ಮಲೆನಾಡು ಟುಡೆ ಸುದ್ದಿ/ ಭದ್ರಾವತಿ: ಟ್ರಾನ್ಸ್‌ಫಾರ್ಮರ್ ದುರಸ್ತಿ ಕಾರ್ಯದಲ್ಲಿದ್ದ ಲೈನ್ ಮ್ಯಾನ್ ಒಬ್ಬರು ವಿದ್ಯುತ್ ಹರಿದು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಭದ್ರಾವತಿ ತಾಲೂಕಿನ ಮಲ್ಲಗೇನಹಳ್ಳಿ ಬಳಿ ನಡೆದಿದೆ. ಹೊನ್ನಾಳಿ ತಾಲೂಕಿನ ಚಿಕ್ಕಬಾಸೂರು ತಾಂಡಾ ಮೂಲದ ಸಂಜಯ್ ದತ್ (33) ಮೃತಪಟ್ಟ ದುರ್ದೈವಿ.
ಘಟನೆಯ ವಿವರ
ಮಲ್ಲಗೇನಹಳ್ಳಿ ಬಳಿ ಇರುವ ಟ್ರಾನ್ಸ್‌ಫಾರ್ಮರ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ, ಸಂಜಯ್ ದತ್ ಅವರು ಪವರ್ ಕಟ್ ಮಾಡಿ ವಿದ್ಯುತ್ ಕಂಬ ಹತ್ತಿದ್ದರು. ಆದರೆ ದುರಸ್ತಿ ಕೆಲಸ ಮಾಡುತ್ತಿದ್ದ ವೇಳೆ ದಿಢೀರನೆ ವಿದ್ಯುತ್ ಪ್ರವಹಿಸಿದ್ದರಿಂದ ತೀವ್ರ ಅಸ್ವಸ್ಥಗೊಂಡು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
ಮೃತ ಲೈನ್ ಮ್ಯಾನ್ ಸಂಜಯ್ ದತ್ ಅವರಿಗೆ ಕಡ್ಡಾಯವಾಗಿ ನೀಡಬೇಕಿದ್ದ ಸೂಕ್ತ ಸುರಕ್ಷತಾ ಸಾಮಗ್ರಿಗಳನ್ನು ಒದಗಿಸದೆ ಕೆಲಸಕ್ಕೆ ಕಳುಹಿಸಲಾಗಿತ್ತು ಎಂಬ ಗಂಭೀರ ಆರೋಪ ಕೇಳಿಬಂದಿದೆ. ಮೇಲಧಿಕಾರಿಗಳ ವಿಪರೀತ ಒತ್ತಡ ಹಾಗೂ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳದಿರುವುದೇ ಈ ದುರಂತಕ್ಕೆ ನೇರ ಕಾರಣ ಎಂದು ಸ್ಥಳೀಯರು ಹಾಗೂ ಮೃತರ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಹೊಳೆಹೊನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.
