ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ : ಕರ್ನಾಟಕ, ಬಿಹಾರ, ಮಹಾರಾಷ್ಟ್ರ ಹಾಗೂ ಉತ್ತರ ಪ್ರದೇಶ ರಾಜ್ಯಗಳ ವಿಧಾನ ಪರಿಷತ್ತಿನ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರಗಳ ಚುನಾವಣೆಗೆ ಭಾರತೀಯ ಚುನಾವಣಾ ಆಯೋಗವು ಅಧಿಕೃತ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ.
ಪ್ರಸ್ತುತ ಇರುವ ಶಾಸಕರ ಅಧಿಕಾರಾವಧಿಯು ಮುಕ್ತಾಯಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಈ ನಾಲ್ಕೂ ರಾಜ್ಯಗಳ ಒಟ್ಟು 28 ವಿಧಾನ ಪರಿಷತ್ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಕರ್ನಾಟಕದಲ್ಲಿ ಹಾಲಿ ಇರುವ ಇಬ್ಬರು ಪದವೀಧರ ಹಾಗೂ ಇಬ್ಬರು ಶಿಕ್ಷಕರ ಕ್ಷೇತ್ರಗಳ ಸದಸ್ಯರ ಅಧಿಕಾರಾವಧಿಯು 2026ರ ನವೆಂಬರ್ 11ರಂದು ಪೂರ್ಣಗೊಳ್ಳಲಿದೆ.
ಹೀಗಾಗಿ ಕರ್ನಾಟಕ ಆಗ್ನೇಯ ಪದವೀಧರ ಕ್ಷೇತ್ರದ ಚಿದಾನಂದ ಎಂ. ಗೌಡ, ಪಶ್ಚಿಮ ಪದವೀಧರ ಕ್ಷೇತ್ರದ ಎಸ್.ವಿ. ಸಂಕನೂರ, ಈಶಾನ್ಯ ಶಿಕ್ಷಕರ ಕ್ಷೇತ್ರದ ಶಶೀಲ್ ಜಿ. ನಮೋಶಿ ಹಾಗೂ ಬೆಂಗಳೂರು ಶಿಕ್ಷಕರ ಕ್ಷೇತ್ರದ ಪುಟ್ಟಣ್ಣ ಅವರ ಸ್ಥಾನಗಳಿಗೆ ನೂತನವಾಗಿ ಚುನಾವಣೆ ನಡೆಯಲಿದೆ. ಈ ಚುನಾವಣೆಗೆ ಸಂಬಂಧಿಸಿದಂತೆ ಸೆಪ್ಟೆಂಬರ್ 29ರಂದು ಅಧಿಕೃತ ಅಧಿಸೂಚನೆ ಹೊರಬೀಳಲಿದ್ದು, ನಾಮಪತ್ರ ಸಲ್ಲಿಕೆಗೆ ಅಕ್ಟೋಬರ್ 6 ಕೊನೆಯ ದಿನವಾಗಿದೆ.
ಸಲ್ಲಿಕೆಯಾದ ನಾಮಪತ್ರಗಳನ್ನು ಅಕ್ಟೋಬರ್ 7ರಂದು ಪರಿಶೀಲಿಸಲಾಗುವುದು ಹಾಗೂ ಉಮೇದುವಾರಿಕೆ ಹಿಂಪಡೆಯಲು ಅಕ್ಟೋಬರ್ 9 ರವರೆಗೆ ಅವಕಾಶ ನೀಡಲಾಗಿದೆ. ಅಕ್ಟೋಬರ್ 23ರಂದು ಬೆಳಿಗ್ಗೆ 8:00 ರಿಂದ ಸಂಜೆ 4:00 ರವರೆಗೆ ಮತದಾನ ನಡೆಯಲಿದ್ದು, ಅಕ್ಟೋಬರ್ 27ರಂದು ಮತ ಎಣಿಕೆ ಕಾರ್ಯ ಜರುಗಲಿದೆ. ಅಧಿಸೂಚನೆ ಪ್ರಕಟವಾದ ತಕ್ಷಣದಿಂದಲೇ ಸಂಬಂಧಪಟ್ಟ ಕ್ಷೇತ್ರಗಳಲ್ಲಿ ಮಾದರಿ ಚುನಾವಣಾ ನೀತಿ ಸಂಹಿತೆಯು ಜಾರಿಗೆ ಬಂದಿದೆ ಎಂದು ಆಯೋಗದ ಕಾರ್ಯದರ್ಶಿ ಸುಮಾನ್ ಕುಮಾರ್ ದಾಸ್ ಸ್ಪಷ್ಟಪಡಿಸಿದ್ದಾರೆ.
