ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ : ಬ್ಯಾಂಕ್ ಸಂಘಗಳ ಸಂಯುಕ್ತ ವೇದಿಕೆಯು ಸೆಪ್ಟೆಂಬರ್ 28 ರಿಂದ 30 ರವರೆಗೆ ದೇಶವ್ಯಾಪಿ ಸತತ ಮೂರು ದಿನಗಳ ಕಾಲ ಬ್ಯಾಂಕ್ ಮುಷ್ಕರಕ್ಕೆ ಕರೆ ನೀಡಿದೆ. ಈ ಮುಷ್ಕರದ ಜೊತೆಗೆ ಸೆಪ್ಟೆಂಬರ್ 26 (ನಾಲ್ಕನೇ ಶನಿವಾರ) ಮತ್ತು ಸೆಪ್ಟೆಂಬರ್ 27 ರಂದು (ಭಾನುವಾರ) ಸಾಮಾನ್ಯ ವಾರಾಂತ್ಯದ ರಜೆಗಳಿರುವುದರಿಂದ ಗ್ರಾಹಕರಿಗೆ ಸತತ ಐದು ದಿನಗಳ ಕಾಲ ಬ್ಯಾಂಕಿಂಗ್ ಸೇವೆಯಲ್ಲಿ ತೀವ್ರ ವ್ಯತ್ಯಯ ಉಂಟಾಗುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಬ್ಯಾಂಕುಗಳಿಗೆ ವಿಶೇಷ ಸೂಚನೆ ನೀಡಿದೆ.
ಆರ್ಬಿಐ ನೀಡಿರುವ ಈ ಅನುಮೋದನೆಯ ಮೇರೆಗೆ, ಶಿವಮೊಗ್ಗ ಜಿಲ್ಲೆಯ ಎಲ್ಲಾ ರಾಷ್ಟ್ರೀಕೃತ ಬ್ಯಾಂಕುಗಳು ಹಾಗೂ ಕರ್ನಾಟಕ ಗ್ರಾಮೀಣ ಬ್ಯಾಂಕ್ ಶಾಖೆಗಳು ಮುಂಬರುವ ಸೆಪ್ಟೆಂಬರ್ 27, 2026 ರ ಭಾನುವಾರದಂದು ಪೂರ್ಣ ಪ್ರಮಾಣದಲ್ಲಿ ತೆರೆದಿರಲಿವೆ. ಅಂದು ಸಾಮಾನ್ಯ ಕೆಲಸದ ದಿನದಂತೆಯೇ ಎಲ್ಲಾ ರೀತಿಯ ಬ್ಯಾಂಕಿಂಗ್ ವಹಿವಾಟುಗಳು ನಡೆಯಲಿದ್ದು, ಸಾರ್ವಜನಿಕರು ಹಾಗೂ ಗ್ರಾಹಕರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಶಿವಮೊಗ್ಗ ಜಿಲ್ಲಾ ಲೀಡ್ ಬ್ಯಾಂಕ್ ಮ್ಯಾನೇಜರ್ ಹನುಮಂತಪ್ಪ ಪಿ. ಅವರು ತಮ್ಮ ಅಧಿಕೃತ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದ್ದಾರೆ.
