ಶಿವಮೊಗ್ಗ ವಿಮಾನ ನಿಲ್ದಾಣದಿಂದ 13 ಮಾರ್ಗಗಳಲ್ಲಿ ವಿಮಾನ ಸೇವೆಗೆ ಹೊಸ ಪ್ರಸ್ತಾವನೆ! ಎಲ್ಲೆಲ್ಲಿಗೆ!? ಇಲ್ಲಿದೆ ಡಿಟೇಲ್ಸ್

ಹಂಚಿಕೊಳ್ಳಿ
WhatsApp Facebook X Telegram
pilot training
pilot training ಶಿವಮೊಗ್ಗದಲ್ಲಿ ಸಿಗಲಿದೆ ಪೈಲಟ್​ ತರಬೇತಿ

ಸುದ್ದಿಯ ಸ್ಥಳ: Bengaluru, Karnataka

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಶಿವಮೊಗ್ಗ ವಿಮಾನ ನಿಲ್ದಾಣದಿಂದ ದೇಶದ ವಿವಿಧ ನಗರಗಳಿಗೆ ವಿಮಾನ ಸಂಪರ್ಕ ಕಲ್ಪಿಸುವ ಉದ್ದೇಶದಿಂದ 13 ಮಾರ್ಗಗಳ ಪ್ರಸ್ತಾವನೆಯನ್ನು ಕರ್ನಾಟಕ ಸರ್ಕಾರ ಕೇಂದ್ರಕ್ಕೆ ಸಲ್ಲಿಸಿದೆ. ನಿಲ್ದಾಣ ಮುಚ್ಚುವ ಹಂತಕ್ಕೆ ಬಂದ ಸಂದರ್ಭದಲ್ಲಿ ಸಲ್ಲಿಸಿರುವ ಈ ಪ್ರಸ್ತಾವನೆಯಲ್ಲಿ ಶಿವಮೊಗ್ಗ ವಿಮಾನ ನಿಲ್ದಾಣದಿಂದ ಬೆಂಗಳೂರು, ಮುಂಬೈ, ಪುಣೆ, ಮೈಸೂರು, ಅಹಮದಾಬಾದ್, ಸೂರತ್, ಕೊಲ್ಹಾಪುರ, ಕೊಚ್ಚಿ, ಮಂಗಳೂರು ಹಾಗೂ ಕೊಯಮತ್ತೂರು ಸೇರಿದಂತೆ ಹಲವು ನಗರಗಳಿಗೆ ಕೇಂದ್ರ ಸರ್ಕಾರದ ಪ್ರಾದೇಶಿಕ ವಿಮಾನ ಸಂಪರ್ಕ ಯೋಜನೆಯಾದ ಆರ್‌ಸಿಎಸ್–ಉಡಾನ್ 6.0 (RCS-UDAN 6.0) ಅಡಿಯಲ್ಲಿ ಹೊಸ ಮಾರ್ಗಗಳನ್ನು ಪರಿಗಣಿಸುವಂತೆ ರಾಜ್ಯ ಸರ್ಕಾರ ಮನವಿ ಮಾಡಿದೆ.

ಇನ್ನೂ ಇದೇ ಸಂದರ್ಭದಲ್ಲಿ ಉಡಾನ್ ಯೋಜನೆಯಡಿ ನೀಡಲಾಗುತ್ತಿರುವ ಆರ್ಥಿಕ ನೆರವು ಸ್ಥಗಿತಗೊಂಡರೆ ಶಿವಮೊಗ್ಗದಿಂದ ಸ್ಟಾರ್ ಏರ್ ನಡೆಸುತ್ತಿರುವ ವಿಮಾನ ಸೇವೆಗಳು ಸ್ಥಗಿತಗೊಳ್ಳುವ ಸಾಧ್ಯತೆಯಿರುವುದನ್ನು ರಾಜ್ಯ ಸರ್ಕಾರ ಕೇಂದ್ರದ ಗಮನಕ್ಕೆ ತಂದಿದೆ. ರಾಜ್ಯ ಸರ್ಕಾರದ ಮೂಲಸೌಕರ್ಯ ಅಭಿವೃದ್ಧಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯ ಕಾರ್ಯದರ್ಶಿ ಡಾ. ವಿಶಾಲ್ ಆರ್. ಈ ವಿಚಾರದ ಕುರಿತಾಗಿ 2026ರ ಅಕ್ಟೋಬರ್ 29ರಂದು ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರದ (AAI) ಪ್ರಾದೇಶಿಕ ಸಂಪರ್ಕ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕರಿಗೆ ಈ ಸಂಬಂಧ ಪತ್ರ ಬರೆದಿದ್ದಾರೆ. ಈ ಬಗ್ಗೆ ವಾರ್ತಾ ಇಲಾಖೆಯ ಮೂಲಕ ಮಾಹಿತಿ ಹಂಚಿಕೊಳ್ಳಲಾಗಿದೆ.

₹583 ಕೋಟಿ ವೆಚ್ಚದ ವಿಮಾನ ನಿಲ್ದಾಣಕ್ಕೆ ಸೇವೆ ಸ್ಥಗಿತದ ಆತಂಕ

  • ಇಲಾಖೆಯ ಕಾರ್ಯದರ್ಶಿ ಡಾ. ವಿಶಾಲ್ ಆರ್. ರವರ ಪತ್ರದಲ್ಲಿನ ಪ್ರಮುಖ ಅಂಶಗಳನ್ನ ಗಮನಿಸುವುದಾದರೆ, ಪತ್ರದಲ್ಲಿ ಸುಮಾರು ₹583 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಿರುವ ಶಿವಮೊಗ್ಗ ವಿಮಾನ ನಿಲ್ದಾಣವು 2023ರ ಆಗಸ್ಟ್‌ನಿಂದ ಕಾರ್ಯಾಚರಣೆಯಲ್ಲಿದೆ.
  • ಮಲೆನಾಡು ಪ್ರದೇಶಕ್ಕೆ ವಿಮಾನ ಸಂಪರ್ಕ ಕಲ್ಪಿಸುವ ಪ್ರಮುಖ ಮೂಲಸೌಕರ್ಯವಾಗಿ ಈ ವಿಮಾನ ನಿಲ್ದಾಣವನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.
  • ಶಿವಮೊಗ್ಗ ವಿಮಾನ ನಿಲ್ದಾಣವು 4C ವರ್ಗದ ಸೌಲಭ್ಯ ಹೊಂದಿದ್ದು, ಏರ್‌ಬಸ್ A320 ಹಾಗೂ ಅದಕ್ಕೆ ಸಮಾನ ವರ್ಗದ ವಿಮಾನಗಳನ್ನು ನಿರ್ವಹಿಸುವ ಸಾಮರ್ಥ್ಯ ಹೊಂದಿದೆ.
  • ವಿಮಾನ ನಿಲ್ದಾಣದಲ್ಲಿ ಡಿವಿಒಆರ್ (DVOR) ಸೇರಿದಂತೆ ವಿಮಾನ ಸಂಚಾರಕ್ಕೆ ಅಗತ್ಯವಿರುವ ನ್ಯಾವಿಗೇಷನ್ ಸೌಲಭ್ಯಗಳ ಅಭಿವೃದ್ಧಿ ಹಾಗೂ ರಾತ್ರಿ ವೇಳೆ ವಿಮಾನ ಇಳಿಯುವ ವ್ಯವಸ್ಥೆಯನ್ನು 2026ರ ಡಿಸೆಂಬರ್ ವೇಳೆಗೆ ಕಾರ್ಯಾರಂಭಗೊಳಿಸುವ ನಿರೀಕ್ಷೆಯಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
  • ಶಿವಮೊಗ್ಗ ಮಾತ್ರವಲ್ಲದೆ ಚಿಕ್ಕಮಗಳೂರು, ಉತ್ತರ ಕನ್ನಡ, ದಾವಣಗೆರೆ, ಹಾವೇರಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಗೂ ಈ ವಿಮಾನ ನಿಲ್ದಾಣದಿಂದ ಪ್ರಯೋಜನವಾಗಲಿದೆ. ಮಲೆನಾಡು ಭಾಗದ ಆರ್ಥಿಕ ಚಟುವಟಿಕೆ, ಕೃಷಿ, ಶಿಕ್ಷಣ, ಪ್ರವಾಸೋದ್ಯಮ, ವ್ಯಾಪಾರ, ಹೂಡಿಕೆ ಮತ್ತು ಆರೋಗ್ಯ ಸೇವೆಗಳಿಗೆ ವಿಮಾನ ಸಂಪರ್ಕ ಮಹತ್ವದ್ದಾಗಿದೆ ಎಂದು ರಾಜ್ಯ ಸರ್ಕಾರ ವಿವರಿಸಿದೆ.

ನವೆಂಬರ್ 21ರಿಂದ ಸ್ಟಾರ್ ಏರ್ ವಿಮಾನ ಸೇವೆ ಸ್ಥಗಿತ

ಶಿವಮೊಗ್ಗದಿಂದ ತಿರುಪತಿ, ಹೈದರಾಬಾದ್ ಮತ್ತು ಗೋವಾಕ್ಕೆ ಸ್ಟಾರ್ ಏರ್ ಸಂಸ್ಥೆಯು ಹಿಂದಿನ ಉಡಾನ್ ಯೋಜನೆಯಡಿ ನೀಡಲಾಗುತ್ತಿದ್ದ ವಯಬಿಲಿಟಿ ಗ್ಯಾಪ್ ಫಂಡಿಂಗ್ (VGF) ಆರ್ಥಿಕ ನೆರವಿನೊಂದಿಗೆ ವಿಮಾನ ಸೇವೆಗಳನ್ನು ನಡೆಸುತ್ತಿದೆ. ಆದರೆ, ಇದೀಗ ಉಡಾನ್ ಯೋಜನೆಯಡಿ ದೊರೆಯುತ್ತಿದ್ದ ಆರ್ಥಿಕ ನೆರವು ಅಂತ್ಯಗೊಳ್ಳುತ್ತಿರುವ ಹಿನ್ನೆಲೆಯಲ್ಲಿ 2026ರ ನವೆಂಬರ್ 21ರಿಂದ ಈ ಮಾರ್ಗಗಳಲ್ಲಿನ ವಿಮಾನ ಸೇವೆಗಳನ್ನು ಸ್ಥಗಿತಗೊಳಿಸಲು ವಿಮಾನಯಾನ ಸಂಸ್ಥೆ ಉದ್ದೇಶಿಸಿದೆ. ಇದರಿಂದಾಗಿ ಶಿವಮೊಗ್ಗ ವಿಮಾನ ನಿಲ್ದಾಣ ವಾಣಿಜ್ಯ ವಿಮಾನ ಸೇವೆಗಳಿಲ್ಲದ ನಿಲ್ದಾಣವಾಗಿ ಮಾರ್ಪಡುವ ಸಾಧ್ಯತೆಯಿದೆ ಎಂದು ಪತ್ರದಲ್ಲಿ ಆತಂಕ ವ್ಯಕ್ತಪಡಿಸಿದ್ದಾರೆ. ಜೊತೆಯಲ್ಲಿ 13 ಹೊಸ ಮಾರ್ಗಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ.

ಬೆಂಗಳೂರು ಸೇರಿದಂತೆ 13 ವಿಮಾನ ಮಾರ್ಗಗಳಿಗೆ ಪ್ರಸ್ತಾವನೆ

  • ರಾಜ್ಯ ಸರ್ಕಾರ ಸಲ್ಲಿಸಿರುವ ಪ್ರಸ್ತಾವನೆಯಲ್ಲಿ ಶಿವಮೊಗ್ಗ ವಿಮಾನ ನಿಲ್ದಾಣದಿಂದ ಬೆಂಗಳೂರು, ಮುಂಬೈ, ಪುಣೆ, ಮೈಸೂರು, ಅಹಮದಾಬಾದ್, ಸೂರತ್, ಕೊಲ್ಹಾಪುರ, ಕೊಚ್ಚಿ, ಮಂಗಳೂರು ಹಾಗೂ ಕೊಯಮತ್ತೂರು ಸೇರಿದಂತೆ ಹಲವು ನಗರಗಳಿಗೆ ವಿಮಾನ ಸಂಪರ್ಕ ಕಲ್ಪಿಸುವ ಬಗ್ಗೆ ಪ್ರಸ್ತಾಪಿಸಲಾಗಿದೆ.
  • ಬೆಂಗಳೂರು–ಶಿವಮೊಗ್ಗ–ಬೆಂಗಳೂರು ಮಾರ್ಗದಲ್ಲಿ ವಾರದ 7 ದಿನ ವಿಮಾನ ಸೇವೆ ಇರಬೇಕು. ಬೆಳಗ್ಗೆ ಮತ್ತು ಸಂಜೆ ವಿಮಾನಗಳ ಕಾರ್ಯಾಚರಣೆಗೆ ಆದ್ಯತೆ ನೀಡುವಂತೆ ಕೋರಲಾಗಿದೆ.
  • ಹೈದರಾಬಾದ್–ಶಿವಮೊಗ್ಗ–ಗೋವಾ ಹಾಗೂ ಹೈದರಾಬಾದ್–ಶಿವಮೊಗ್ಗ–ತಿರುಪತಿ ಮಾರ್ಗಗಳಲ್ಲಿ ತಲಾ ವಾರಕ್ಕೆ 3 ದಿನ ವಿಮಾನ ಸೇವೆ ನಡೆಸುವ ಪ್ರಸ್ತಾವನೆ ನೀಡಲಾಗಿದೆ
  • ಶಿವಮೊಗ್ಗ–ಮುಂಬೈ–ಶಿವಮೊಗ್ಗ ಮಾರ್ಗದಲ್ಲಿ ವಾರಕ್ಕೆ 3 ದಿನ, ಶಿವಮೊಗ್ಗ–ಹಿಂಡನ್/ಜೆವಾರ್–ಶಿವಮೊಗ್ಗ ಮಾರ್ಗದಲ್ಲಿ ವಾರಕ್ಕೆ 1 ದಿನ ಹಾಗೂ ಶಿವಮೊಗ್ಗ–ಪುಣೆ–ಶಿವಮೊಗ್ಗ ಮಾರ್ಗದಲ್ಲಿ ವಾರಕ್ಕೆ 2 ದಿನ ವಿಮಾನ ಸೇವೆಗೆ ಶಿಫಾರಸು ಮಾಡಲಾಗಿದೆ.
  • ಶಿವಮೊಗ್ಗದಿಂದ ಮೈಸೂರು, ಅಹಮದಾಬಾದ್, ಕೊಲ್ಹಾಪುರ ಹಾಗೂ ಕೊಚ್ಚಿಗೆ ತಲಾ ವಾರಕ್ಕೆ 3 ದಿನ ವಿಮಾನ ಸೇವೆ ಪ್ರಸ್ತಾಪಿಸಲಾಗಿದೆ. ಸೂರತ್‌ಗೆ ವಾರಕ್ಕೆ 1 ದಿನ, ಮಂಗಳೂರು ಮತ್ತು ಕೊಯಮತ್ತೂರಿಗೆ ತಲಾ ವಾರಕ್ಕೆ 2 ದಿನ ವಿಮಾನ ಸಂಪರ್ಕ ಕಲ್ಪಿಸುವಂತೆ ಶಿಫಾರಸು ಮಾಡಲಾಗಿದೆ.
  • ಬೆಂಗಳೂರು, ಮುಂಬೈ ಹಾಗೂ ಹಿಂಡನ್/ಜೆವಾರ್ ಮಾರ್ಗಗಳಲ್ಲಿ ಬೆಳಗ್ಗೆ ಅಥವಾ ಸಂಜೆ ವಿಮಾನ ಕಾರ್ಯಾಚರಣೆಯನ್ನು ಪ್ರಸ್ತಾಪಿಸಲಾಗಿದ್ದು, ಉಳಿದ ಮಾರ್ಗಗಳಿಗೆ ನಿರ್ದಿಷ್ಟ ಸಮಯ ನಿಗದಿಪಡಿಸಿಲ್ಲ.

ಉಳಿದಂತೆ 2026ರ ಸೆಪ್ಟೆಂಬರ್ 19ರಂದು ರಾಜ್ಯ ಸರ್ಕಾರ ಮೈಸೂರು–ಮುಂಬೈ, ಮುಂಬೈ–ಮೈಸೂರು, ವಿದ್ಯಾನಗರ–ಮುಂಬೈ ಮತ್ತು ಮುಂಬೈ–ವಿದ್ಯಾನಗರ ಮಾರ್ಗಗಳನ್ನು ಆದ್ಯತೆಯ ಮಾರ್ಗಗಳಾಗಿ ಶಿಫಾರಸು ಮಾಡಿತ್ತು. ಇದರ ಜೊತೆಗೆ ರಾಜ್ಯದ ವಿವಿಧ ವಿಮಾನ ನಿಲ್ದಾಣಗಳಿಂದ ಹೆಚ್ಚುವರಿ ಮಾರ್ಗಗಳ ಪ್ರಸ್ತಾವನೆಗಳನ್ನೂ ಸಲ್ಲಿಸಲಾಗಿತ್ತು. ಇದೀಗ ಶಿವಮೊಗ್ಗ ವಿಮಾನ ನಿಲ್ದಾಣದ ವಿಶೇಷ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು 13 ಮಾರ್ಗಗಳನ್ನು ಕೇಂದ್ರದ ಉಡಾನ್ 6.0 ಯೋಜನೆಯಡಿ ಪರಿಗಣಿಸಬೇಕು ಎಂದು ಶಿಫಾರಸು ಮಾಡಲಾಗಿದೆ.

ಹಂಚಿಕೊಳ್ಳಿ
WhatsApp Facebook X Telegram
Ajjimane Ganesh
ಲೇಖಕರ ಬಗ್ಗೆ

Ajjimane Ganesh

Malenadu Today Contributor