ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ : ಕಡಿಮೆ ರೇಟ್‌ಗೆ ಮೊಬೈಲ್ ಆಕ್ಸೆಸರೀಸ್ ಕೊಡಿಸುತ್ತೇವೆ ಎಂದು ನಂಬಿಸಿ ಶಿವಮೊಗ್ಗದ ಮೊಬೈಲ್ ಶಾಪ್ ಮಾಲೀಕರಿಗೆ ವಂಚಕರು ಲಕ್ಷಾಂತರ ರೂಪಾಯಿ ವಂಚಿಸಿದ್ದಾರೆ.
ದೂರುದಾರರು ಶಿವಮೊಗ್ಗದಲ್ಲಿ ಮೊಬೈಲ್ ಶಾಪ್ ಇಟ್ಟುಕೊಂಡಿದ್ದರು. ಹೀಗೆ ಇನ್‌ಸ್ಟಾಗ್ರಾಮ್‌ನಲ್ಲಿ ರೀಲ್ಸ್ ನೋಡುತ್ತಿದ್ದಾಗ ಕೀಪ್ಯಾಡ್ ಮತ್ತು ಸ್ಮಾರ್ಟ್‌ಫೋನ್‌ಗಳನ್ನು ಭಾರತದಾದ್ಯಂತ ಮಾರಾಟ ಮಾಡಲು ಡೀಲರ್‌ಶಿಪ್ ಇದೆ ಎಂಬ ಜಾಹೀರಾತು ಕಂಡಿದೆ. ಅದಕ್ಕೆ ಅವರು ಲೈಕ್ ಮಾಡಿದ್ದು, ಲೈಕ್ ಮಾಡಿದ ಬೆನ್ನಲ್ಲೇ ದೂರುದಾರರಿಗೆ ಅಪರಿಚಿತ ಸಂಖ್ಯೆಯಿಂದ ಫೋನ್ ಕರೆ ಬಂದಿದೆ.
ಕರೆ ಸ್ವೀಕರಿಸಿದಾಗ ವಂಚಕರು, ನಾವು ದುಬೈನಲ್ಲಿ ಮೊಬೈಲ್ ಶಾಪ್ ಹೊಂದಿದ್ದೇವೆ. ನೀವು ಚೆನ್ನೈನಲ್ಲಿ ಮೊಬೈಲ್ ಆಕ್ಸೆಸರೀಸ್‌ಗಳನ್ನು ಕೊಂಡುಕೊಳ್ಳುವ ಬೆಲೆಗಿಂತ ಕಡಿಮೆ ದರಕ್ಕೆ ನಾವು ನಿಮಗೆ ಕೊಡುತ್ತೇವೆ ಎಂದು ತಿಳಿಸಿ ಫೋನ್ ಕಾಲ್ ಕಟ್ ಮಾಡಿದ್ದಾರೆ. ನಂತರ ಇನ್ನೊಂದು ದಿನ ಕರೆ ಮಾಡಿ, ಹೊಸದಾಗಿ 3 ಲಕ್ಷ ರೂ. ಮೌಲ್ಯದ ಮೊಬೈಲ್ ಮತ್ತು ಆಕ್ಸೆಸರೀಸ್‌ಗಳು ಬಂದಿದ್ದು, ನೀವು ನಮಗೆ 10% ಪ್ರೀ-ಪೇಮೆಂಟ್ ಮಾಡಿದರೆ ಕಡಿಮೆ ದರದಲ್ಲಿ ನಿಮ್ಮ ವಿಳಾಸಕ್ಕೆ ಕಳುಹಿಸಿಕೊಡುತ್ತೇವೆ ಎಂದು ತಿಳಿಸಿದ್ದಾರೆ. ಇದನ್ನು ನಂಬಿದ ದೂರುದಾರರು ಮೊದಲು 25,000 ರೂ.ಗಳನ್ನು ಫೋನ್ ಪೇ ಮಾಡಿದ್ದಾರೆ.
ಆದರೂ ಸಹ ನಂತರ ಮತ್ತೆ ಕರೆ ಮಾಡಿ, ಮೊಬೈಲ್ ಮತ್ತು ಆಕ್ಸೆಸರೀಸ್‌ಗಳನ್ನು ನಿಮ್ಮ ವಿಳಾಸಕ್ಕೆ ತಲುಪಿಸಬೇಕಾದರೆ ವಿವಿಧ ಚಾರ್ಜ್‌ಗಳನ್ನು ಪಾವತಿಸಬೇಕು ಎಂದು ಹೇಳಿ, ವಿವಿಧ ಕಂತುಗಳಲ್ಲಿ ದೂರುದಾರರಿಂದ ಒಟ್ಟು 2,79,000 ರೂ.ಗಳನ್ನು ವರ್ಗಾವಣೆ ಮಾಡಿಸಿಕೊಂಡಿದ್ದಾರೆ. ಇದರಿಂದ ಅನುಮಾನಗೊಂಡ ದೂರುದಾರರು ತಮ್ಮ ಪರಿಚಯಸ್ಥರಲ್ಲಿ ವಿಚಾರಿಸಿದಾಗ ತಾವು ಮೋಸ ಹೋಗಿರುವುದು ಅರಿವಿಗೆ ಬಂದಿದೆ.
ಈ ಹಿನ್ನೆಲೆಯಲ್ಲಿ, ಲಕ್ಷಾಂತರ ರೂಪಾಯಿ ಹಣ ವಂಚನೆ ಮಾಡಿದ ಆರೋಪಿಗಳನ್ನು ಪತ್ತೆಹಚ್ಚಿ ಕೊಡುವಂತೆ ಶಿವಮೊಗ್ಗದ ಸಿಇಎನ್ (CEN) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
