ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಶಿವಮೊಗ್ಗ ನಗರದ ಹೊರವಲಯದ ಪುಟ್ಟಪ್ಪ ಕ್ಯಾಂಪ್ ಸಮೀಪ ತುಂಗಾ ನದಿಗೆ ಇಳಿದ ಯುವಕನೊಬ್ಬ ನಾಪತ್ತೆಯಾಗಿರುವ ಘಟನೆ ನಡೆದಿದೆ. ಸೂಳೆಬೈಲು ನಿವಾಸಿ ಫೈಜಾನ್ (29) ನಾಪತ್ತೆಯಾದ ಯುವಕ.
ನಿನ್ನೆ ದಿನ ಪುಟ್ಟಪ್ಪ ಕ್ಯಾಂಪ್ ಬಳಿಯ ತುಂಗಾ ನದಿ ತೀರದಲ್ಲಿ ಸುಮಾರು 7ರಿಂದ 8 ಮಂದಿ ಸೇರಿ ಪಾರ್ಟಿ ಮಾಡುತ್ತಿದ್ದರು ಎನ್ನಲಾಗಿದೆ. ಈ ವೇಳೆ ಇಬ್ಬರು ನದಿಗೆ ಇಳಿದಿದ್ದಾರೆ ಎಂಬ ಮಾಹಿತಿ ಇದೆ.ಈ ಪೈಕಿ ಒಬ್ಬರು ನೀರಿನಿಂದ ಹೊರಬಂದಿದ್ದು, ಫೈಜಾನ್ ಮಾತ್ರ ನಾಪತ್ತೆಯಾಗಿದ್ದಾರೆ ಎಂದು ಅಲ್ಲಿದ್ದವರು ಹೇಳಿದ್ದಾರೆ.
ಫೈಜಾನ್ ನದಿಯಿಂದ ಹೊರಬರದ ಹಿನ್ನೆಲೆಯಲ್ಲಿ ಅವರಿಗಾಗಿ ಹುಡುಕಾಟ ನಡೆಸಲಾಗಿದೆ. ಘಟನೆಯ ಮಾಹಿತಿ ತಿಳಿದು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ತೆರಳಿ ನದಿಯಲ್ಲಿ ಶೋಧ ಕಾರ್ಯ ನಡೆಸಿದ್ದಾರೆ. ಆದರೆ, ಹುಡುಕಾಟ ನಡೆಸಿದರೂ ಫೈಜಾನ್ ಪತ್ತೆಯಾಗಿಲ್ಲ.
ನಾಪತ್ತೆಯಾಗಿರುವ ಫೈಜಾನ್ ಪತ್ತೆಗಾಗಿ ಅಗ್ನಿಶಾಮಕ ಸಿಬ್ಬಂದಿ ಶೋಧ ನಡೆಸಿದ್ದು, ಈಜು ತಜ್ಞ ಈಶ್ವರ್ ಮಲ್ಪೆ ಟೀಂ ಸಹ ಸ್ಥಳದಲ್ಲಿ ಹುಡುಕಾಟ ನಡೆಸಿದೆ. ಈ ಘಟನೆ ಸಂಬಂಧ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
