ಶಿವಮೊಗ್ಗ : 40 ವರ್ಷದಿಂದ ಪಕ್ಷದಲ್ಲಿ ದುಡಿದವನಿಗೆ ಮಾನ್ಯತೆ ಇಲ್ಲ, 18 ತಿಂಗಳು ಕಾಡಾ ಈಗ ಕಿತ್ತೋದ ಸೂಡಾ, ಸ್ವಪಕ್ಷದ ವಿರುದ್ದವಾಗಿ ಹೆಚ್​​​ ಎಸ್​ ಸುಂದರೇಶ್​​​​ ವಾಗ್ದಾಳಿ

ಹಂಚಿಕೊಳ್ಳಿ
WhatsApp Facebook X Telegram
ಕಾಂಗ್ರೆಸ್_ ಪಕ್ಷದ ವಿರುದ್ದವಾಗಿ ಹೆಚ್_ ಎಸ್_ ಸುಂದರೇಶ್ ವಾಗ್ದಾಳಿ
ಕಾಂಗ್ರೆಸ್_ ಪಕ್ಷದ ವಿರುದ್ದವಾಗಿ ಹೆಚ್_ ಎಸ್_ ಸುಂದರೇಶ್ ವಾಗ್ದಾಳಿ

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ: ಶಿವಮೊಗ್ಗದಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷರ ಆಯ್ಕೆ ಹಾಗೂ ಸಿಎಂ, ಡಿ.ಕೆ. ಶಿವಕುಮಾರ್ ಅವರ ಭೇಟಿಯ ನಂತರ ಕೆಲ ಹಿರಿಯ ನಾಯಕರ ಅಸಮಾಧಾನ ಸ್ಫೋಟಗೊಂಡಿದೆ. ಮಾಜಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹಾಗೂ ಹಾಲಿ ಸೂಡಾ ಅಧ್ಯಕ್ಷರಾದ ಎಚ್.ಎಸ್. ಸುಂದರೇಶ್ ತಮ್ಮದೇ ಪಕ್ಷದ ಸ್ಥಳೀಯ ನಾಯಕರು, ಶಾಸಕರು ಹಾಗೂ ಸಚಿವರ ಮೇಲೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಪಕ್ಷವನ್ನು ತೊರೆಯುವುದಾಗಿ ಎಚ್ಚರಿಕೆ ನೀಡಿದ್ದಾರೆ. ಹಾಗಿದ್ದರೆ ಸುಂದರೇಶ್ ಅವರ ಅಸಮಾಧಾನಕ್ಕೆ ಕಾರಣವೇನು, ಇಂದು ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಅವರು ಏನೆಲ್ಲಾ ಹೇಳಿದರು ಎಂಬುದರ ಕುರಿತ ವರದಿ ಇಲ್ಲಿದೆ.

ಇಂದು ಶಿವಮೊಗ್ಗದ ಖಾಸಗಿ ಹೋಟೆಲ್‌ ಒಂದರಲ್ಲಿ ಸೂಡಾ ಅಧ್ಯಕ್ಷ ಎಚ್.ಎಸ್. ಸುಂದರೇಶ್ ತುರ್ತು ಸುದ್ದಿಗೋಷ್ಠಿ ಹಮ್ಮಿಕೊಂಡಿದ್ದರು. ಈ ಸಂದರ್ಭದಲ್ಲಿ ಪಕ್ಷದಲ್ಲಿ ನಡೆಯುತ್ತಿರುವ ಪಕ್ಷಪಾತ ಹಾಗೂ ಹಿರಿಯ ನಾಯಕರನ್ನು ಕಡೆಗಣಿಸುತ್ತಿರುವ ರೀತಿಯನ್ನು ಎಳೆಎಳೆಯಾಗಿ ಬಿಚ್ಚಿಟ್ಟರು.

ನಾನು ಕಾಂಗ್ರೆಸ್ ಪಕ್ಷಕ್ಕೆ ಬಂದು ಸುಮಾರು 40 ವರ್ಷಗಳು ಕಳೆದಿವೆ, ವಿದ್ಯಾರ್ಥಿ ದೆಸೆಯಿಂದಲೂ ಪಕ್ಷಕ್ಕಾಗಿ ದುಡಿಯುತ್ತಾ ಬಂದಿದ್ದೇನೆ. ಆದರೆ ಪಕ್ಷ ನಮ್ಮಂತಹ ಹಿರಿಯರನ್ನು ಬಿಟ್ಟು ನಿನ್ನೆ ಮೊನ್ನೆ ಬಂದವರಿಗೆ ಮಣೆ ಹಾಕುತ್ತಿದೆ. ನನ್ನನ್ನು ಎಂಎಲ್‌ಎ ಮಾಡಲಿಲ್ಲ, ಎಂಪಿ ಚುನಾವಣೆಗೆ ನನ್ನ ಹೆಸರು ಫೈನಲ್ ಆಗಿದ್ದರೂ ಅದನ್ನು ಕೈತಪ್ಪಿಸಲಾಯಿತು. ಇಷ್ಟೆಲ್ಲಾ ಮಾಡಿದ ನನಗೆ ಯಾವುದೇ ಉನ್ನತ ಹುದ್ದೆ ನೀಡದೆ, 18 ತಿಂಗಳು ಕಾಡ ಈಗ ಕಿತ್ತೋಗಿದ್​ ಸೂಡಾ ನೀಡಿದ್ದಾರೆ. 40 ವರ್ಷಗಳಿಂದ ಪಕ್ಷ ಕಟ್ಟಿದ ನಾವು ಸಿಎಂ ಬಂದಾಗ ಕೊನೆಯಲ್ಲಿ ಕೂರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಸಚಿವರ ಬೆಂಬಲಿಗರು ಹಣ ವಸೂಲಿ ಮಾಡುತ್ತಿದ್ದಾರೆ; ಸಚಿವರು ಗಮನ ಹರಿಸಲಿ

ಸಚಿವ ಮಧು ಬಂಗಾರಪ್ಪ ಅವರ ಬೆಂಬಲಿಗರ ವಿರುದ್ಧವೂ ಎಚ್.ಎಸ್. ಸುಂದರೇಶ್ ಅಸಮಾಧಾನ ವ್ಯಕ್ತಪಡಿಸಿದರು. ಬೆಂಬಲಿಗರೊಬ್ಬರ ಹೆಸರನ್ನು ಪ್ರಸ್ತಾಪಿಸಿದ ಅವರು, ಅವರ ಬೆಂಬಲಿಗ ನಮ್ಮ ಆಫೀಸ್‌ಗೆ ಬಂದು 25 ಲಕ್ಷ ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟಿದ್ದಾನೆ. ಇವರು ನಮಗೇ ಹೀಗೆ ಮಾಡಿದರೆ ಬೇರೆಯವರ ಕಥೆ ಏನು ಸಚಿವರ ಗಮನಕ್ಕೆ ಇದು ಬಂದಿದೆಯೋ ಇಲ್ಲವೋ ಗೊತ್ತಿಲ್ಲ, ಅವರು ಈ ಕುರಿತಾಗಿ ತಕ್ಷಣ ಗಮನ ಹರಿಸಬೇಕಿದೆ ಎಂದರು.

ಮುಂದಿನ ಚುನಾವಣೆಯಲ್ಲಿ ಟಿಕೆಟ್ ಕೊಡದಿದ್ದರೆ ಬೇಳೂರು, ನಾನು ಸೇರಿದಂತೆ ಎಲ್ಲರೂ ಪಕ್ಷ ಬಿಡುತ್ತೇವೆ

ತೀರ್ಥಹಳ್ಳಿಯಲ್ಲಿ ಆರ್.ಎಂ. ಮಂಜುನಾಥ್ ಗೌಡರಿಗೆ ಟಿಕೆಟ್ ಕೊಡಬೇಕು, ಶಿವಮೊಗ್ಗದಲ್ಲಿ ನನಗೆ ಟಿಕೆಟ್ ಕೊಡಬೇಕು. ಸೊರಬದಲ್ಲಿ ಹೊಸ ಕ್ಯಾಂಡಿಡೇಟ್ ಹಾಕುತ್ತಿದ್ದೇವೆ, ಅವರಿಗೆ ಟಿಕೆಟ್ ಕೊಡಬೇಕು. ಶಿಕಾರಿಪುರದಲ್ಲಿ ಏನೂ ಇಲ್ಲದ ನಾಗರಾಜ್ ಗೌಡರಿಗೆ ಟಿಕೆಟ್ ಕೊಟ್ಟಿದ್ದರು, ಮುಂದಿನ ಬಾರಿ ಅವರಿಗೆ ಟಿಕೆಟ್ ಕೊಡಬಾರದು. ಕಳೆದ ಬಾರಿ ನಾನು ಜಿಲ್ಲಾಧ್ಯಕ್ಷನಾಗಿದ್ದಾಗ ಇದೇ ನನ್ನ ಕೊನೆ ಚುನಾವಣೆ ಎಂದಿದ್ದ ಕಿಮ್ಮನೆ ರತ್ನಾಕರ್, ಈಗ ಮತ್ತೆ ಸ್ಪರ್ಧಿಸುತ್ತೇನೆ ಎನ್ನುತ್ತಿದ್ದಾರೆ. ಅವರಿಗೆ ಟಿಕೆಟ್ ನೀಡಬಾರದು. ನಾವು ಹೇಳಿದವರಿಗೆ ಟಿಕೆಟ್ ಕೊಟ್ಟರೆ ಮುಂದಿನ ಚುನಾವಣೆಯಲ್ಲಿ ನಮ್ಮ ಪಕ್ಷ ಜಿಲ್ಲೆಯ 7ಕ್ಕೆ 7 ಸ್ಥಾನಗಳನ್ನು ಗೆಲ್ಲುತ್ತದೆ. ಇಲ್ಲದಿದ್ದರೆ ನಾವೆಲ್ಲರೂ ಪಕ್ಷ ಬಿಡುತ್ತೇವೆ ಎಂದು ಎಚ್ಚರಿಸಿದರು.

ಶಿವಮೊಗ್ಗ ಜಿಲ್ಲೆಗೆ 2 ಮಂತ್ರಿ ಸ್ಥಾನ ಕೊಡಿ

ಜಿಲ್ಲೆಯಲ್ಲಿ ಯಾರಿಗ್ಯಾರಿಗೋ ಮಂತ್ರಿ ಸ್ಥಾನ ನೀಡಲಾಗಿದೆ. ಈ ಹಿಂದೆ ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿ ಅವರಿಗೆ ಬೈದವರನ್ನು ಕರೆದು ಮಂತ್ರಿ ಮಾಡಿದ್ದಾರೆ. ಬದಲಿಗೆ ಸಾಗರದ ಬೇಳೂರು ಗೋಪಾಲಕೃಷ್ಣ ಹಾಗೂ ಭದ್ರಾವತಿಯ ಸಂಗಮೇಶ್ ಅವರಿಗೆ ಮಂತ್ರಿ ಸ್ಥಾನ ನೀಡಬೇಕು. ಬೇಳೂರು ಅವರಿಗೆ ಸಚಿವ ಸ್ಥಾನ ನೀಡುವುದರಿಂದ ಶಿವಮೊಗ್ಗ ಹಾಗೂ ಕಾರವಾರದಲ್ಲಿ ಪಕ್ಷ ಸಂಘಟನೆಯಾಗುತ್ತದೆ. ಸಂಗಮೇಶ್ ಅವರಿಗೆ ಮಂತ್ರಿ ಸ್ಥಾನ ನೀಡಿದರೆ ಹೊಳೆಹೊನ್ನೂರು ಮತ್ತು ಶಿಕಾರಿಪುರದಲ್ಲಿ ಸಂಘಟನೆಯಾಗಿ ಉತ್ತಮ ಕೆಲಸವಾಗುತ್ತದೆ. ಯಾರೋ ಕೇರಳದಿಂದ ಇಲ್ಲಿಗೆ ಬಂದು ಜಿಲ್ಲಾಧ್ಯಕ್ಷರನ್ನು ಆಯ್ಕೆ ಮಾಡಿ ಹೋಗುತ್ತಾರೆ. ನಿನ್ನೆ ಮೊನ್ನೆ ಬಂದವರಿಗೆ ಕ್ಯಾಬಿನೆಟ್ ದರ್ಜೆಯ ಸ್ಥಾನ ನೀಡಲಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹೀಗೆ ಎಚ್.ಸಿ. ಯೋಗೇಶ್, ಕಿಮ್ಮನೆ ರತ್ನಾಕರ್, ಮಂಜುನಾಥ್ ಭಂಡಾರಿ, ಸಚಿವ ಮಧು ಬಂಗಾರಪ್ಪ ಸೇರಿದಂತೆ ಎಲ್ಲಾ ಪ್ರಮುಖ ನಾಯಕರ ವಿರುದ್ಧ ಎಚ್.ಎಸ್. ಸುಂದರೇಶ್ ವಾಗ್ದಾಳಿ ನಡೆಸಿದರು. ಅಲ್ಲದೆ ಕಾಂಗ್ರೆಸ್ ಜಿಲ್ಲೆಯಲ್ಲಿ 420ಗಳ ಸಂತೆಯಾಗಿದೆ ಎಂದು ಕಿಡಿಕಾರಿದ ಅವರು, ಈ ವಿಚಾರವಾಗಿ ಇಂದೇ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಮಾಹಿತಿ ನೀಡುವುದಾಗಿ ತಿಳಿಸಿದರು.

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor