ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಒಕ್ಕಲಿಗ ಸಮುದಾಯಗಳ ರಾಷ್ಟ್ರಮಟ್ಟದ ವಧು-ವರರ ಸಮಾವೇಶವನ್ನು ನವೆಂಬರ್ 4ರಂದು ಬೆಳಗ್ಗೆ 10 ಗಂಟೆಗೆ ಶಿವಮೊಗ್ಗ ನಗರದ ಶರಾವತಿ ನಗರದ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಸಮುದಾಯ ಭವನದಲ್ಲಿ ಆಯೋಜಿಸಲಾಗಿದೆ ಈ ಸಂಬಂಧ ಒಕ್ಕಲಿಗರ ವಧು-ವರರ ಅನ್ವೇಷಣಾ ಕೇಂದ್ರದ ಕೆ.ಪಿ. ದಿವಾಕರ್ ಮಾಹಿತಿ ನೀಡಿದ್ದಾರೆ.
ಶಿವಮೊಗ್ಗದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆದಿಚುಂಚನಗಿರಿ ಶಾಖಾ ಮಠದ ಆಶ್ರಯದಲ್ಲಿ ವಿಶ್ವ ವಿವಾಹ ವೇದಿಕೆ, ಬೆಂಗಳೂರು ಹಾಗೂ ಒಕ್ಕಲಿಗರ ವಧು-ವರರ ಅನ್ವೇಷಣಾ ಕೇಂದ್ರದ ಸಂಯುಕ್ತ ಸಹಯೋಗದಲ್ಲಿ ಈ ಸಮಾವೇಶ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಒಕ್ಕಲಿಗ ಸಮುದಾಯದ ಯುವಕ-ಯುವತಿಯರಿಗೆ ಸೂಕ್ತ ಜೀವನ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳಲು ವೇದಿಕೆ ಕಲ್ಪಿಸುವುದು ಸಮಾವೇಶದ ಪ್ರಮುಖ ಉದ್ದೇಶವಾಗಿದೆ. ವಿವಾಹ ಸಂಬಂಧ ಹುಡುಕುತ್ತಿರುವ ಪೋಷಕರು ಒಂದೇ ವೇದಿಕೆಯಲ್ಲಿ ವಧು-ವರರ ಮಾಹಿತಿ ವಿನಿಮಯ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗುತ್ತದೆ ಎಂದು ವಿವರಿಸಿದರು.
ವಿವಾಹ ಸಂಬಂಧಕ್ಕಾಗಿ ಅಲೆದಾಡುವ ಬದಲು ಒಂದೇ ಸ್ಥಳದಲ್ಲಿ ವಧು-ವರರ ಪರಿಚಯ ಮಾಡಿಕೊಳ್ಳಲು ಈ ಸಮಾವೇಶ ನೆರವಾಗಲಿದೆ. ವಕೀಲರು, ವೈದ್ಯರು, ಮದುವೆಯಾಗಲು ಬಯಸುವವರು ಹಾಗೂ ವಯೋಮಿತಿ ಮೀರಿದ ವಧು-ವರರು ಕೂಡ ಸಮಾವೇಶದಲ್ಲಿ ಭಾಗವಹಿಸಬಹುದು ಎಂದು ತಿಳಿಸಿದರು.
ಸಮಾವೇಶದ ಕುರಿತು ಹೆಚ್ಚಿನ ಮಾಹಿತಿಗಾಗಿ 9606601848 ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ಕೆ.ಪಿ. ದಿವಾಕರ್ ತಿಳಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ರಾ.ಹ. ತಿಮ್ಮೇನಹಳ್ಳಿ, ಈಶ್ವರ ಇದ್ದರು.
