ಶಿಕಾರಿಪುರ : ಈ ಊರಲ್ಲಿ ಬೀಗರ ಊಟ ಆಯೋಜಿಸಿದ್ರೆ 1 ಲಕ್ಷ, ಊಟ ಮಾಡಿದ್ರೆ 50 ಸಾವಿರ ದಂಡ ? ಏನಿದು ಸುದ್ದಿ

ಹಂಚಿಕೊಳ್ಳಿ
WhatsApp Facebook X Telegram
ಶಿಕಾರಿಪುರದ ಈ ಪ್ರದೇಶದಲ್ಲಿ ಬೀಗರ ಊಟ ನಿಶೇಧ
ಶಿಕಾರಿಪುರದ ಈ ಪ್ರದೇಶದಲ್ಲಿ ಬೀಗರ ಊಟ ನಿಶೇಧ

ಮಲೆನಾಡು ಟುಡೆ ಸುದ್ದಿ/ ಶಿಕಾರಿಪುರ : ಏನೋ ಮದ್ವೆಯಂತೆ ಬೀಗ್ರು ಊಟ ಜೋರಾ? ಎಷ್ಟ್ ಮರಿ ಹೊಡ್ಸಿದಿಯಾ? ಆಚೆ ಮನೆ ಶಂಕ್ರಣ್ಣ ಹೋದ್​ ಸಲ ಮದ್ವೆಗೆ 4 ಮರಿ ಹೊಡ್ಸಿದ್ದ, ನಿಂದ್​ ಎಷ್ಟಿದೆ? ಇದು ಅನೇಕ ಕಡೆಗಳಲ್ಲಿ ಮದುವೆಯ ಬೀಗರು ಊಟದ ಸಂದರ್ಭದಲ್ಲಿ ಸಾಮಾನ್ಯವಾಗಿ ಕೇಳಿ ಬರೋ ಮಾತು. ಆದರೆ, ಇದೊಂದು ಊರಲ್ಲಿ ಇನ್ಮುಂದೆ ಬೀಗ್ರು ಊಟ ಆಯೋಜನೆ ಮಾಡಿದ್ರೆ ಮಾಡ್ದೋನಿಗೂ, ಉಂಡೂನಿಗೂ ಇಬ್ರಿಗೂ ಬೀಳುತ್ತೆ ದಂಡ!

ಹೌದು, ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಹರಿಗೆ ಗ್ರಾಮಸ್ಥರಿಂದ ಬೀಗರು ಊಟದ ವಿಚಾರವಾಗಿ ಮಹತ್ವದ ನಿರ್ಣಯವೊಂದನ್ನು ತೆಗೆದುಕೊಳ್ಳಲಾಗಿದೆ. ಅದೇನೆಂದರೆ, ಊರಿನಲ್ಲಿ ಮದುವೆಯ ನಂತರ ಮಾಡುವಂತಹ ಬೀಗರೂಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಯಾರು ಬೀಗರೂಟವನ್ನು ಹಾಕಿಸ್ತಾರೋ ಅವರಿಗೆ 1 ಲಕ್ಷ ದಂಡ, ಹಾಗೆಯೇ ಬೇರೆ ಗ್ರಾಮಕ್ಕೆ ಹೋಗಿ ಬೀಗರೂಟ ಮಾಡಿದವನಿಗೆ 50 ಸಾವಿರ ದಂಡವನ್ನು ವಿಧಿಸಲಾಗುತ್ತದೆ ಎಂದು ಊರಿನ ಗ್ರಾಮಸ್ಥರು ಹೇಳಿದ್ದಾರೆ.

ಏನಪ್ಪಾ ಜನ ಈ ರೀತಿ ನಿರ್ಧಾರ ಕೈಗೊಂಡಿದ್ದಾರೆ? ಅಂತ ಈ ಸಂದರ್ಭದಲ್ಲಿ ನಮ್ಗೆಲ್ಲಾ ಅನ್ಸೋದು ಸಹಜ. ಆದರೆ, ಗ್ರಾಮಸ್ಥರು ಈ ನಿರ್ಧಾರ ಕೈಗೊಳ್ಳುವುದಕ್ಕೆ ಕಾರಣವೊಂದಿದೆ. ಅದೇನೆಂದರೆ, ಇತ್ತೀಚೆಗೆ ಬೀಗರೂಟ ಅನ್ನೋದು ಅನೇಕ ಭಾಗಗಳಲ್ಲಿ ಪ್ರತಿಷ್ಠೆಯಾಗಿ ಮಾರ್ಪಟ್ಟಿದೆ. ಒಬ್ಬ 4 ಮರಿ ಹೊಡ್ಸಿ ಊಟ ಹಾಕ್ಸಿದ್ರೆ, ಇನ್ನೊಬ್ಬ ಅವನ್ಗಿಂತ ನಾನೇನು ಕಮ್ಮಿ? ಅಂತ 5 ಮರಿ ಹೊಡ್ಸಿ ಊಟ ಹಾಕಿಸ್ತಾನೆ. ಮೊದಲೇ ಮಳೆ ಇಲ್ಲದೆ ತೀವ್ರ ಬರಗಾಲಕ್ಕೆ ರೈತರು ಸಿಕ್ಕಿ ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಇದರ ನಡುವೆ ಈ ರೀತಿ ಆದರೆ ಸಾಲ ಸೋಲ ಮಾಡಿ ಬೀಗರು ಊಟ ಮಾಡಿಸಬೇಕಾಗುತ್ತದೆ. ಅಷ್ಟೇ ಅಲ್ಲದೆ, ಕೆಲವರು ಜಾಗ-ಜಮೀನು ಮಾರಿ ಬೀಗರೂಟಕ್ಕೆ ಖರ್ಚು ಮಾಡುತ್ತಾರೆ. ಈ ಎಲ್ಲಾ ವಿಚಾರಗಳನ್ನು ಗಮನಿಸಿ, ಜನರ ಹಿತದೃಷ್ಟಿಯಿಂದ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ.

ಆಸ್ತಿ ಮಾರಿ ತಂಗಿಯ ಮದುವೆ ಮಾಡಿದ್ದೇ ಈ ನಿರ್ಧಾರಕ್ಕೆ ಕಾರಣ

ಅದೇ ಊರಿನ ವ್ಯಕ್ತಿಯೊಬ್ಬರು ತಮ್ಮ ತಂಗಿಯ ಮದುವೆಗಾಗಿ ಜಮೀನು ಮಾರಾಟ ಮಾಡಿದ್ದರು. ಜೀವನ ನಡೆಸೋಕೆ ಆಧಾರವಾಗಿದ್ದ ಜಮೀನನ್ನೇ ಮಾರಿದ್ದರಿಂದ ಅವರಿಗೆ ಆರ್ಥಿಕ ಸಂಕಷ್ಟ ಎದುರಾಗಿತ್ತು. ಈ ಹಿನ್ನೆಲೆಯಲ್ಲಿ, ಈ ಗ್ರಾಮದ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಪ್ರತಿ ವಾರದಂತೆ ಇದೇ ಸೋಮವಾರ ದೇವಸ್ಥಾನ ಸಮಿತಿಯ ಸಭೆ ಇತ್ತು. ಅಲ್ಲಿ ಈ ವಿಷಯ ಚರ್ಚೆಗೆ ಬಂದಿತ್ತು. ಸಭೆಯಲ್ಲಿ ಹಾಜರಿದ್ದ ಸಮಿತಿಯ 20ಕ್ಕೂ ಹೆಚ್ಚು ಸದಸ್ಯರು ಈ ಬಗ್ಗೆ ಚರ್ಚಿಸಿ, ಗ್ರಾಮದ ಹಿರಿಯರ ಸಲಹೆಯ ಮೇರೆಗೆ ಸರ್ವಾನುಮತದ ತೀರ್ಮಾನ ಕೈಗೊಂಡಿದ್ದಾರೆ.

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor