ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ : ಶಿವಮೊಗ್ಗದ ಹಿರಿಯ ಪತ್ರಕರ್ತ ಜೇಸುದಾಸ್ ಪಿ ಅವರಿಗೆ ಟಿಎನ್ಐಟಿ ಸೌತ್ ಇಂಡಿಯಾ ಮೀಡಿಯಾ ಅವಾರ್ಡ್’ ಒಲಿದಿದೆ. ದಕ್ಷಿಣ ಭಾರತದ ಅತಿದೊಡ್ಡ ಮಾಧ್ಯಮ ಪ್ರಶಸ್ತಿಯಾಗಿರುವ , ಟಿಎನ್ಐಟಿ ಸೌತ್ ಇಂಡಿಯಾ ಮೀಡಿಯಾ ಅವಾರ್ಡ್ ನಲ್ಲಿ ಈ ಸಲ ಟಿವಿ ಮತ್ತು ಪತ್ರಿಕಾ ರಂಗದ ಸುಮಾರು 80 ಸಾಧಕರಿಗೆ ಪ್ರಶಸ್ತಿ ಪ್ರದಾನವಾಗುತ್ತಿದ್ದು, ಜೇಸುದಾಸ್ ಅವರು ಬೆಸ್ಟ್ ರಿಪೋರ್ಟರ್ ಆರ್ಒಕೆ ವಿಭಾಗದಲ್ಲಿ ಈ ಗೌರವಕ್ಕೆ ಪಾತ್ರರಾಗಿದ್ದಾರೆ.
ಜಿಲ್ಲೆಯ ಪತ್ರಿಕೋದ್ಯಮದಲ್ಲಿ ತಮ್ಮದೇ ಆದ ಗುರುತು ಮೂಡಿಸಿರುವ ಇವರು, ತಮ್ಮ ವರದಿಗಳ ಮೂಲಕ ಹಲವಾರು ಸಮಸ್ಯೆಗಳಿಗೆ ಪರಿಹಾರ ಒದಗಿಸುವಲ್ಲಿ ಶ್ರಮಿಸಿದ್ದಾರೆ. ಈ ಹಾದಿಯಲ್ಲಿ ಎದುರಾದ ಆತಂಕಕಾರಿ ಸವಾಲುಗಳನ್ನು ಸಮರ್ಥವಾಗಿ ನಿಭಾಯಿಸಿರುವ ಜೇಸುದಾಸ್ ಅವರ ಮಾಧ್ಯಮ ಕ್ಷೇತ್ರದ ಸೇವೆ ಸುದೀರ್ಘವಾದದ್ದು. ಮೊಬೈಲ್ ಇಲ್ಲದ, ಕಚೇರಿಯ ಇಂಟರ್ನೆಟ್ ಲೀಸ್ಡ್ ಲೈನ್ ಮೂಲಕವೇ ಸುದ್ದಿ ಕಳುಹಿಸುತ್ತಿದ್ದ ಹಳೆಯ ಕಾಲಘಟ್ಟದಿಂದ ಆರಂಭಿಸಿ, ಕ್ಯಾಸೆಟ್, ಚಿಪ್ ತಂತ್ರಜ್ಞಾನ ಹಾಗೂ ಪ್ರಸ್ತುತ ವಾಟ್ಸಾಪ್, ಇನ್ಸ್ಟಾಗ್ರಾಮ್ ಪತ್ರಿಕೋದ್ಯಮದವರೆಗಿನ ಎಲ್ಲಾ ಬದಲಾವಣೆಗಳನ್ನು ಅಳವಡಿಸಿಕೊಂಡು ಅವರು ಕಾರ್ಯನಿರ್ವಹಿಸಿದ್ದಾರೆ.
ಜೇಸುದಾಸ್ ಅವರು 2006 ರಲ್ಲಿ ಪತ್ರಿಕಾ ವೃತ್ತಿಯನ್ನು ಆರಂಭಿಸಿದರು. ಜಿಲ್ಲೆಯ ಮೂಲೆಮೂಲೆಗಳ ನೈಜ ಸಮಸ್ಯೆಗಳನ್ನು ರಾಜ್ಯಮಟ್ಟಕ್ಕೆ ತಲುಪಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ. ಕಳೆದ 20 ವರ್ಷಗಳಿಗೂ ಅಧಿಕ ಕಾಲದಿಂದ ಮುದ್ರಣ ಹಾಗೂ ದೃಶ್ಯ ಮಾಧ್ಯಮದಲ್ಲಿ ಸಕ್ರಿಯರಾಗಿರುವ ಇವರು, ರಾಜ್ಯದ ವಿವಿಧ ಪ್ರತಿಷ್ಠಿತ ಸುದ್ದಿ ಸಂಸ್ಥೆಗಳಲ್ಲಿ ಹಿರಿಯ ವರದಿಗಾರರಾಗಿ ಜವಾಬ್ದಾರಿಯುತ ಸ್ಥಾನಗಳನ್ನು ನಿರ್ವಹಿಸಿದ್ದಾರೆ. 2006ರಿಂದ 2007ರವರೆಗೆ ‘ಈ-ಟಿವಿ’ಯ ಜಿಲ್ಲಾ ವರದಿಗಾರರಾಗಿ ಕಾರ್ಯನಿರ್ವಹಿಸಿದ್ದರು. ತದನಂತರ 2007ರಿಂದ 2015ರವರೆಗೆ ‘ಕಸ್ತೂರಿ ನ್ಯೂಸ್ 24’, ಹಾಗೂ 2015ರಿಂದ 2021ರವರೆಗೆ ಪ್ರಜಾ ಟಿವಿ’ಯಲ್ಲಿ ಹಿರಿಯ ವರದಿಗಾರರಾಗಿ ಸೇವೆ ಸಲ್ಲಿಸಿದ್ದರು. 2022ರಿಂದ ‘ಝೀ ಕನ್ನಡ ನ್ಯೂಸ್’ ವಾಹಿನಿಯ ಹಿರಿಯ ವರದಿಗಾರರಾಗಿ ಕೆಲಸ ಮಾಡುತ್ತಿರುವ ಇವರು, 2026ರ ಜೂನ್ ತಿಂಗಳಿನಿಂದ ‘ಎಎನ್ಐ’ ಸುದ್ದಿ ಸಂಸ್ಥೆಯ ಶಿವಮೊಗ್ಗದ ಹಿರಿಯ ವರದಿಗಾರರಾಗಿಯೂ ಪ್ರಸ್ತುತ ಕಾರ್ಯನಿರ್ವಹಿಸುತ್ತಿದ್ದಾರೆ.
ತನಿಖಾ ವರದಿಗಾರಿಕೆಯಲ್ಲಿ ವಿಶೇಷ ಆಸಕ್ತಿ ಹೊಂದಿರುವ ಜೇಸುದಾಸ್ ಅವರು, ಶಿವಮೊಗ್ಗದ ವಿವಿಧ ಹೋರಾಟಗಳ ಕುರಿತು ವರದಿಗಳನ್ನು ಸಿದ್ಧಪಡಿಸಿದ್ದಾರೆ. ವಿಶೇಷವಾಗಿ ನಕ್ಸಲ್ ಚಟುವಟಿಕೆಗಳು ಹಾಗೂ ಪೊಲೀಸ್ ಇಲಾಖೆಯ ಎನ್ಕೌಂಟರ್ ಕಾರ್ಯಾಚರಣೆಗಳ ಕುರಿತು ಆರಂಭದಿಂದ ಅಂತ್ಯದವರೆಗೂ ನೇರ ವರದಿಗಳನ್ನು ಹಾಗೂ ವಿಶೇಷ ಕಥನಗಳನ್ನು ಒದಗಿಸಿದ್ದಾರೆ. ಜಿಲ್ಲೆಯ ಪ್ರಮುಖ ಸುದ್ದಿಗಳನ್ನು ನಿಖರವಾಗಿ ಮತ್ತು ವೇಗವಾಗಿ ತಲುಪಿಸುವಲ್ಲಿ ಮುಂಚೂಣಿಯಲ್ಲಿರುವ ಇವರ ಅಪರಾಧ ವಿಭಾಗದ ವರದಿಗಾರಿಕೆ ಸ್ಪಷ್ಟತೆಯಿಂದ ಕೂಡಿರುತ್ತದೆ. ಮಲೆನಾಡಿನ ರಾಜಕೀಯ ಒಳನೋಟಗಳು ಹಾಗೂ ದಶಕಗಳ ಹಳೆಯ ಸಮಸ್ಯೆಗಳ ಸಂಕೀರ್ಣತೆಯನ್ನು ವಿಶ್ಲೇಷಿಸುವ ವರದಿಗಳು ಇವರಿಂದ ಪ್ರಕಟವಾಗಿವೆ. ತಮ್ಮ 20 ವರ್ಷಗಳ ಮಾಧ್ಯಮ ವೃತ್ತಿಯ ಅನುಭವಗಳು ಹಾಗೂ ವಿಶೇಷ ವರದಿಗಳನ್ನು ಒಟ್ಟುಗೂಡಿಸಿ ಪುಸ್ತಕ ರೂಪದಲ್ಲಿ ಹೊರತರುವ ಪ್ರಯತ್ನದಲ್ಲಿಯೂ ಅವರು ತೊಡಗಿಸಿಕೊಂಡಿದ್ದಾರೆ.
ವೃತ್ತಿಪರತೆಯ ಜೊತೆಗೆ ಸಾಮಾಜಿಕ ಹೊಣೆಗಾರಿಕೆಯನ್ನೂ ನಿಭಾಯಿಸುತ್ತಿರುವ ಜೇಸುದಾಸ್ ಅವರು, ಜಿಲ್ಲಾಡಳಿತ ಹಾಗೂ ಜಿಲ್ಲಾ ಪೊಲೀಸ್ ಇಲಾಖೆ ಸೇರಿದಂತೆ ವಿವಿಧ ಸಂಸ್ಥೆಗಳಿಗೆ ಅಗತ್ಯ ಸಂದರ್ಭಗಳಲ್ಲಿ ಸಲಹೆ ಹಾಗೂ ಜಿಲ್ಲೆಯ ಕುರಿತಾದ ವಿವರಣೆಗಳನ್ನು ನೀಡುತ್ತಾ ಬಂದಿದ್ದಾರೆ. ಪತ್ರಕರ್ತರ ಸಂಘಟನೆಯಲ್ಲಿ ಸಕ್ರಿಯರಾಗಿರುವ ಇವರು, ಶಿವಮೊಗ್ಗ ಪ್ರೆಸ್ ಟ್ರಸ್ಟ್ ನ ಖಜಾಂಚಿಯಾಗಿಯೂ ಸೇವೆ ಸಲ್ಲಿಸಿದ್ದಾರೆ. ಕುವೆಂಪು ವಿಶ್ವವಿದ್ಯಾಲಯದಿಂದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (M.A. in Mass Communication and Journalism) ಸ್ನಾತಕೋತ್ತರ ಪದವಿ ಪಡೆದಿದ್ದಾರೆ.
.
