ಮಲೆನಾಡು ಟುಡೆ ಸುದ್ದಿ / ಬೆಂಗಳೂರು /ಬರಗಾಲ ಹಾಗೂ ಸರ್ಕಾರದಲ್ಲಿ ಅನುದಾನದ ಕೊರತೆ ಎಂಬ ವಾದಗಳ ನಡುವೆ ನಗರದಲ್ಲಿ ಈ ಬಾರಿಯ ದಸರಾ ಮಹೋತ್ಸವವನ್ನು ಅದ್ದೂರಿಯಾಗಿ ಆಚರಿಸಲು ರಾಜಕಾರಣಿಗಳು ಮುಂದಾಗಿದ್ದಾರೆ. ಅತ್ತ ಸಿಎಂ ಬಳಿ ಅನುದಾನಕ್ಕಾಗಿ ಶಾಸಕ ಎಸ್ಎನ್ ಚನ್ನಬಸಪ್ಪ ವಿಶೇಷ ಅಧಿವೇಶನದಲ್ಲಿ ಮನವಿ ನೀಡಿ ಸಹಿ ಪಡೆದಿದ್ದರು. ಇದರ ಬೆನ್ನಲ್ಲೆ ಕಾಂಗ್ರೆಸ್ ನಿಯೋಗ ಸಚಿವ ಮಧು ಬಂಗಾರಪ್ಪ ಅವರನ್ನ ಭೇಟಿ ಮಾಡಿ ಶಿವಮೊಗ್ಗ ದಸರಾಕ್ಕೆ ರವಿಚಂದ್ರನ್ರವರನ್ನ ಕರೆಸುವಂತೆ ಮನವಿ ಮಾಡಿದೆ.
ಬೆಂಗಳೂರಿನಲ್ಲಿರುವ ಸಚಿವರ ಕಚೇರಿಯಲ್ಲಿ ನಿನ್ನೆ ಬುಧವಾರ ಭೇಟಿ ಮಾಡಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಸಿ. ಯೋಗೇಶ್ ನೇತೃತ್ವದ ನಿಯೋಗ, ದಸರಾ ಸಂದರ್ಭದಲ್ಲಿ ಆಯೋಜಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ರಾಜ್ಯದ ಕಲಾವಿದರಿಗೆ ಆದ್ಯತೆ ನೀಡಬೇಕು. ವಿಶೇಷವಾಗಿ ಚಲನಚಿತ್ರ ನಟ ವಿ. ರವಿಚಂದ್ರನ್, ಸಾಧು ಕೋಕಿಲ ಹಾಗೂ ರಂಗಾಯಣ ರಘು ಅವರನ್ನು ಶಿವಮೊಗ್ಗ ದಸರಾ ಕಾರ್ಯಕ್ರಮಗಳಿಗೆ ಆಹ್ವಾನಿಸುವಂತೆ ನಿಯೋಗ ಸಚಿವರಲ್ಲಿ ಮನವಿ ಮಾಡಿತು. ಅಲ್ಲದೆ ಶಿವಮೊಗ್ಗ ದಸರಾಕ್ಕೆ ಸರ್ಕಾರದ ವತಿಯಿಂದ ಅಗತ್ಯ ಸೌಲಭ್ಯಗಳನ್ನು ಒದಗಿಸಬೇಕು. ಅರಣ್ಯ ಇಲಾಖೆಯ ವತಿಯಿಂದ ಗಜಪಡೆಯನ್ನೂ ಒದಗಿಸಿಕೊಡುಬೇಕು ಅಂತಾ ಮನವಿ ಸಲ್ಲಿಸಿದ್ರು.
ಶಿವಮೊಗ್ಗದ ಕಲಾವಿದರೊಂದಿಗೆ ಕರ್ನಾಟಕದ ವಿವಿಧ ಭಾಗಗಳ ಕಲಾವಿದರನ್ನು ಹೆಚ್ಚಿನ ಸಂಖ್ಯೆಯಲ್ಲಿ ದಸರಾ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಸ್ಥಳೀಯ ಮತ್ತು ರಾಜ್ಯದ ಕಲಾವಿದರಿಗೆ ಅವಕಾಶ ಕಲ್ಪಿಸಬೇಕು ಎಂಬ ಬೇಡಿಕೆಯನ್ನೂ ನಿಯೋಗ ಮುಂದಿಟ್ಟಿತು.
ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್. ಪ್ರಸನ್ನ ಕುಮಾರ್, ಉತ್ತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಎಸ್. ಶಿವಕುಮಾರ್, ಮಾಜಿ ಮಹಾನಗರ ಪಾಲಿಕೆ ಸದಸ್ಯ ವಿಶ್ವನಾಥ್ ಕಾಶಿ, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಕಲ್ಗೋಡ ರತ್ನಾಕರ್, ಹಾಪ್ಕಾಮ್ಸ್ ಅಧ್ಯಕ್ಷ ವಿಜಯಕುಮಾರ್, ಶಿಕಾರಿಪುರ ಕಾಂಗ್ರೆಸ್ ಮುಖಂಡ ದರ್ಶನ್ ಉಳ್ಳಿ, ಮಧುಕುಮಾರ್ ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರು ಉಪಸ್ಥಿತರಿದ್ದರು.
