ಶಿವಮೊಗ್ಗ  : ಭಾರತೀಯ ಆಹಾರ ನಿಗಮ, ವಿಭಾಗೀಯ ಕಚೇರಿ ಶಿವಮೊಗ್ಗ ವತಿಯಿಂದ ವಿಶೇಷ ಅಭಿಯಾನ 6ರಡಿ ಯಶಸ್ವಿ ಸ್ವಚ್ಛತಾ ಅಭಿಯಾನ

ಹಂಚಿಕೊಳ್ಳಿ
WhatsApp Facebook X Telegram
FCI Shivamogga Special Campaign 6.0
FCI Shivamogga Special Campaign 6.0

 ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ :  ಭಾರತ ಸರ್ಕಾರದ ‘ವಿಷೇಷ ಅಭಿಯಾನ 6’ (Special Campaign 6.0) ಅಂಗವಾಗಿ, ಭಾರತೀಯ ಆಹಾರ ನಿಗಮದ (FCI) ಶಿವಮೊಗ್ಗ ವಿಭಾಗೀಯ ಕಚೇರಿಯ ವತಿಯಿಂದ 2026ರ ಅಕ್ಟೋಬರ್ 2ರಿಂದ ಅಕ್ಟೋಬರ್ 31ರವರೆಗೆ ವ್ಯಾಪಕ ಸ್ವಚ್ಛತಾ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ.

ವಿಭಾಗೀಯ ವ್ಯವಸ್ಥಾಪಕರಾದ  ಸಂಪತ್ ಭಕ್ತವತ್ಸಲಂ ಅವರ ನೇತೃತ್ವದಲ್ಲಿ ನಡೆದ ಈ ಅಭಿಯಾನವು ಶಿವಮೊಗ್ಗ, ಭದ್ರಾವತಿ, ಹಾಸನ ಮತ್ತು ಉಡುಪಿ ಪ್ರದೇಶಗಳ ವ್ಯಾಪ್ತಿಯಲ್ಲಿರುವ ಎಫ್‌ಸಿಐನ ಆರು ಆಹಾರ ಧಾನ್ಯ ಸಂಗ್ರಹಣಾ ಕೇಂದ್ರಗಳು ಹಾಗೂ ಗೋದಾಮುಗಳಲ್ಲಿ ಯಶಸ್ವಿಯಾಗಿ ಜರುಗಿದೆ. ವಿಶೇಷವಾಗಿ, ಭೌಗೋಳಿಕವಾಗಿ ದೂರವಿರುವ ಅಂಡ್ರೋತ್ ದ್ವೀಪದ ಗೋದಾಮಿನಲ್ಲಿಯೂ ಸ್ವಚ್ಛತಾ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಮೂಲಕ ಸ್ವಚ್ಛತೆಯ ಸಂದೇಶವನ್ನು ಎಲ್ಲೆಡೆ ಸಾರಲಾಗಿದೆ.

ಈ ಅಭಿಯಾನದ ಭಾಗವಾಗಿ ಕಚೇರಿ ಆವರಣಗಳು ಹಾಗೂ ಗೋದಾಮುಗಳ ಒಳ ಮತ್ತು ಹೊರಭಾಗಗಳಲ್ಲಿ ಸಂಪೂರ್ಣ ಸ್ವಚ್ಛತಾ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ಅನಗತ್ಯ ವಸ್ತುಗಳು ಹಾಗೂ ತ್ಯಾಜ್ಯಗಳನ್ನು ವೈಜ್ಞಾನಿಕವಾಗಿ ವಿಂಗಡಿಸಿ ವಿಲೇವಾರಿ ಮಾಡಲಾಗಿದ್ದು, ಹಳೆಯ ದಾಖಲೆಗಳು ಮತ್ತು ಕಡತಗಳನ್ನು ವ್ಯವಸ್ಥಿತವಾಗಿ ಜೋಡಿಸಲಾಗಿದೆ. ಇದರೊಂದಿಗೆ ಕೆಲಸದ ಸ್ಥಳಗಳನ್ನು ಸದಾ ಸ್ವಚ್ಛವಾಗಿಟ್ಟುಕೊಳ್ಳುವ ಕುರಿತು ಸಿಬ್ಬಂದಿ ವರ್ಗದಲ್ಲಿ ವಿಶೇಷ ಜಾಗೃತಿ ಮೂಡಿಸಲಾಗಿದೆ.

ಸಂಪತ್ ಭಕ್ತವತ್ಸಲಂ ಹಾಗೂ ಇಲಾಖೆಯ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿ ಈ ಸ್ವಚ್ಛತಾ ಕಾರ್ಯಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು, ಕಚೇರಿಯಲ್ಲಿ ಸ್ವಚ್ಛ ಹಾಗೂ ಸುಸ್ಥಿರ ವಾತಾವರಣವನ್ನು ನಿರ್ಮಿಸಲು ಶ್ರಮಿಸಿದ್ದಾರೆ. ಸ್ವಚ್ಛತೆಯು ಕೇವಲ ಒಂದು ತಿಂಗಳ ಅಭಿಯಾನಕ್ಕೆ ಸೀಮಿತವಾಗದೆ, ದೈನಂದಿನ ಕಾರ್ಯಚಟುವಟಿಕೆಗಳ ಅವಿಭಾಜ್ಯ ಅಂಗವಾಗಬೇಕು ಎಂಬ ಉದ್ದೇಶದಿಂದ ಈ ವಿಸ್ತೃತ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ.

ದೇಶದ ಆಹಾರ ಭದ್ರತೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಭಾರತೀಯ ಆಹಾರ ನಿಗಮವು, ಆಹಾರ ಧಾನ್ಯಗಳ ವೈಜ್ಞಾನಿಕ ಸಂಗ್ರಹಣೆ ಹಾಗೂ ಗುಣಮಟ್ಟದ ಸಂರಕ್ಷಣೆ ಜತೆಗೆ ಸ್ವಚ್ಛ ಗೋದಾಮುಗಳ ನಿರ್ವಹಣೆಗೆ ವಿಶೇಷ ಆದ್ಯತೆ ನೀಡುತ್ತಿದೆ. ಈ ನಿಟ್ಟಿನಲ್ಲಿ ‘ವಿಷೇಷ ಅಭಿಯಾನ 6’ ರಡಿ ಕೈಗೊಂಡಿರುವ ಈ ಸ್ವಚ್ಛತಾ ಕಾರ್ಯಗಳು ಸಂಸ್ಥೆಯಲ್ಲಿ ಶಿಸ್ತು, ನೈರ್ಮಲ್ಯ ಮತ್ತು ಉತ್ತಮ ಕಾರ್ಯನಿರ್ವಹಣೆಯ ಸಂಸ್ಕೃತಿಯನ್ನು ಮತ್ತಷ್ಟು ಬಲಪಡಿಸಿವೆ.

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor