ಕೊಳೆತ ಚಮನ್ ಜಾತಿಯ ಮೀನಿನ ಘಾಟಿಗೆ ಪ್ರಜ್ಞೆ ತಪ್ಪಿ ಮೂವರ ದುರ್ಮರಣ!

ಹಂಚಿಕೊಳ್ಳಿ
WhatsApp Facebook X Telegram
Lightning Strike Trading advertisement Current shock : Rippon pete Dasara Sports cyber crimeThreat case
Lightning Strike Trading advertisement Rippon pete Dasara Sports cyber crime Threat case

ಮಲೆನಾಡು ಟುಡೆ ಸುದ್ದಿ / ಗೋಕರ್ಣ / ಮೀನುಗಾರಿಕೆ ಮುಗಿಸಿ ಬಂದ ಬೋಟ್ ಸ್ವಚ್ಛಗೊಳಿಸುವ ಸಂದರ್ಭದಲ್ಲಿ ಮೀನಿನ ಕೊಳೆತ ತ್ಯಾಜ್ಯದ ವಾಸನೆಯಿಂದ ಅಸ್ವಸ್ಥಗೊಂಡ ಮೂವರು ಕಾರ್ಮಿಕರು ಉಸಿರುಗಟ್ಟಿ ಮೃತಪಟ್ಟಿದ್ದು, ಮತ್ತೊಬ್ಬರು ಜೀವಾಪಾಯದಿಂದ ಪಾರಾದ ಘಟನೆ ಮಂಗಳವಾರ ಸಂಜೆ ಗೋಕರ್ಣದ ತದಡಿ ಬಂದರಿನಲ್ಲಿ ನಡೆದಿದೆ. ಕುಮಟಾದ ಒನ್ನಳ್ಳಿಯ ಖುಜೈನಾ ಎಂಬ ಮೀನುಗಾರಿಕಾ ಬೋಟ್ ಮಂಗಳವಾರ ಸಂಜೆ ಮೀನುಗಾರಿಕೆ ಮುಗಿಸಿ ಬಂದರಿಗೆ ಆಗಮಿಸಿತ್ತು. ಬೋಟ್‌ನಲ್ಲಿದ್ದ ಮೀನುಗಳನ್ನು ಇಳಿಸಿದ ಬಳಿಕ ಉಳಿದ ತ್ಯಾಜ್ಯವನ್ನು ತೆರವುಗೊಳಿಸಲು ಕಾರ್ಮಿಕರು ಮುಂದಾಗಿದ್ದರು.

ಈ ಸಂದರ್ಭದಲ್ಲಿ ಚಮನ್ ಜಾತಿಯ ಮೀನಿನ ಕೊಳೆತ ತ್ಯಾಜ್ಯದಿಂದ ಹೊರಬಂದ ತೀವ್ರ ದುರ್ವಾಸನೆಯ ಪರಿಣಾಮ ಕಾರ್ಮಿಕರು ಪ್ರಜ್ಞೆ ತಪ್ಪಿ ಬೋಟ್‌ನ ಕೋಲ್ಡ್ ಸ್ಟೋರೇಜ್‌ನ ಚಿಕ್ಕ ಹೊಂಡಕ್ಕೆ ಬಿದ್ದಿದ್ದಾರೆ. ಅವರನ್ನು ರಕ್ಷಿಸಲು ಒಬ್ಬರ ನಂತರ ಮತ್ತೊಬ್ಬರು ಮುಂದಾದಾಗ ಒಟ್ಟು ನಾಲ್ವರು ಅಸ್ವಸ್ಥಗೊಂಡಿದ್ದಾರೆ.

ತಕ್ಷಣ ನಾಲ್ವರನ್ನು ಆಂಬುಲೆನ್ಸ್ ಮೂಲಕ ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಗಿದೆ. ಆದರೆ, ಆಸ್ಪತ್ರೆಗೆ ತಲುಪುವಷ್ಟರಲ್ಲಿ ಮೂವರು ಮೃತಪಟ್ಟಿದ್ದರು. ಅಸ್ವಸ್ಥಗೊಂಡಿದ್ದ ಮತ್ತೊಬ್ಬ ಕಾರ್ಮಿಕನಿಗೆ ಆಡಳಿತ ವೈದ್ಯಾಧಿಕಾರಿ ಡಾ. ಜಗದೀಶ ನಾಯ್ಕ ಹಾಗೂ ಸಿಬ್ಬಂದಿ ತುರ್ತು ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಕುಮಟಾಕ್ಕೆ ಕಳುಹಿಸಿದ್ದಾರೆ.

ಮೃತಪಟ್ಟವರನ್ನು ಹೆನಿಯ ನೌಶಾದ, ಕುಮಟಾ ಕಾಗಾಲದ ಅಲಿರಾಜನ್ (35), ಒನ್ನಳ್ಳಿಯ ಅಮನ್ ಆಯೂಬ್ ಲಿಂಗಾಡೂ (18), ಅಮೀರ ಅಬ್ದುಲ್ ಉಂಚಳ್ಳಿ (20) ಎಂದು ಮೂಲ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಬೆಟ್ಟುಳಿಯ ಅಬ್ದುಲ್ (55) ಜೀವಾಪಾಯದಿಂದ ಪಾರಾಗಿದ್ದಾರೆ.

ಚಮನ್ ಜಾತಿಯ ಮೀನು ಕೊಳೆತಾಗ ತೀವ್ರ ದುರ್ವಾಸನೆ ಉಂಟಾಗುತ್ತದೆ. ಅದರಿಂದ ಹೊರಹೊಮ್ಮುವ ಗಾಳಿ ಮನುಷ್ಯನ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂದು ಮೀನುಗಾರರು ತಿಳಿಸಿದ್ದಾರೆ. ಬೋಟ್‌ನಲ್ಲಿದ್ದ ಕೊಳೆತ ಮೀನಿನ ತ್ಯಾಜ್ಯದ ತೀವ್ರ ವಾಸನೆಯಿಂದಲೇ ಕಾರ್ಮಿಕರು ಏಕಾಏಕಿ ಅಸ್ವಸ್ಥಗೊಂಡು ಪ್ರಜ್ಞೆ ತಪ್ಪಿ ಬಿದ್ದಿರಬಹುದು ಎಂದು ಶಂಕಿಸಲಾಗಿದೆ. ಆದರೆ, ಸಾವಿಗೆ ನಿಖರ ಕಾರಣವೇನು ಎಂಬುದನ್ನು ತಿಳಿದುಕೊಳ್ಳಲು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಕಾರವಾರ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ.

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Ajjimane Ganesh
ಲೇಖಕರ ಬಗ್ಗೆ

Ajjimane Ganesh

Malenadu Today Contributor