ಮಲೆನಾಡು ಟುಡೆ ಸುದ್ದಿ/ ಸೊರಬ : ವಿಪರೀತ ಮಳೆಯಿಂದಾಗಿ ಸಿಡಿಲು ಬಡಿದು 8 ಕುರಿಗಳು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಸೊರಬ ತಾಲೂಕಿನ ಉಳವಿ ಹೋಬಳಿಯ ಕಾನಹಳ್ಳಿಯಲ್ಲಿ ನಡೆದಿದೆ.
ನಿನ್ನೆ ಸೊರಬದ ಕಾನಹಳ್ಳಿ ಬಳಿ ಗುಡುಗು ಸಹಿತ ಭಾರಿ ಮಳೆ ಸುರಿಯಲು ಆರಂಭಿಸಿತ್ತು. ಈ ಸಂದರ್ಭದಲ್ಲಿ ಶೆಡ್‌ನಲ್ಲಿ ಕಟ್ಟಿಹಾಕಿದ್ದ ಸುಮಾರು 8 ಕುರಿಗಳು ಸಿಡಿಲು ಬಡಿದ ರಭಸಕ್ಕೆ ಸ್ಥಳದಲ್ಲೇ ಸಾವನ್ನಪ್ಪಿವೆ. ಬೆಳಿಗ್ಗೆ ಮಾಲೀಕರು ಶೆಡ್‌ಗೆ ಬಂದಾಗ ವಿಷಯ ತಿಳಿದಿದ್ದು, ಕುರಿಗಳ ಸಾವಿನ ಬಗ್ಗೆ ಸಂಬಂಧಪಟ್ಟ ಇಲಾಖೆಗೆ ಮಾಹಿತಿ ನೀಡಿದ್ದಾರೆ.
ಈ ಕುರಿತು ಕುರಿ ಮಾಲೀಕ ಸಿದ್ದಪ್ಪ ಅವರ ಮಗ ರವಿ ಮಾತನಾಡಿ, ಬೆಳಿಗ್ಗೆ 6:30ಕ್ಕೆ ಬಂದು ಶೆಡ್‌ನಲ್ಲಿ ನೋಡಿದಾಗ ವಿಷಯ ತಿಳಿದುಬಂತು. ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಇಲಾಖೆಗೆ ಮಾಹಿತಿ ನೀಡಿದ್ದೆವು. ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ. ವೈದ್ಯರು ಕುರಿಗಳ ಮರಣೋತ್ತರ ಪರೀಕ್ಷೆ (ಪೋಸ್ಟ್ ಮಾರ್ಟಂ) ನಡೆಸುತ್ತಿದ್ದು, ಕುರಿಗಳನ್ನು ಕಳೆದುಕೊಂಡು ಸಂಕಷ್ಟದಲ್ಲಿರುವ ನಮಗೆ ಸರ್ಕಾರ ಸೂಕ್ತ ಪರಿಹಾರ ನೀಡಬೇಕು ಎಂದು ಅಳಲು ತೋಡಿಕೊಂಡಿದ್ದಾರೆ.
