಾಯಾಚಿತ್ರಗಳನ್ನು ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳಾಗಿ ಪರಿಗಣಿಸಲಾಗಿತ್ತು. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟವಾಗಿದ್ದ ವಿಡಿಯೊ ಮತ್ತು ಫೋಟೊಗಳ ಆಧಾರದಲ್ಲಿ ತಮ್ಮ ವಿರುದ್ಧ ಪ್ರಕರಣ ದಾಖಲಿಸಿರುವುದನ್ನು ಪ್ರಶ್ನಿಸಿದ ಡಾ. ಪಿ. ಗೌರಿಶಂಕರ್, ದೋಷಾರೋಪಣಾ ಪಟ್ಟಿಯಲ್ಲಿರುವ ಯಾವುದೇ ದಾಖಲೆ ತಾವು ಕಾಳಿಂಗ ಸರ್ಪವನ್ನು ಬೇಟೆಯಾಡಿರುವುದನ್ನಾಗಲಿ, ಅಕ್ರಮವಾಗಿ ಸೆರೆಹಿಡಿದಿರುವುದನ್ನಾಗಲಿ ದೃಢಪಡಿಸುವುದಿಲ್ಲ ಎಂದು ಹೈಕೋರ್ಟ್ನಲ್ಲಿ ವಾದ ಮಂಡಿಸಿದ್ದರು.
ಅರಣ್ಯ ಪ್ರದೇಶದಲ್ಲಿದ್ದ ಹಾವು ಬಂಧನದಲ್ಲಿ ಇರಲಿಲ್ಲ ಎಂಬ ವಾದ
ಗೌರಿಶಂಕರ್ ಪರ ವಾದ ಮಂಡಿಸಿದ ವಕೀಲ ಅಕ್ಷಯ್ ಸ್ವಾಮಿ, ಅರಣ್ಯ ಇಲಾಖೆ ನ್ಯಾಯಾಲಯಕ್ಕೆ ಸಲ್ಲಿಸಿರುವ ಛಾಯಾಚಿತ್ರಗಳನ್ನೇ ಪರಿಶೀಲಿಸಿದರೆ ಕಾಳಿಂಗ ಸರ್ಪವು ತೆರೆದ ಅರಣ್ಯ ಪ್ರದೇಶದಲ್ಲಿ ಇರುವುದು ಕಂಡುಬರುತ್ತದೆ. ಆ ಹಾವನ್ನು ಪಂಜರದಲ್ಲಿ ಅಥವಾ ಬೇರೆ ಯಾವುದೇ ರೀತಿಯ ಬಂಧನದಲ್ಲಿ ಇರಿಸಲಾಗಿತ್ತು ಎಂಬುದನ್ನು ಆ ಚಿತ್ರಗಳು ತೋರಿಸುವುದಿಲ್ಲ ಎಂದು ನ್ಯಾಯಪೀಠಕ್ಕೆ ವಿವರಿಸಿದರು.
ಗೌರಿಶಂಕರ್ ಅವರು ಈ ಹಿಂದೆ ಅನೇಕ ಸಂದರ್ಭಗಳಲ್ಲಿ ಕಾಳಿಂಗ ಸರ್ಪಗಳು ಹಾಗೂ ಇತರ ಹಾವುಗಳ ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದಾರೆ. ಮನೆಗಳಿಗೆ ಪ್ರವೇಶಿಸಿದ ಹಾವುಗಳನ್ನು ರಕ್ಷಿಸುವ ಸಂದರ್ಭಗಳಲ್ಲಿಯೂ ಅವರ ನೆರವು ಪಡೆಯಲಾಗಿತ್ತು. ಇಂತಹ ಕಾರ್ಯಾಚರಣೆಗಳಲ್ಲಿ ರಕ್ಷಿಸಿದ ಹಾವುಗಳ ಕುರಿತು ಸಂಬಂಧಪಟ್ಟ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡುತ್ತಿದ್ದರು. ಈ ಬಗ್ಗೆ ಅರಣ್ಯಾಧಿಕಾರಿಗಳಿಂದ ಸ್ವೀಕೃತಿ ಪತ್ರಗಳನ್ನೂ ಪಡೆಯಲಾಗಿತ್ತು ಎಂದು ಅರ್ಜಿದಾರರ ಪರ ವಕೀಲರು ನ್ಯಾಯಾಲಯದ ಗಮನಕ್ಕೆ ತಂದರು.
ಪ್ರಕರಣದ ತನಿಖೆಯ ವೇಳೆ ಗೌರಿಶಂಕರ್ ಅವರ ವಶದಿಂದ ಯಾವುದೇ ಕಾಳಿಂಗ ಸರ್ಪವನ್ನು ವಶಪಡಿಸಿಕೊಂಡಿಲ್ಲ. ಬದಲಿಗೆ ಹಾವುಗಳ ರಕ್ಷಣೆಗೆ ಬಳಸುವ ಸ್ನೇಕ್ ರೆಸ್ಕ್ಯೂ ಬ್ಯಾಗ್ ಮತ್ತು ರೆಸ್ಕ್ಯೂ ಹುಕ್ ಮಾತ್ರ ವಶಪಡಿಸಿಕೊಳ್ಳಲಾಗಿದೆ ಎಂದು ಅರ್ಜಿದಾರರ ಪರ ವಕೀಲರು ವಾದಿಸಿದರು. ಹಾವುಗಳ ರಕ್ಷಣೆಗೆ ಬಳಸುವ ಉಪಕರಣಗಳು ದೊರೆತಿರುವುದರಿಂದ ಮಾತ್ರ ಕಾಳಿಂಗ ಸರ್ಪವನ್ನು ಅಕ್ರಮವಾಗಿ ಸೆರೆಹಿಡಿದಿದ್ದಾರೆ ಅಥವಾ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಅಪರಾಧ ಎಸಗಿದ್ದಾರೆ ಎಂದು ನಿರ್ಧರಿಸಲಾಗುವುದಿಲ್ಲ ಎಂಬುದು ಅರ್ಜಿದಾರರ ಪರ ಮಂಡಿಸಲಾದ ವಾದದ ಸಾರವಾಗಿತ್ತು.
ಸಾಮಾಜಿಕ ಜಾಲತಾಣದಲ್ಲಿ ಫೋಟೊ ಪ್ರಕಟಿಸಲು ಕಾರಣರಾಗಿದ್ದರು: ಸರ್ಕಾರದ ವಾದ
ರಾಜ್ಯ ಸರ್ಕಾರದ ಪರ ಹಾಜರಾದ ಹೆಚ್ಚುವರಿ ಸರ್ಕಾರಿ ಅಭಿಯೋಜಕ ಎಂ.ವಿ. ಅನೂಪ್ ಕುಮಾರ್ ಅವರು, ದೋಷಾರೋಪಣಾ ಪಟ್ಟಿಯಲ್ಲಿರುವ ದಾಖಲೆಗಳು ಗೌರಿಶಂಕರ್ ಅವರು ಇತರರಿಗೆ ಕಾಳಿಂಗ ಸರ್ಪದ ಛಾಯಾಚಿತ್ರಗಳನ್ನು ತೆಗೆಯಲು ಅವಕಾಶ ನೀಡಿರುವುದನ್ನು ಸೂಚಿಸುತ್ತವೆ ಎಂದು ವಾದಿಸಿದರು.ಅಲ್ಲದೆ, ಕಾಳಿಂಗ ಸರ್ಪದ ಫೋಟೊ ಹಾಗೂ ವಿಡಿಯೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಲು ಅರ್ಜಿದಾರರು ಕಾರಣರಾಗಿದ್ದರು. ಇಂತಹ ಕೃತ್ಯಗಳು ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಅಪರಾಧವಾಗುತ್ತವೆ ಎಂದು ಪ್ರಾಸಿಕ್ಯೂಷನ್ ಪರವಾಗಿ ಪ್ರತಿಪಾದಿಸಿದರು.
ಕಾಳಿಂಗ ಸರ್ಪಕ್ಕೆ ಹಾನಿ ಮಾಡಿದ ಆರೋಪವೂ ಇಲ್ಲ: ಹೈಕೋರ್ಟ್
ಪ್ರಕರಣದ ದಾಖಲೆಗಳನ್ನು ಪರಿಶೀಲಿಸಿದ ನ್ಯಾಯಮೂರ್ತಿ ಅನಂತ ರಾಮನಾಥ ಹೆಗಡೆ, ಪ್ರಕರಣದಲ್ಲಿ ಗೌರಿಶಂಕರ್ ಅವರು ಕಾಳಿಂಗ ಸರ್ಪವನ್ನು ಬಂಧನದಲ್ಲಿ ಇರಿಸಿದ್ದರು ಎಂಬ ನಿರ್ದಿಷ್ಟ ಆರೋಪವಿಲ್ಲದಿರುವುದನ್ನು ಗಮನಿಸಿದರು. ಅರ್ಜಿದಾರರು ಕಾಳಿಂಗ ಸರ್ಪವನ್ನು ಕೊಂದಿದ್ದಾರೆ ಅಥವಾ ಗಾಯಗೊಳಿಸಿದ್ದಾರೆ ಎಂಬ ಆರೋಪವೂ ಇಲ್ಲ. ಅದೇ ರೀತಿ ಕಾಳಿಂಗ ಸರ್ಪದ ಛಾಯಾಚಿತ್ರಗಳನ್ನು ಸ್ವತಃ ಗೌರಿಶಂಕರ್ ಸಾಮಾಜಿಕ ಜಾಲತಾಣಕ್ಕೆ ಅಪ್ಲೋಡ್ ಮಾಡಿದ್ದಾರೆ ಎಂಬ ಆರೋಪವೂ ದೂರಿನಲ್ಲಿಲ್ಲ ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ದಾಖಲಿಸಿದೆ.
ಕಾಳಿಂಗ ಸರ್ಪವನ್ನು ಗೌರಿಶಂಕರ್ ನಿಜವಾಗಿಯೂ ಸೆರೆಹಿಡಿದಿದ್ದರು ಎಂಬುದನ್ನು ದೃಢಪಡಿಸಲು ಪ್ರಕರಣದಲ್ಲಿ ಸಾಧ್ಯವಾಗಿಲ್ಲ. ದೋಷಾರೋಪಣಾ ಪಟ್ಟಿಯೊಂದಿಗೆ ಸಲ್ಲಿಸಿರುವ ಛಾಯಾಚಿತ್ರಗಳಲ್ಲಿ ಕಾಳಿಂಗ ಸರ್ಪವು ಅರಣ್ಯದ ತೆರೆದ ಪ್ರದೇಶದಲ್ಲಿರುವುದು ಕಂಡುಬಂದಿದ್ದು, ಅದನ್ನು ಬಂಧನದಲ್ಲಿ ಇರಿಸಲಾಗಿರಲಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಈ ಛಾಯಾಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟವಾಗಿದ್ದರೂ ಅವುಗಳನ್ನು ಗೌರಿಶಂಕರ್ ಅವರಿಂದ ವಶಪಡಿಸಿಕೊಂಡಿರುವುದಿಲ್ಲ ಎಂಬ ಅಂಶವನ್ನೂ ನ್ಯಾಯಪೀಠ ಗಮನಿಸಿದೆ. ಇದಲ್ಲದೆ, ಗೌರಿಶಂಕರ್ ಅವರು ಈ ಹಿಂದೆ ಅನೇಕ ಬಾರಿ ರಕ್ಷಿಸಿದ ಕಾಳಿಂಗ ಸರ್ಪಗಳ ಬಗ್ಗೆ ಸಂಬಂಧಪಟ್ಟ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿರುವ ಅಂಶ ದೋಷಾರೋಪಣಾ ಪಟ್ಟಿಯಲ್ಲಿಯೇ ಕಂಡುಬರುತ್ತದೆ ಎಂದು ನ್ಯಾಯಾಲಯ ಹೇಳಿದೆ. ಈ ಎಲ್ಲ ದಾಖಲೆಗಳನ್ನು ಪರಿಗಣಿಸಿದ ನ್ಯಾಯಪೀಠ, ಅರ್ಜಿದಾರರು ದೂರಿನಲ್ಲಿ ಉಲ್ಲೇಖಿಸಲಾದ ಅಪರಾಧಗಳನ್ನು ಎಸಗಿದ್ದಾರೆ ಎಂಬ ಅಭಿಪ್ರಾಯಕ್ಕೆ ಬರಲು ಸಾಧ್ಯವಿಲ್ಲ ಎಂದು ತೀರ್ಮಾನಿಸಿದೆ.
ತೀರ್ಥಹಳ್ಳಿ ನ್ಯಾಯಾಲಯದಲ್ಲಿದ್ದ ಸಂಪೂರ್ಣ ವಿಚಾರಣೆ ರದ್ದು
ಪ್ರಕರಣದಲ್ಲಿ ಸಲ್ಲಿಸಲಾದ ಸಾಕ್ಷ್ಯಾಧಾರಗಳು ಹಾಗೂ ವಾದಗಳನ್ನು ಪರಿಶೀಲಿಸಿದ ಹೈಕೋರ್ಟ್, ಗೌರಿಶಂಕರ್ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿಯನ್ನು ಪುರಸ್ಕರಿಸಿದೆ. ಆಗುಂಬೆ ವಲಯದ ಮೇಗರವಳ್ಳಿ ಅರಣ್ಯಾಧಿಕಾರಿ ದಾಖಲಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ತೀರ್ಥಹಳ್ಳಿಯ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್ಸಿ ನ್ಯಾಯಾಲಯದಲ್ಲಿ ಬಾಕಿಯಿದ್ದ ಸಂಪೂರ್ಣ ವಿಚಾರಣಾ ಪ್ರಕ್ರಿಯೆಯನ್ನು ರದ್ದುಪಡಿಸಲು ಆದೇಶಿಸಿದೆ. ಪ್ರಕರಣದಲ್ಲಿ ಉಲ್ಲೇಖಿಸಿದ್ದ ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಸೆಕ್ಷನ್ 2(1)(16), 9, 50, 51, 55 ಮತ್ತು 57ರ ಅಡಿಯ ಆರೋಪಗಳಿಗೆ ಸಂಬಂಧಿಸಿದ ಈ ವಿಚಾರಣೆಯನ್ನು ರದ್ದುಪಡಿಸಲಾಗಿದೆ.
ಈ ಪ್ರಕರಣವನ್ನ ಮುಂದೆ ಇಟ್ಟುಕೊಂಡು ಕಾಳಿಂಗದ ಬಗ್ಗೆ ವಿಶೇಷ ಅಧ್ಯಯನ ಮಾಡಿದ್ದ ಗೌರಿಶಂಕರ್ರವರನ್ನ ಕುಗ್ಗಿಸುವ ಪ್ರಯತ್ನಗಳನ್ನ ಕಾಣದ ಕೈಗಳು ನಡೆಸಿದ್ದವು. ಇದೀಗ ಹೈಕೋರ್ಟ್ ನೀಡಿರುವ ತೀರ್ಪು ಗೌರಿಶಂಕರ್ರವರಿಗೆ ಬಿಗ್ ರಿಲೀಫ್ ನೀಡಿದೆ. ದೂರು ಅರ್ಜಿಗಳನ್ನ ಸ್ವೀಕರಿಸುವ ಅರಣ್ಯ ಇಲಾಖೆ, ದೂರಿಗೆ ಸಂಬಂಧಿಸಿದ ದಾಖಲೆಗಳನ್ನ ಮೊದಲು ದೂರು ನೀಡುವವರಿಂದಲೇ ಪಡೆಯುವ ಪ್ರಯತ್ನ ನಡೆಸಬೇಕು. ಆಗಮಾತ್ರ ದೂರುಗಳಿಗೂ ಅರ್ಥವಿರುತ್ತದೆ ಎಂಬುದಕ್ಕೆ ಈ ಪ್ರಕರಣವೇ ಸಾಕ್ಷ್ಯವಾಗಿದೆ.
ತೀರ್ಪಿನ ಪ್ರಮುಖ ದಾಖಲೆಗಳು: ಕರ್ನಾಟಕ ಹೈಕೋರ್ಟ್, ಬೆಂಗಳೂರು;
