ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ ದಸರಾ ಉದ್ಘಾಟನೆಯಲ್ಲೇ ವಂದೇ ಮಾತರಂ ವಿವಾದ: ಪೂರ್ಣ ಗಾಯನಕ್ಕೆ ಕಾಂಗ್ರೆಸ್ ಆಕ್ಷೇಪ, ಬಿಜೆಪಿ ತೀವ್ರ ತಿರುಗೇಟು ಶಿವಮೊಗ್ಗ ನಗರದ ಕೋಟೆ ರಸ್ತೆಯ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಆಯೋಜಿಸಲಾಗಿದ್ದ ದಸರಾ ಉದ್ಘಾಟನಾ ಸಮಾರಂಭದಲ್ಲಿ ವಂದೇ ಮಾತರಂ ಗೀತೆಯನ್ನು ಪೂರ್ಣವಾಗಿ ಹಾಡಿದ ವಿಚಾರವು ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರ ನಡುವೆ ಭಾರಿ ವಾಗ್ವಾದ ಹಾಗೂ ವಿವಾದಕ್ಕೆ ಕಾರಣವಾಯಿತು. ರಾಜ್ಯ ಸರ್ಕಾರದ ನಿರ್ದೇಶನದಂತೆ 2 ಚರಣಗಳನ್ನು ಮಾತ್ರ ಹಾಡಬೇಕಿತ್ತು ಎಂದು ಆಕ್ಷೇಪಿಸಿದ ಕಾಂಗ್ರೆಸ್ ಮುಖಂಡರು ಕಾರ್ಯಕ್ರಮವನ್ನು ಬಹಿಷ್ಕರಿಸಿ ವೇದಿಕೆಯಿಂದ ಹೊರನಡೆದರು. ಅಲ್ಲದೆ ಪಾಲಿಕೆ ಆಯುಕ್ತರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದರು. ಮತ್ತೊಂದೆಡೆ, ವಂದೇ ಮಾತರಂ ಪೂರ್ಣವಾಗಿ ಹಾಡಿರುವುದನ್ನು ಸಮರ್ಥಿಸಿಕೊಂಡ ಬಿಜೆಪಿ ನಾಯಕರು ಮತ್ತು ಸಂಸದ ಬಿ.ವೈ. ರಾಘವೇಂದ್ರ ಅವರು ಕಾಂಗ್ರೆಸ್ ನಡೆಯನ್ನು ತೀವ್ರವಾಗಿ ಖಂಡಿಸಿದರು. ಈ ವಿವಾದದ ಬೆನ್ನಲ್ಲೇ ಮಹಾನಗರ ಪಾಲಿಕೆ ಆಯುಕ್ತರು ತುರ್ತು ಸಭೆ ನಡೆಸಿ ಮುಂದಿನ ಕಾರ್ಯಕ್ರಮಗಳಲ್ಲಿ ಸರ್ಕಾರದ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚನೆ ನೀಡಿದ್ದಾರೆ.
ಪಿ ಡಿಎಫ್ ನಲ್ಲಿರುವ ಪ್ರಮುಖ ಸುದ್ದಿಗಳು
- ಬರಗಾಲ ನಿರ್ವಹಣೆಯಲ್ಲಿ ಸರ್ಕಾರ ವಿಫಲ – ನಿಖಿಲ್ ಕುಮಾರಸ್ವಾಮಿ ಆಕ್ರೋಶ: ಜೆಡಿಎಸ್ ರೈತ ಸ್ವಾಭಿಮಾನ ಯಾತ್ರೆಯ ಅಂಗವಾಗಿ ಶಿವಮೊಗ್ಗ ಗ್ರಾಮಾಂತರದ ವಿವಿಧೆಡೆ ಒಣಗಿದ ಮೆಕ್ಕೆಜೋಳದ ಬೆಳೆಗಳನ್ನು ಪರಿಶೀಲಿಸಿದ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಬೆಳೆ ನಷ್ಟಕ್ಕೆ ಎಕರೆಗೆ ಕನಿಷ್ಠ ₹25,000 ಪರಿಹಾರ ನೀಡಬೇಕು ಹಾಗೂ ಎಲ್ಲಾ ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಬೇಕೆಂದು ಆಗ್ರಹಿಸಿ, ನಿರ್ಲಕ್ಷಿಸಿದರೆ ವಿಧಾನಸೌಧದ ಮುಂದೆ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದ್ದಾರೆ.
- ರೈಲು ಪ್ರಯಾಣಿಕರಿಗೆ ದಸರಾ ಕೊಡುಗೆ – ಆಧುನಿಕ ಎಲ್ಎಚ್ಬಿ ಬೋಗಿಗಳು: ಶಿವಮೊಗ್ಗ ಮತ್ತು ಮಲೆನಾಡು ಭಾಗದ ರೈಲು ಪ್ರಯಾಣಿಕರಿಗೆ ನವರಾತ್ರಿ ಹಾಗೂ ದಸರಾ ಹಬ್ಬದ ವಿಶೇಷ ಕೊಡುಗೆಯಾಗಿ ಅಕ್ಟೋಬರ್ 20ರಿಂದ ಮೈಸೂರು-ತಾಳಗುಪ್ಪ ಹಾಗೂ ತಾಳಗುಪ್ಪ-ಶಿವಮೊಗ್ಗ ಎಕ್ಸ್ಪ್ರೆಸ್ ರೈಲುಗಳಿಗೆ ಆಧುನಿಕ ಎಲ್ಎಚ್ಬಿ ಬೋಗಿಗಳನ್ನು ಅಳವಡಿಸಲಾಗುವುದು ಎಂದು ಸಂಸದ ಬಿ.ವೈ. ರಾಘವೇಂದ್ರ ತಿಳಿಸಿದ್ದಾರೆ.
- ಸಾಗರದಲ್ಲಿ ಜಾನುವಾರು ಕಳ್ಳತನ – ಆರೋಪಿ ಸೆರೆ: ಸಾಗರ ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಹೆಚ್ಚುತ್ತಿರುವ ಜಾನುವಾರು ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ಪೊಲೀಸರು ವಿಶೇಷ ತಂಡ ರಚಿಸಿ ತನಿಖೆ ನಡೆಸಿ ಭದ್ರಾವತಿ ಮೂಲದ ಓರ್ವ ಆರೋಪಿಯನ್ನು ವಶಕ್ಕೆ ಪಡೆದಿದ್ದು, ಮತ್ತೊಬ್ಬ ಪರಾರಿಯಾಗಿದ್ದಾನೆ ಎಂದು ಡಿವೈಎಸ್ಪಿ ಡಾ. ಬೆನಕ ಪ್ರಸಾದ್ ಮಾಹಿತಿ ನೀಡಿದ್ದಾರೆ.
- ಸೊರಬದಲ್ಲಿ ಬಿರುಗಾಳಿ ಮಳೆ ಹಾನಿ: ಸೊರಬ ತಾಲೂಕಿನ ಚೀಲನೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಂಭವಿಸಿದ ಬಿರುಗಾಳಿ ಮತ್ತು ಮಳೆಯಿಂದಾಗಿ ಬೃಹತ್ ಮರಗಳು ವಿದ್ಯುತ್ ತಂತಿಗಳ ಮೇಲೆ ಉರುಳಿಬಿದ್ದು ಮೂರು ವಿದ್ಯುತ್ ಕಂಬಗಳು ಧರೆಗುರುಳಿದ ಪರಿಣಾಮ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿದೆ ಮತ್ತು ಒಂದು ಮನೆಯ ಮೇಲ್ಛಾವಣಿ ತೂರಿಹೋಗಿದೆ.
- ಸಾಗರ ತಾಲೂಕನ್ನು ಬರಪೀಡಿತವೆಂದು ಘೋಷಿಸಲು ಆಗ್ರಹ: ಸಾಗರ ಹಾಗೂ ಹೊಸನಗರ ತಾಲೂಕುಗಳಲ್ಲಿ ಬೆಳೆ ನಾಶ ಪ್ರಕರಣಗಳು ಹೆಚ್ಚುತ್ತಿದ್ದು, ಕೂಡಲೇ ಈ ತಾಲೂಕುಗಳನ್ನು ಬರಪೀಡಿತವೆಂದು ಘೋಷಿಸಬೇಕು ಹಾಗೂ ರೈತರ ಬೇಡಿಕೆ ಈಡೇರದಿದ್ದರೆ ಅಕ್ಟೋಬರ್ 13ರಿಂದ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟಿಸುವುದಾಗಿ ಜಿಲ್ಲಾ ರೈತ ಸಂಘ ಎಚ್ಚರಿಕೆ ನೀಡಿದೆ.
ಈ ಮೇಲಿನ ಎಲ್ಲಾ ಸುದ್ದಿಗಳ ಸಂಪೂರ್ಣ ವಿವರ (ಇ-ಲಿಂಕ್) ನಲ್ಲಿದೆ
