ಶಿವಮೊಗ್ಗದ ಕಾರಕೊಪ್ಪದ ಪ್ರಶಾಂತ ಆನೆ ಈಗ ಮೈಸೂರು ದಸರಾ ಅಂಬಾರಿ ಹೊರುವ ದಂಡನಾಯಕ!ಈತನ ಬಗ್ಗೆ ನಿಮಗೆ ಗೊತ್ತಾ

ಹಂಚಿಕೊಳ್ಳಿ
WhatsApp Facebook X Telegram
Mysuru Dasara Ambari Shivamogga-Origin Elephant Prashantha Selected
Mysuru Dasara Ambari Shivamogga-Origin Elephant Prashantha Selected

ಮಲೆನಾಡು ಟುಡೆ ಸುದ್ದಿ / ಮೈಸೂರು / ಮೈಸೂರು ದಸರಾ ಜಂಬೂಸವಾರಿ ಮೆರವಣಿಗೆಯಲ್ಲಿ ಚಿನ್ನದ ಅಂಬಾರಿ ಹೊರುವ ಜವಾಬ್ದಾರಿ ಈ ಬಾರಿ ದುಬಾರೆ ಶಿಬಿರದ 54 ವರ್ಷದ ಪ್ರಶಾಂತ ಆನೆಗೆ ಒಲಿದಿದೆ. ಸತತ 18 ವರ್ಷಗಳಿಂದ ದಸರಾ ಗಜಪಡೆಯಲ್ಲಿ ಭಾಗವಹಿಸುತ್ತಿರುವ ಪ್ರಶಾಂತ, ಇದೇ ಮೊದಲ ಬಾರಿಗೆ ಚಿನ್ನದ ಅಂಬಾರಿ ಹೊರುವ ಜವಾಬ್ದಾರಿಯನ್ನು ನಿರ್ವಹಿಸಲಿದ್ದಾನೆ. ವಿಶೇಷ ಅಂದರೆ ಈ ಪ್ರಶಾಂತ ಆನೆ ಸೆರೆ ಸಿಕ್ಕಿದ್ದು ಶಿವಮೊಗ್ಗದಲ್ಲಿ. ಶಿವಮೊಗ್ಗ ಜಿಲ್ಲೆಯ ಕಾರಕೊಪ್ಪ ಅರಣ್ಯ ಪ್ರದೇಶದಲ್ಲಿ 1993ರಲ್ಲಿ ಸೆರೆಹಿಡಿಯಲಾಗಿದ್ದ ಈ ಆನೆ ಇದೀಗ ಮೈಸೂರು ದಸರಾ ಅಂಬಾರಿ ಹೊರುವ ಆನೆಯಾಗಿ ಆಯ್ಕೆಯಾಗಿದೆ.

ನಿನ್ನೆ ದಿನ, ಮೈಸೂರು ಅರಮನೆ ಮಂಡಳಿ ಕಚೇರಿಯಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ಈ ಬಾರಿಯ ಜಂಬೂಸವಾರಿಯಲ್ಲಿ ಚಿನ್ನದ ಅಂಬಾರಿ ಹೊರುವ ಆನೆಯಾಗಿ ಪ್ರಶಾಂತನ ಹೆಸರನ್ನು ಅಧಿಕೃತವಾಗಿ ಪ್ರಕಟಿಸಿದರು. ಕಳೆದ 6 ವರ್ಷಗಳಿಂದ ಚಿನ್ನದ ಅಂಬಾರಿ ಹೊತ್ತಿದ್ದ ಕ್ಯಾಪ್ಟನ್ ಅಭಿಮನ್ಯುವಿಗೆ 60 ವರ್ಷ ತುಂಬಿರುವ ಹಿನ್ನೆಲೆಯಲ್ಲಿ ಈ ಬಾರಿ ಅಂಬಾರಿ ಹೊರುವ ಜವಾಬ್ದಾರಿಯಿಂದ ಮುಕ್ತಗೊಳಿಸಲಾಗಿದೆ. ಅಭಿಮನ್ಯುವಿನ ಬದಲಾಗಿ ಪ್ರಶಾಂತನನ್ನು ಆಯ್ಕೆ ಮಾಡಲಾಗಿದೆ.

ಶಿವಮೊಗ್ಗದ ಕಾರಕೊಪ್ಪ ಅರಣ್ಯದಲ್ಲಿ ಸೆರೆಸಿಕ್ಕಿದ್ದ ಪ್ರಶಾಂತ

ಅಂಬಾರಿ ಹೊರಲು ಆಯ್ಕೆಯಾಗಿರುವ ಪ್ರಶಾಂತ ಆನೆಯ ಮೂಲ ಶಿವಮೊಗ್ಗ ಜಿಲ್ಲೆಯ ಕಾರಕೊಪ್ಪ ಅರಣ್ಯ ಪ್ರದೇಶ. ಅರಣ್ಯ ಇಲಾಖೆ ಸಿಬ್ಬಂದಿ 1993ರಲ್ಲಿ ಈ ಆನೆಯನ್ನು ಸೆರೆಹಿಡಿದಿದ್ದರು. ಪ್ರಸ್ತುತ 54 ವರ್ಷ ವಯಸ್ಸಿನ ಪ್ರಶಾಂತ ಆನೆಯ ಎತ್ತರ 2.61 ಮೀಟರ್ ಹಾಗೂ ಉದ್ದ 3.46 ಮೀಟರ್ ಇದೆ. ಇದರ ದೇಹದ ತೂಕ 5,190 ಕೆ.ಜಿ. ಆಗಿದೆ. ಪ್ರಶಾಂತ ಆನೆಯ ಶಾಂತ ಸ್ವಭಾವ, ಬಲಿಷ್ಠ ದೇಹ ಹಾಗೂ ಅಂಬಾರಿ ಹೊರಲು ಅನುಕೂಲವಾಗುವ ಸಮತಟ್ಟಾದ ಬೆನ್ನು ಆಯ್ಕೆಯಲ್ಲಿ ಪ್ರಮುಖ ಪಾತ್ರ ವಹಿಸಿವೆ. ಉದ್ದನೆಯ ದಂತಗಳು ಹಾಗೂ ಗಾಂಭೀರ್ಯದ ನಡಿಗೆಯಿಂದಲೂ ಪ್ರಶಾಂತ ಗಮನ ಸೆಳೆದಿದೆ.

16 ವರ್ಷಗಳಿಂದ ಪ್ರಶಾಂತನ ಆರೈಕೆ ಮಾಡುತ್ತಿರುವ ಮಾವುತ

ಪ್ರಶಾಂತ ಆನೆಯನ್ನು ನೋಡಿಕೊಳ್ಳುತ್ತಿದ್ದ ಮಾವುತ ಮೃತಪಟ್ಟ ಬಳಿಕ ಕಳೆದ 16 ವರ್ಷಗಳಿಂದ ಜೆ.ಎ. ಚಿನ್ನಪ್ಪ ಎಂಬುವವರು ಅದರ ಆರೈಕೆಯನ್ನು ಮಾಡುತ್ತಿದ್ದಾರೆ. ಜೆ.ಎಚ್. ಚಂದ್ರ ಅವರು ಕಾವಾಡಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಅರಣ್ಯ ಸಂರಕ್ಷಣಾಧಿಕಾರಿ ರವಿಶಂಕರ್ ತಿಳಿಸಿದ್ದಾರೆ. ಅಂಬಾರಿ ಹೊರುವ ಆನೆಯ ಆಯ್ಕೆ ಪ್ರಕ್ರಿಯೆಯಲ್ಲಿ ಮಹೇಂದ್ರ ಆನೆಯನ್ನೂ ಪರಿಗಣಿಸಲಾಗಿತ್ತು. ಆದರೆ ಮಹೇಂದ್ರ ಎರಡು ಬಾರಿ ಮರದ ಅಂಬಾರಿ ಹೊತ್ತು ಬನ್ನಿಮಂಟಪ ತಲುಪುವಲ್ಲಿ ವಿಫಲವಾಗಿದ್ದರಿಂದ ಅದನ್ನು ಆಯ್ಕೆಯಿಂದ ಹೊರಗಿಡಲಾಯಿತು. ಮತ್ತೊಂದೆಡೆ ಧನಂಜಯ ಆನೆಯನ್ನು ಶ್ರೀರಂಗಪಟ್ಟಣ ದಸರಾದಲ್ಲಿ ಮರದ ಅಂಬಾರಿ ಹೊರಲು ಆಯ್ಕೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಪ್ರಶಾಂತ ಆನೆಯನ್ನು ಮೈಸೂರು ದಸರಾ ಜಂಬೂಸವಾರಿಯಲ್ಲಿ ಚಿನ್ನದ ಅಂಬಾರಿ ಹೊರುವ ಜವಾಬ್ದಾರಿಗೆ ಆಯ್ಕೆ ಮಾಡಲಾಗಿದೆ.

ಜಂಬೂಸವಾರಿ ಮೆರವಣಿಗೆಯಲ್ಲಿ ಚಿನ್ನದ ಅಂಬಾರಿ ಹೊರುವ ಪ್ರಶಾಂತ ಆನೆಯ ಅಕ್ಕಪಕ್ಕದಲ್ಲಿ ಕಾವೇರಿ ಹಾಗೂ ರೂಪಾ ಆನೆಗಳು ಕುಮ್ಕಿ ಆನೆಗಳಾಗಿ ಭಾಗವಹಿಸಲಿವೆ. ಈ ಹಿಂದೆ ಚಿನ್ನದ ಅಂಬಾರಿ ಹೊರುತ್ತಿದ್ದ ಅಭಿಮನ್ಯು ಈ ಬಾರಿ ನಿಶಾನೆ ಆನೆಯಾಗಿ ಭಾಗವಹಿಸಲಿದೆ. ಗೋಪಿ ನೌಫತ್ ಆನೆಯಾಗಿ ಕಾರ್ಯನಿರ್ವಹಿಸಲಿದ್ದು, ಏಕಲವ್ಯ, ಸುಗ್ರೀವ, ಶ್ರೀರಾಮ, ಶ್ರೀಕಂಠ, ಲಕ್ಷ್ಮಿ ಹಾಗೂ ಚೈತ್ರ ಆನೆಗಳು ಸಾಲಾನೆಗಳಾಗಿ ಜಂಬೂಸವಾರಿಯಲ್ಲಿ ಭಾಗವಹಿಸಲಿವೆ.

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Ajjimane Ganesh
ಲೇಖಕರ ಬಗ್ಗೆ

Ajjimane Ganesh

Malenadu Today Contributor