ಮಲೆನಾಡು ಟುಡೆ ಸುದ್ದಿ/ ಶಿವಮೊಗ್ಗ : ಇತ್ತೀಚಿನ ದಿನಗಳಲ್ಲಿ ಗಣೇಶೋತ್ಸವ ಹಬ್ಬಗಳಲ್ಲಿ ಭಾವೈಕ್ಯತೆ ಹಾಗೂ ಕೋಮು ಸೌಹಾರ್ದತೆಯ ಸುಂದರ ದೃಶ್ಯಗಳು ಹೆಚ್ಚಾಗಿ ಕಾಣಸಿಗುತ್ತಿವೆ. ಇದಕ್ಕೆ ಸಾಕ್ಷಿಯಾಗಿ ಶಿವಮೊಗ್ಗ ಜಿಲ್ಲೆಯಲ್ಲಿ ಈಗಾಗಲೇ ಹಲವು ನಿದರ್ಶನಗಳು ಕಣ್ಣಮುಂದಿವೆ. ಈ ಹಿಂದೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಆವಿನಹಳ್ಳಿ ಗ್ರಾಮದಲ್ಲಿ ಗಣಪತಿ ವಿಸರ್ಜನಾ ಮೆರವಣಿಗೆಯ ವೇಳೆ ಮುಸ್ಲಿಂ ಬಾಂಧವರು ಭಕ್ತರಿಗೆ ಉಪಹಾರ ಹಂಚುವ ಮೂಲಕ ಸೌಹಾರ್ದತೆ ಮೆರೆದಿದ್ದರು. ಇದೀಗ ನಗರದಲ್ಲೂ ಅಂತಹದ್ದೇ ದೃಶ್ಯ ಮರುಕಳಿಸಿದೆ.
ನಿನ್ನೆ ಶಿವಮೊಗ್ಗ ನಗರದ ಗೋಪಾಳದ ಪುರದಾಳ್ ರಸ್ತೆಯಲ್ಲಿರುವ ಸಿದ್ದೇಶ್ವರ ಸರ್ಕಲ್ನಲ್ಲಿ ಗಣಪತಿ ವಿಸರ್ಜನಾಪೂರ್ವ ಮೆರವಣಿಗೆಯ ವೇಳೆಯಲ್ಲಿ ಮುಸ್ಲಿಂ ಹಾಗೂ ಕ್ರಿಶ್ಚಿಯನ್ ಸಮುದಾಯದ ಯುವಕರು ಹಾಗೂ ಮುಖಂಡರು ಭಾವೈಕ್ಯತೆ ಮೆರೆದಿದ್ದಾರೆ.ಇಲ್ಲಿನ ಹಿಂದೂ ಸಂಘಟನೆಯ ಯುವಕರು ಪ್ರತಿಷ್ಠಾಪಿಸಿದ್ದ ಗಣಪತಿಯ ವಿಸರ್ಜನಾ ಮೆರವಣಿಗೆ ಸಾಗುವಾಗ, ಮೆರವಣಿಗೆಯಲ್ಲಿದ್ದ ಭಕ್ತರಿಗೆ ಮುಸ್ಲಿಂ ಹಾಗೂ ಕ್ರಿಶ್ಚಿಯನ್ ಮುಖಂಡರು ಮತ್ತು ಯುವಕರು ಹಣ್ಣು ಹಾಗೂ ತಂಪು ಪಾನೀಯಗಳನ್ನು ವಿತರಿಸಿದರು.
ಹಬ್ಬಗಳು ಎಲ್ಲರನ್ನೂ ಒಂದಾಗಿ ಜೋಡಿಸುತ್ತವೆ ಎಂಬುದಕ್ಕೆ ಈ ಘಟನೆ ಮತ್ತೊಮ್ಮೆ ಸಾಕ್ಷಿಯಾಗಿದ್ದು, ಸ್ಥಳೀಯರ ಮೆಚ್ಚುಗೆಗೆ ಪಾತ್ರವಾಗಿದೆ
