ಶಿವಮೊಗ್ಗ : ಸಿದ್ದರಾಮಯ್ಯರವರ ವಿಡಿಯೋ ಇರುವುದೇ ಸುಳ್ಳಾದರೆ ಅವರನ್ನು ಮತ್ತೊಮ್ಮೆ ಸಿಎಂ ಮಾಡಿ : ಕೆಬಿ ಪ್ರಸನ್ನಕುಮಾರ್​​​

ಹಂಚಿಕೊಳ್ಳಿ
WhatsApp Facebook X Telegram
Reinstate Siddaramaiah If Sting Video Is False
Reinstate Siddaramaiah If Sting Video Is False

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರದ್ದು ಎನ್ನಲಾದ ವಿಡಿಯೋವನ್ನು ತೋರಿಸಿಯೇ ಅವರಿಂದ ಬಲವಂತವಾಗಿ ರಾಜೀನಾಮೆ ಪಡೆಯಲಾಗಿದೆ. ಒಂದು ವೇಳೆ ಆ ವಿಡಿಯೋ ಇರುವುದು ಸಂಪೂರ್ಣ ಸುಳ್ಳಾಗಿದ್ದರೆ, ಕಾಂಗ್ರೆಸ್ ಹೈಕಮಾಂಡ್ ಕೂಡಲೇ ಅವರನ್ನು ಮತ್ತೊಮ್ಮೆ ಮುಖ್ಯಮಂತ್ರಿ ಮಾಡಲಿ ಎಂದು ಮಾಜಿ ಶಾಸಕ ಕೆ.ಬಿ. ಪ್ರಸನ್ನಕುಮಾರ್ ಸವಾಲು ಹಾಕಿದ್ದಾರೆ. 

ನಗರದ ಪತ್ರಿಕಾ ಭವನದಲ್ಲಿಂದು ನಡೆದ  ಸುದ್ದಿಗೋಷ್ಠಿಯಲ್ಲಿ  ಮಾತನಾಡಿದ ಅವರು, ವಿಶೇಷವಾಗಿ ಈ ಸ್ಟಿಂಗ್ ಆಪರೇಶನ್ ವಿವಾದವನ್ನು ವಿರೋಧ ಪಕ್ಷದವರು ಆರಂಭಿಸಿಲ್ಲ ಬದಲಿಗೆ, ಸ್ವತಃ ಮುಖ್ಯಮಂತ್ರಿಗಳೇ ಸಚಿವ ಸಂಪುಟ ಸಭೆಯಲ್ಲಿ ಈ ವಿಷಯವನ್ನು ಮೊದಲ ಬಾರಿಗೆ ಪ್ರಸ್ತಾಪ ಮಾಡಿದರು. ಕ್ಯಾಬಿನೆಟ್ ಸಭೆಯಲ್ಲೇ ಸಚಿವರೊಬ್ಬರಿಗೆ ನೀನು ಹುಷಾರಾಗಿರು ಎಂದು ಎಚ್ಚರಿಕೆ ನೀಡಿರುವುದನ್ನು ನಾವು ಕಂಡಿದ್ದೇವೆ. ಅಲ್ಲಿಂದಲೇ ಈ ಎಲ್ಲಾ ಬೆಳವಣಿಗೆಗಳು ಮತ್ತು ವಿವಾದಗಳು ಹುಟ್ಟಿಕೊಂಡವು ಎಂದು ಅವರು ತಿಳಿಸಿದರು. 

ಸಿದ್ದರಾಮಯ್ಯ ಅವರನ್ನು ಕೇವಲ ಹಿಂದುಳಿದ ವರ್ಗಗಳ ನಾಯಕ ಎಂದು ಕರೆಯುತ್ತಿದ್ದರೂ, ಅವರು ತಮ್ಮ ಆಡಳಿತಾವಧಿಯಲ್ಲಿ ಸಮಾಜದ ಎಲ್ಲಾ ವರ್ಗದವರಿಗೂ ಸಮಾನವಾದ ಶಕ್ತಿ ಹಾಗೂ ಅವಕಾಶಗಳನ್ನು ಕೊಡುವ ಕೆಲಸ ಮಾಡಿದ್ದಾರೆ. ತಾನು ಶಾಸಕನಾಗಿದ್ದ ಅವಧಿಯಲ್ಲಿ ಅವರು ಪೂರ್ಣ ಪ್ರಮಾಣದ ಮುಖ್ಯಮಂತ್ರಿಯಾಗಿ ಯಾವುದೇ ಜಾತಿ ಅಥವಾ ವರ್ಗಕ್ಕೆ ಚ್ಯುತಿ ಬಾರದಂತೆ ಅತ್ಯಂತ ನಿಷ್ಪಕ್ಷಪಾತವಾಗಿ ನಡೆದುಕೊಂಡಿದ್ದರು. ಅಂತಹ ಒಬ್ಬ ಧೀಮಂತ ನಾಯಕನನ್ನು ಸ್ಟಿಂಗ್ ಆಪರೇಶನ್ ಮುಖಾಂತರ ರಾಜೀನಾಮೆ ನೀಡುವಂತೆ ಮಾಡಲಾಯಿತು. ಅವರು ಅಧಿಕಾರ ಕಳೆದುಕೊಂಡು ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ಸಂದರ್ಭದಲ್ಲೂ ಈ ರೀತಿಯ ಷಡ್ಯಂತ್ರಗಳು ಮುಂದುವರೆದವು. ಈ ಬಗ್ಗೆ ನಮ್ಮ ನಾಯಕ ಹೆಚ್.ಡಿ. ಕುಮಾರಸ್ವಾಮಿ ಅವರು ಹಿಂದೆಯೇ ಪ್ರಶ್ನಿಸಿದ್ದರು ಎಂದು ಪ್ರಸನ್ನಕುಮಾರ್ ನೆನಪಿಸಿಕೊಂಡರು. 

ವಿಡಿಯೋ ಕ್ಲಿಪ್‌ಗಳನ್ನು ವೀಕ್ಷಿಸಿದ ಸಣ್ಣಪುಟ್ಟ ವ್ಯಕ್ತಿಗಳನ್ನು ಬಂಧಿಸಿದ ಸರ್ಕಾರ, ಇದರ ಹಿಂದೆ ಇರುವ ಮೂಲ ಸೂತ್ರಧಾರರನ್ನು ಮಾತ್ರ ಇದುವರೆಗೆ ಬಂಧಿಸುವ ಗೋಜಿಗೆ ಹೋಗಿಲ್ಲ. ಈ ಪ್ರಕರಣದ ಕುರಿತು ರಾಜ್ಯ ಸರ್ಕಾರ ಗಂಭೀರ ತನಿಖೆ ನಡೆಸುತ್ತಿದೆಯೋ ಇಲ್ಲವೋ ಎಂಬ ಬಗ್ಗೆಯೂ ಯಾವುದೇ ಸ್ಪಷ್ಟತೆಯಿಲ್ಲ. ಆದ್ದರಿಂದ ಈ ಇಡೀ ಪ್ರಕರಣದ ಬಗ್ಗೆ ನಿಷ್ಪಕ್ಷಪಾತ ತನಿಖೆಯಾಗಬೇಕು. ನಮ್ಮ ರಾಜ್ಯದ ಗೃಹಮಂತ್ರಿಗಳು ನ್ಯಾಯಾಧೀಶರ ಮಟ್ಟದಲ್ಲಿ ತನಿಖೆ ನಡೆಸುವುದಾಗಿ ಹೇಳಿಕೆ ನೀಡಿದ್ದಾರೆ, ಆದರೆ ಅದರೊಂದಿಗೆ ಈ ಗಂಭೀರ ಪ್ರಕರಣವನ್ನು ಕೂಡಲೇ ಸಿಬಿಐ (CBI) ತನಿಖೆಗೆ ವಹಿಸಬೇಕು ಎಂದು ಅವರು ಒತ್ತಾಯಿಸಿದರು. 

ಸದ್ಯ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಯಾವುದೇ ರೀತಿಯ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸುತ್ತಿಲ್ಲ. ನೈಸ್ (NICE) ಹಾಗೂ ಬಿಡದಿ ಯೋಜನೆಗೆ ಸಂಬಂಧಿಸಿದ ಪ್ರಮುಖ ವಿಚಾರಗಳು ಪ್ರಸ್ತುತ ಸಂಪೂರ್ಣವಾಗಿ ಮೂಲೆಗುಂಪಾಗಿವೆ. ಸರ್ಕಾರದ ಈ ವೈಫಲ್ಯಗಳು ಮತ್ತು ಜನವಿರೋಧಿ ಧೋರಣೆಗಳನ್ನು ಮರೆಮಾಚುವ ಸಲುವಾಗಿಯೇ ಕಾಂಗ್ರೆಸ್ ಸರ್ಕಾರವು ಕಾಲಕಾಲಕ್ಕೆ ಇಂತಹ ಹೊಸ ಹಾದಿತಪ್ಪಿಸುವ ವಿಚಾರಗಳನ್ನು ಮುನ್ನೆಲೆಗೆ ತರುತ್ತಿದೆ ಎಂದು ಟೀಕಿಸಿದರು. 

ಮುಂದುವರಿದು ಮಾತನಾಡುತ್ತ, ಸಿದ್ದರಾಮಯ್ಯನವರ ನೈಜ ವಿಡಿಯೋ ಇರುವುದನ್ನು ತೋರಿಸಿಯೇ ಅವರಿಂದ ರಾಜೀನಾಮೆ ಪಡೆದುಕೊಳ್ಳಲಾಗಿದೆ. ಒಂದು ವೇಳೆ ಆ ವಿಡಿಯೋ ಇರುವುದು ಸುಳ್ಳು ಮತ್ತು ಕಲ್ಪನೆ ಮಾತ್ರವಾಗಿದ್ದರೆ, ಕಾಂಗ್ರೆಸ್ ನಾಯಕರು ಅವರನ್ನು ಮತ್ತೊಮ್ಮೆ ಸಿಎಂ ಸ್ಥಾನದಲ್ಲಿ ಕೂರಿಸಲಿ. ವಿಡಿಯೋವೇ ಇಲ್ಲದಿರುವಾಗ ಯಾವ ಆಧಾರದ ಮೇಲೆ ಮತ್ತು ಯಾವ ಒತ್ತಡಕ್ಕೆ ಮಣಿದು ಅವರ ಬಳಿ ರಾಜೀನಾಮೆ ಪಡೆದುಕೊಂಡಿರಿ ಎಂದು ಪ್ರಶ್ನಿಸಿದ ಅವರು, ಈ ಎಲ್ಲ ಬೆಳವಣಿಗೆಗಳ ಕುರಿತು ಕಾಂಗ್ರೆಸ್ ಹೈಕಮಾಂಡ್ ಯಾವ ಸ್ಪಷ್ಟನೆ ನೀಡುತ್ತದೆ ಎಂಬುದನ್ನು ಕಾದು ನೋಡಬೇಕಿದೆ ಎಂದರು.

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor