ಶಿವಮೊಗ್ಗ : ನಾಳೆ ರಾಜ್ಯಾಧ್ಯಂತ ಶಾಲೆಗಳಲ್ಲಿ ಮದ್ಯಾಹ್ನದ ಬಿಸಿಯೂಟ ಬಂದ್​ : ಕಾರಣವೇನು ಗೊತ್ತಾ ? 

ಹಂಚಿಕೊಳ್ಳಿ
WhatsApp Facebook X Telegram
karnataka-mid-day-meal-workers-strike-on-nov-13
karnataka-mid-day-meal-workers-strike-on-nov-13

ಸುದ್ದಿಯ ಸ್ಥಳ: Shivamogga district, Karnataka

ಮಲೆನಾಡುಟುಡೆ ಸುದ್ದಿ / ಶಿವಮೊಗ್ಗ / ಶಾಲಾ ಬಿಸಿಯೂಟ ಸಿಬ್ಬಂದಿಯ ಉದ್ಯೋಗಕ್ಕೆ ಕುತ್ತು ತರುವಂತಹ ಪ್ರಯತ್ನಗಳನ್ನು ವಿರೋಧಿಸಿ, ಇದೇ ನವೆಂಬರ್ 13ರ ಶುಕ್ರವಾರದಂದು ರಾಜ್ಯವ್ಯಾಪಿ ಶಾಲೆಗಳಲ್ಲಿ ಅಡುಗೆ ತಯಾರಿಕೆಯನ್ನು ಬಂದ್​ ಮಾಡಿ ಮುಷ್ಕರ ನಡೆಸಲಾಗುವುದು ಎಂದು ಎಐಟಿಯುಸಿ ಸಂಯೋಜಿತ ಬಿಸಿಯೂಟ ತಯಾರಕರ ಒಕ್ಕೂಟದ ರಾಜ್ಯ ಪ್ರಧಾನ ಕಾರ್ಯದರ್ಶಿ ಜೆ.ಜೆ. ಅಕ್ಕಮ್ಮ ತಿಳಿಸಿದ್ದಾರೆ. 

ಬಿಸಿಯೂಟದ ಉಸ್ತುವಾರಿಯಿಂದ ಶಿಕ್ಷಕರನ್ನು ಮುಕ್ತಗೊಳಿಸಿ, ಕ್ಲಸ್ಟರ್ ಕಿಚನ್ ಕೇಂದ್ರಗಳ ಮೂಲಕ ಆಹಾರ ತಯಾರಿಕೆಯನ್ನು ಎನ್‌ಜಿಒ ಅಥವಾ ಖಾಸಗಿ ಸಂಸ್ಥೆಗಳಿಗೆ ಹಸ್ತಾಂತರಿಸುವಂತೆ ರಾಜ್ಯದ ಶಿಕ್ಷಕರ ಸಂಘಟನೆಯೊಂದು ಮಧ್ಯಾಹ್ನ ಉಪಾಹಾರ ಯೋಜನೆಯ ರಾಜ್ಯ ನಿರ್ದೇಶಕರಿಗೆ ಮನವಿ ಸಲ್ಲಿಸಿತ್ತು. ಇದನ್ನೇ ಅಸ್ತ್ರವನ್ನಾಗಿಸಿಕೊಂಡಿರುವ ನಿರ್ದೇಶಕರು, ಕಳೆದ ಎರಡೂವರೆ ದಶಕಗಳಿಂದ ಅತ್ಯಲ್ಪ ಗೌರವಧನಕ್ಕೆ ದುಡಿಯುತ್ತಿರುವ ಬಿಸಿಯೂಟ ಮಹಿಳೆಯರನ್ನು ಕೆಲಸದಿಂದ ವಜಾಗೊಳಿಸಿ ಖಾಸಗಿಯವರಿಗೆ ಮಣೆ ಹಾಕಲು ಸಂಚು ರೂಪಿಸಿದ್ದಾರೆ ಎಂದು ಆರೋಪಿಸಿದರು

ತಮ್ಮ ಉದ್ಯೋಗದ ಭದ್ರತೆಯನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ರಾಜ್ಯದ ಎಲ್ಲಾ ಬಿಸಿಯೂಟ ಸಿಬ್ಬಂದಿ ನವೆಂಬರ್ 13ರ ಶುಕ್ರವಾರ ಶಾಲೆಗಳಿಗೆ ಹಾಜರಾಗದೆ, ಅಡುಗೆ ಕೆಲಸವನ್ನು ಬಹಿಷ್ಕರಿಸಿ ತಮ್ಮ ಮನೆಗಳಲ್ಲೇ ಇದ್ದು ಸರ್ಕಾರದ ಧೋರಣೆಯ ವಿರುದ್ಧ ಪ್ರತಿಭಟನೆ ದಾಖಲಿಸಬೇಕು ಎಂದು ಸಂಘಟನೆ ಕರೆ ನೀಡಿದೆ. 

ಬಿಸಿಯೂಟ ತಯಾರಕ ಮಹಿಳೆಯರ ಜೀವನೋಪಾಯದ ಬಗ್ಗೆ ಕಿಂಚಿತ್ತೂ ಕಾಳಜಿ ವಹಿಸದ ಮಧ್ಯಾಹ್ನ ಉಪಾಹಾರ ಯೋಜನೆಯ ರಾಜ್ಯ ನಿರ್ದೇಶಕರು ಏಕಪಕ್ಷೀಯವಾಗಿ ನಿರ್ಧಾರ ಕೈಗೊಂಡಿದ್ದಾರೆ. ಈ ಕುರಿತು ರಾಜ್ಯದ ಎಲ್ಲಾ ಜಿಲ್ಲೆಗಳ ಶಿಕ್ಷಣಾಧಿಕಾರಿಗಳು ಹಾಗೂ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಂದ (ಆಡಳಿತ) ಅಭಿಪ್ರಾಯ ಕೋರಿರುವುದು ಖಂಡನೀಯ ಎಂದು ಒಕ್ಕೂಟ ಕಿಡಿಕಾರಿದೆ. 

ಅಧಿಕಾರಿಗಳ ಈ ಕಾರ್ಮಿಕ ವಿರೋಧಿ ಧೋರಣೆಯನ್ನು ಖಂಡಿಸಿ, ಶುಕ್ರವಾರದಂದು ರಾಜ್ಯಾದ್ಯಂತ ಒಂದು ದಿನದ ಮಟ್ಟಿಗೆ ಬಿಸಿಯೂಟ ತಯಾರಿಕೆಯನ್ನು ಸಂಪೂರ್ಣವಾಗಿ ನಿಲ್ಲಿಸುವ ಮೂಲಕ ಪ್ರತಿಭಟನೆ ನಡೆಸಲಾಗುವುದು ಎಂದು ಸಂಘಟನೆಯ ಪದಾಧಿಕಾರಿಗಳಾದ ಮಂಜುಳಾ, ಶಾರದಮ್ಮ ಹಾಗೂ ಸರೋಜಮ್ಮ ಜಂಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor