ಸುದ್ದಿಯ ಸ್ಥಳ: Shivamogga district, Karnataka
ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ : ನಗರದಲ್ಲಿ ಫ್ಲಿಪ್‌ಕಾರ್ಟ್ ಕಂಪನಿಯ ಉದ್ಯೋಗಿ ಎಂದು ನಂಬಿಸಿ, ಮೊಬೈಲ್ ಅಂಗಡಿ ನೌಕರರೊಬ್ಬರಿಗೆ ಲಕ್ಷಾಂತರ ರೂಪಾಯಿ ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ.
ಮೊಬೈಲ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿಗೆ ಅಪರಿಚಿತ ಮಹಿಳೆಯೊಬ್ಬಳು ಕರೆ ಮಾಡಿದ್ದಾಳೆ. ತನನ್ನು ಫ್ಲಿಪ್‌ಕಾರ್ಟ್ ರಿಸೇಟ್ ವಿಭಾಗದ ಉದ್ಯೋಗಿ ಸೋನಿಯಾ ಎಂದು ಪರಿಚಯಿಸಿಕೊಂಡ ಮಹಿಳೆ, ಕರ್ನಾಟಕ ಪ್ರದೇಶಕ್ಕೆ ಸದ್ಯಕ್ಕೆ ಯಾವುದೇ ಮ್ಯಾನೇಜರ್ ಇಲ್ಲವೆಂದೂ ಹಾಗೂ ಆರ್ಡರ್‌ಗಳ ಕುರಿತು ಸಂಶಯವಿದ್ದರೆ ಸಂಪರ್ಕಿಸುವಂತೆ ನಂಬಿಸಲೆತ್ನಿಸಿದ್ದಾಳೆ.
ಅದೇ ದಿನ ಸಂಜೆ 4:53 ರ ವೇಳೆಗೆ ಮತ್ತೆ ನಂಬರ್‌ನಿಂದ ಕರೆ ಮಾಡಿದ ಮಹಿಳೆ, ವ್ಯಾಲೆಟ್ ಖಾತೆಯಲ್ಲಿರುವ ಆರ್ಡರ್‌ಗಳ ಪರಿಶೀಲನೆ ನೆಪದಲ್ಲಿ ನೌಕರನ ಮನವೊಲಿಸಿದ್ದಾಳೆ. ಗೂಗಲ್ ಪಿಕ್ಸೆಲ್ 6ಎ ಮೊಬೈಲ್ ಆರ್ಡರ್ ಬಗ್ಗೆ ಮಾಹಿತಿ ಪಡೆದ ಬಳಿಕ, ಸಿಸ್ಟಮ್‌ನಲ್ಲಿ ಪರಿಶೀಲಿಸುವುದಾಗಿ ಹೇಳಿ ಒಟಿಪಿ (OTP) ಪಡೆದುಕೊಂಡಿದ್ದಾಳೆ.
ಒಟಿಪಿ ಪಡೆದ ಕೂಡಲೇ ಫ್ಲಿಪ್‌ಕಾರ್ಟ್ ವ್ಯಾಲೆಟ್ ಮೂಲಕ ಬರೋಬ್ಬರಿ ರೂ. 2,98,500/- ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಿಕೊಂಡು ವಂಚನೆ ಎಸಗಲಾಗಿದೆ. ಈ ಕುರಿತು ಆರೋಪಿ ಮಹಿಳೆಯ ವಿರುದ್ದ, ಯುವಕ ಶಿವಮೊಗ್ಗದ ಸಿ ಇ ಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾನೆ.
