ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಕೊಂಕಣ ರೈಲ್ವೆಯ ಮುಂದುವರಿದ ಅಭಿವೃದ್ಧಿ ಕಾಮಗಾರಿಗಳಿಗೆ ಕೇಂದ್ರ ಸರ್ಕಾರ ₹9,000 ಕೋಟಿ ಮಂಜೂರು ಮಾಡಿದೆ. ಇದರೊಂದಿಗೆ ಕರ್ನಾಟಕದಲ್ಲಿ ₹52,000 ಕೋಟಿ ವೆಚ್ಚದ ವಿವಿಧ ರೈಲ್ವೆ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಉದ್ದೇಶಿಸಲಾಗಿದೆ. ಹಲವು ದಶಕಗಳಿಂದ ನೆನೆಗುದಿಗೆ ಬಿದ್ದಿರುವ ರೈಲ್ವೆ ಯೋಜನೆಗಳನ್ನು ಅನುಷ್ಠಾನಗೊಳಿಸುವುದರ ಜೊತೆಗೆ ಹೊಸ ರೈಲು ಮಾರ್ಗಗಳ ನಿರ್ಮಾಣ, ಮಾರ್ಗಗಳ ದ್ವಿಗುಣೀಕರಣ, ರೈಲ್ವೆ ನಿಲ್ದಾಣಗಳ ಆಧುನೀಕರಣ ಹಾಗೂ ಪ್ರಯಾಣಿಕರಿಗೆ ಅಗತ್ಯ ಮೂಲಸೌಕರ್ಯ ಒದಗಿಸಲು ಕೇಂದ್ರ ಸರ್ಕಾರ ಆದ್ಯತೆ ನೀಡುತ್ತಿದೆ ಎಂದು ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ತಿಳಿಸಿದರು.
ನಿನ್ನೆ ದಿನ ಶಿವಮೊಗ್ಗ ನಗರದ ಪ್ರವಾಸಿ ಮಂದಿರದಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ರೈಲ್ವೆ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ರೈಲ್ವೆ ಅಭಿವೃದ್ಧಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಕೈಗೊಂಡಿರುವ ಯೋಜನೆಗಳು ಹಾಗೂ ಅನುಷ್ಠಾನದ ಹಂತದಲ್ಲಿರುವ ಕಾಮಗಾರಿಗಳ ಕುರಿತು ಮಾಹಿತಿ ನೀಡಿದರು.
₹9,000 ಕೋಟಿ ಯಾವ ಅಭಿವೃದ್ಧಿ ಕಾಮಗಾರಿಗಳಿಗೆ?
ಕೊಂಕಣ ರೈಲ್ವೆಯ ಮುಂದುವರಿದ ಅಭಿವೃದ್ಧಿ ಕಾಮಗಾರಿಗಳಿಗೆ ₹9,000 ಕೋಟಿ ಮಂಜೂರು ಮಾಡಲಾಗಿದೆ ಎಂದು ಸಚಿವ ವಿ. ಸೋಮಣ್ಣ ತಿಳಿಸಿದರು. ಇದರೊಂದಿಗೆ ಕರ್ನಾಟಕದಲ್ಲಿ ₹52,000 ಕೋಟಿ ವೆಚ್ಚದಲ್ಲಿ ವಿವಿಧ ರೈಲ್ವೆ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ಮುಂದಿನ 25ರಿಂದ 30 ವರ್ಷಗಳ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ರೈಲ್ವೆ ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸುವ ಉದ್ದೇಶ ಹೊಂದಲಾಗಿದೆ ಎಂದರು.
ವಿಶೇಷವಾಗಿ ಮಂಗಳೂರು, ಉಡುಪಿ ಹಾಗೂ ಶಿವಮೊಗ್ಗ ಭಾಗಗಳ ರೈಲ್ವೆ ಸಂಪರ್ಕ ಮತ್ತು ಮೂಲಸೌಕರ್ಯ ಅಭಿವೃದ್ಧಿಗೆ ಸಂಬಂಧಿಸಿದ ಬೇಡಿಕೆಗಳನ್ನು ಪರಿಶೀಲಿಸಲಾಗಿದೆ. ಹೊಸ ರೈಲು ಮಾರ್ಗಗಳು, ಈಗಿರುವ ಮಾರ್ಗಗಳ ವಿಸ್ತರಣೆ ಮತ್ತು ನಿಲ್ದಾಣಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗುತ್ತಿದೆ ಎಂದು ವಿವರಿಸಿದರು.
ಆದರೆ, ಕೊಂಕಣ ರೈಲ್ವೆಗೆ ಮಂಜೂರಾಗಿರುವ ₹9,000 ಕೋಟಿಯಲ್ಲಿ ಯಾವ ಕಾಮಗಾರಿಗೆ ಎಷ್ಟು ಮೊತ್ತ ಮೀಸಲಿಡಲಾಗಿದೆ ಎಂಬ ಯೋಜನಾವಾರು ವಿವರಗಳನ್ನು ಸಚಿವರು ನೀಡಿಲ್ಲ. ರಾಜ್ಯದ ವಿವಿಧ ರೈಲ್ವೆ ಯೋಜನೆಗಳಿಗೆ ಸಂಬಂಧಿಸಿದ ₹52,000 ಕೋಟಿ ವೆಚ್ಚದ ಯೋಜನೆಗಳ ಕುರಿತು ಸಚಿವ ವಿ. ಸೋಮಣ್ಣ ಪ್ರತ್ಯೇಕವಾಗಿ ಮಾಹಿತಿ ನೀಡಿದ್ದಾರೆ.
ಶಿವಮೊಗ್ಗ–ಶಿಕಾರಿಪುರ–ರಾಣೆಬೆನ್ನೂರು ರೈಲ್ವೆ ಯೋಜನೆಗೆ ಹೊಸ ಟೆಂಡರ್
ಶಿವಮೊಗ್ಗ–ಶಿಕಾರಿಪುರ–ರಾಣೆಬೆನ್ನೂರು ರೈಲ್ವೆ ಯೋಜನೆಯ ಕಾಮಗಾರಿಗಳಿಗೆ ವೇಗ ನೀಡಲು ಕ್ರಮ ಕೈಗೊಳ್ಳಲಾಗಿದೆ. ಈ ಯೋಜನೆಯ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಿ, ಹಿಂದಿನ ಟೆಂಡರ್ ರದ್ದುಗೊಳಿಸಲು ನಿರ್ಧರಿಸಲಾಗಿದೆ. ಮುಂದಿನ 2 ತಿಂಗಳೊಳಗೆ ಹೊಸ ಟೆಂಡರ್ ಆಹ್ವಾನಿಸಿ ಕಾಮಗಾರಿಗಳನ್ನು ಚುರುಕುಗೊಳಿಸಲಾಗುವುದು ಎಂದು ವಿ. ಸೋಮಣ್ಣ ತಿಳಿಸಿದರು.
ಶಿವಮೊಗ್ಗ–ಬೀರೂರು ರೈಲ್ವೆ ಮಾರ್ಗದ ದ್ವಿಗುಣೀಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಸರ್ವೆ ಕಾರ್ಯ ನಡೆಯುತ್ತಿದೆ. ಶೃಂಗೇರಿ–ಶಿವಮೊಗ್ಗ ಹೊಸ ರೈಲು ಮಾರ್ಗದ ಪ್ರಸ್ತಾವನೆಯೂ ಪ್ರಗತಿಯಲ್ಲಿದೆ ಎಂದು ಮಾಹಿತಿ ನೀಡಿದರು.
ಶಿವಮೊಗ್ಗ–ಶೃಂಗೇರಿ–ಮಂಗಳೂರು ರೈಲ್ವೆ ಮಾರ್ಗದ ಪ್ರಗತಿ
ಶಿವಮೊಗ್ಗ–ಶೃಂಗೇರಿ–ಮಂಗಳೂರು ರೈಲ್ವೆ ಮಾರ್ಗಕ್ಕೆ 2018ರಲ್ಲಿ ಅನುಮೋದನೆ ನೀಡಲಾಗಿತ್ತು. ಈ ಯೋಜನೆಯ ಅಂತಿಮ ಹಂತದ ಸರ್ವೆ ಕಾರ್ಯಕ್ಕೆ 2025ರಲ್ಲಿಯೇ ಚಾಲನೆ ನೀಡಲಾಗಿದೆ. ಮಂಗಳೂರು, ಉಡುಪಿ ಮತ್ತು ಶಿವಮೊಗ್ಗ ಭಾಗಗಳ ರೈಲ್ವೆ ಸಂಪರ್ಕ ವಿಸ್ತರಣೆಗೆ ಸಂಬಂಧಿಸಿದ ವಿವಿಧ ಬೇಡಿಕೆಗಳನ್ನು ಕೇಂದ್ರ ಸರ್ಕಾರ ಪರಿಶೀಲಿಸಿದೆ ಎಂದು ಸಚಿವ ವಿ. ಸೋಮಣ್ಣ ತಿಳಿಸಿದರು.
ಇದರ ಜೊತೆಗೆ ಶಿವಮೊಗ್ಗ–ತೀರ್ಥಹಳ್ಳಿ–ಶೃಂಗೇರಿ ರೈಲ್ವೆ ಮಾರ್ಗದ ಸರ್ವೆ ನಡೆಸಲು ಸೂಚಿಸಲಾಗಿದೆ. ಚಿಕ್ಕಮಗಳೂರು–ಶೃಂಗೇರಿ ಹಾಗೂ ಹುಬ್ಬಳ್ಳಿ–ಅಂಕೋಲ ರೈಲ್ವೆ ಮಾರ್ಗಗಳ ಸರ್ವೆಗೂ ಸೂಚನೆ ನೀಡಲಾಗಿದೆ ಎಂದರು.
ತಾಳಗುಪ್ಪ–ಹೊನ್ನಾವರ ಹೊಸ ರೈಲು ಮಾರ್ಗಕ್ಕೆ ₹1,511 ಕೋಟಿ
ತಾಳಗುಪ್ಪ–ಹೊನ್ನಾವರ ಹೊಸ ರೈಲ್ವೆ ಮಾರ್ಗದ ನಿರ್ಮಾಣಕ್ಕೆ ₹1,511 ಕೋಟಿ ವೆಚ್ಚ ಅಂದಾಜಿಸಲಾಗಿದೆ. ಈ ಯೋಜನೆಗೆ 2025ರಲ್ಲಿಯೇ ಅನುಮೋದನೆ ನೀಡಲಾಗಿದೆ ಎಂದು ವಿ. ಸೋಮಣ್ಣ ತಿಳಿಸಿದರು.
ಅದೇ ರೀತಿ 178 ಕಿ.ಮೀ. ಉದ್ದದ ತಾಳಗುಪ್ಪ–ಸಿದ್ದಾಪುರ–ಸಿರ್ಸಿ–ಮುಂಡಗೋಡ–ಹುಬ್ಬಳ್ಳಿ ರೈಲ್ವೆ ಮಾರ್ಗದ ಸರ್ವೆ ಕಾರ್ಯವನ್ನು ಶೀಘ್ರದಲ್ಲಿ ಕೈಗೆತ್ತಿಕೊಳ್ಳಲಾಗುವುದು ಎಂದರು.
ಭದ್ರಾವತಿ–ಚಿಕ್ಕಬಾಸೂರು–ಚನ್ನಗಿರಿ ನಡುವಿನ 173 ಕಿ.ಮೀ. ವ್ಯಾಪ್ತಿಯ ರೈಲು ಮಾರ್ಗದ ಸರ್ವೆ ಕಾರ್ಯಕ್ಕೆ ಈಗಾಗಲೇ ಅನುಮೋದನೆ ನೀಡಲಾಗಿದೆ. ಈ ಮಾರ್ಗದ ಸರ್ವೆ ಕಾರ್ಯವೂ ಶೀಘ್ರದಲ್ಲಿಯೇ ಆರಂಭವಾಗಲಿದೆ ಎಂದು ಮಾಹಿತಿ ನೀಡಿದರು.
ಶಿವಮೊಗ್ಗ ರೈಲ್ವೆ ನಿಲ್ದಾಣದ ಅಭಿವೃದ್ಧಿಗೆ ₹50 ಕೋಟಿ
ರಾಜ್ಯದ ಪ್ರಮುಖ ರೈಲ್ವೆ ನಿಲ್ದಾಣಗಳನ್ನು ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಅಭಿವೃದ್ಧಿಪಡಿಸುವ ಯೋಜನೆಯನ್ನೂ ಕೇಂದ್ರ ಸರ್ಕಾರ ಕೈಗೆತ್ತಿಕೊಂಡಿದೆ. ತುಮಕೂರು ರೈಲ್ವೆ ನಿಲ್ದಾಣವನ್ನು ₹100 ಕೋಟಿ ಅಂದಾಜು ವೆಚ್ಚದಲ್ಲಿ ಹಾಗೂ ಶಿವಮೊಗ್ಗ ರೈಲ್ವೆ ನಿಲ್ದಾಣವನ್ನು ₹50 ಕೋಟಿ ಅಂದಾಜು ವೆಚ್ಚದಲ್ಲಿ ಆಧುನೀಕರಿಸಲು ಉದ್ದೇಶಿಸಲಾಗಿದೆ ಎಂದು ಸಚಿವರು ತಿಳಿಸಿದರು.
ಈಗಾಗಲೇ ಅಭಿವೃದ್ಧಿ ಕಾಮಗಾರಿಗಳು ಪೂರ್ಣಗೊಂಡಿರುವ ಸಾಗರ ಮತ್ತು ತಾಳಗುಪ್ಪ ರೈಲ್ವೆ ನಿಲ್ದಾಣಗಳನ್ನು ಉದ್ಘಾಟಿಸಲಾಗುವುದು. ಭದ್ರಾವತಿ ರೈಲ್ವೆ ನಿಲ್ದಾಣವನ್ನೂ ಶಿವಮೊಗ್ಗ ರೈಲ್ವೆ ನಿಲ್ದಾಣದ ಮಾದರಿಯಲ್ಲಿ ಅಭಿವೃದ್ಧಿಪಡಿಸಲಾಗುವುದು ಎಂದು ಭರವಸೆ ನೀಡಿದರು.
ಶಿವಮೊಗ್ಗ ಟರ್ಮಿನಲ್‌ಗೆ ₹97 ಕೋಟಿ ಮಂಜೂರು
ಶಿವಮೊಗ್ಗ ಟರ್ಮಿನಲ್ ನಿರ್ಮಾಣಕ್ಕೆ ₹97 ಕೋಟಿ ಮಂಜೂರು ಮಾಡಲಾಗಿದೆ. ಕೋಟೆಗಂಗೂರು ಕೋಚಿಂಗ್ ಡಿಪೋವನ್ನು ಮುಂದಿನ ವರ್ಷದ ಆರಂಭದಲ್ಲಿ ಲೋಕಾರ್ಪಣೆಗೊಳಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ವಿ. ಸೋಮಣ್ಣ ತಿಳಿಸಿದರು.
ಕಳೆದ 10 ವರ್ಷಗಳ ಅವಧಿಯಲ್ಲಿ ರಾಜ್ಯದಲ್ಲಿ ಸಾಕಷ್ಟು ಸಂಖ್ಯೆಯ ರೈಲ್ವೆ ಮೇಲ್ಸೇತುವೆಗಳು ಹಾಗೂ ಕೆಳಸೇತುವೆಗಳನ್ನು ನಿರ್ಮಿಸಲಾಗಿದೆ. ಇವುಗಳ ಕಾಮಗಾರಿಗಳನ್ನು ಕಡಿಮೆ ಅವಧಿಯಲ್ಲಿ ಪೂರ್ಣಗೊಳಿಸಿ ಸಾರ್ವಜನಿಕ ಬಳಕೆಗೆ ಮುಕ್ತಗೊಳಿಸಲಾಗಿದೆ ಎಂದರು.
ರೈಲ್ವೆ ಕ್ಷೇತ್ರದಲ್ಲಿ ಕೈಗೊಂಡಿರುವ ವಿವಿಧ ಯೋಜನೆಗಳ ವ್ಯವಸ್ಥಿತ ಅನುಷ್ಠಾನದ ಪರಿಣಾಮವಾಗಿ ರೈಲ್ವೆ ಅಪಘಾತಗಳ ಪ್ರಮಾಣ ಶೇ.0.01ಕ್ಕೆ ಇಳಿದಿದೆ ಎಂದು ಸಚಿವರು ತಿಳಿಸಿದರು.
ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ರೈಲ್ವೆ ಅಭಿವೃದ್ಧಿ ಕಾಮಗಾರಿಗಳು, ಮೂಲಸೌಕರ್ಯ ಯೋಜನೆಗಳು ಹಾಗೂ ಪ್ರಯಾಣಿಕರಿಗೆ ಒದಗಿಸಲಾಗುತ್ತಿರುವ ಸೌಲಭ್ಯಗಳ ಕುರಿತು ಪರಿಶೀಲನೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಸಂಸದ ಬಿ.ವೈ. ರಾಘವೇಂದ್ರ, ಶಾಸಕ ಎಸ್.ಎನ್. ಚನ್ನಬಸಪ್ಪ, ಮಾಜಿ ಸಚಿವ ಹಾಗೂ ಶಾಸಕ ಆರಗ ಜ್ಞಾನೇಂದ್ರ, ರೈಲ್ವೆ ಪ್ರಾದೇಶಿಕ ವ್ಯವಸ್ಥಾಪಕ ಉದಿತ್ ಮಿತ್ತಲ್, ಎಸ್. ದತ್ತಾತ್ರಿ, ಎ.ಎಸ್. ನವೀನ್ ಉಪಸ್ಥಿತರಿದ್ದರು.
