ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ: ಪ್ರವಾಸಿ ಮಹಿಳೆಯೊಬ್ಬರು ಆನೆ ದಾಳಿಯಿಂದ ಮೃತಪಟ್ಟ ಘಟನೆಯ ನಂತರ ರಾಜ್ಯಾದ್ಯಂತ ತಾತ್ಕಾಲಿಕವಾಗಿ ಬಂದ್ ಆಗಿದ್ದ ಆನೆ ಬಿಡಾರಗಳು, ಇದೀಗ ನೂತನ standard operating procedure (SOP) ಸುರಕ್ಷತಾ ನಿಯಮಗಳೊಂದಿಗೆ ಸಾರ್ವಜನಿಕ ವೀಕ್ಷಣೆಗೆ ಮರಳಿ ಮುಕ್ತವಾಗುತ್ತಿವೆ. ಈಗಾಗಲೇ ಮತ್ತಿಗೋಡು ಹಾಗೂ ಹಾರಂಗಿ ಶಿಬಿರಗಳು ಪ್ರವಾಸಿಗರಿಗೆ ಬಾಗಿಲು ತೆರೆದಿದ್ದು, ಶಿವಮೊಗ್ಗದ ಪ್ರಸಿದ್ಧ ಸಕ್ರೆಬೈಲು ಆನೆ ಬಿಡಾರವೂ ಶೀಘ್ರದಲ್ಲೇ ಪ್ರವಾಸಿಗರನ್ನು ನೀಡುವ ಸಾಧ್ಯತೆಯಿದೆ.
ಕಳೆದ ಮೇ ತಿಂಗಳಲ್ಲಿ ಕೊಡಗಿನ ದುಬಾರೆ ಶಿಬಿರದಲ್ಲಿ ಸಂಭವಿಸಿದ ಅವಘಡದ ಬಳಿಕ ರಾಜ್ಯ ಸರ್ಕಾರವು ಆನೆ ಶಿಬಿರಗಳಲ್ಲಿ ಪ್ರವಾಸಿಗರ ಸುರಕ್ಷತೆಗೆ ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೆ ತಂದಿದೆ. ಸುಮಾರು 3 ತಿಂಗಳುಗಳಿಂದ ಬಂದ್ ಆಗಿರುವ ಸಕ್ರೆಬೈಲು ಬಿಡಾರದಲ್ಲಿ ಈಗಾಗಲೇ 6 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಹೊಸ SOP ಮಾರ್ಗದರ್ಶಿ ಸೂತ್ರಗಳ ಅನ್ವಯ ಗ್ರೀನ್, ಅಂಬರ್ ಹಾಗೂ ರೆಡ್ ವಲಯಗಳನ್ನಾಗಿ ವಿಂಗಡಿಸಿ ಸುರಕ್ಷತಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ.
ಹೊಸ SOP ಸುರಕ್ಷತಾ ನಿಯಮಗಳ ಪ್ರಮುಖ ಮುಖ್ಯಾಂಶಗಳು:
- ನೇರ ಸಂಪರ್ಕ ನಿಷೇಧ: ಪ್ರವಾಸಿಗರು ಆನೆಗಳನ್ನು ಮುಟ್ಟುವುದು, ಅಪ್ಪಿಕೊಳ್ಳುವುದು, ಸೆಲ್ಫಿ/ಫೋಟೋ ತೆಗೆಯುವುದು ಹಾಗೂ ಕೈಯಿಂದ ಆಹಾರ ನೀಡುವುದನ್ನು ಸಂಪೂರ್ಣವಾಗಿ ತಡೆಯಲಾಗಿದೆ.
- ಆನೆಗಳ ಸ್ನಾನಕ್ಕೆ ತಡೆ: ಆನೆಗಳು ಸ್ನಾನ ಮಾಡುವ ಸ್ಥಳಕ್ಕೆ ಅಥವಾ ನದಿಗೆ ಪ್ರವಾಸಿಗರು ಇಳಿಯುವುದನ್ನು ನಿಷೇಧಿಸಲಾಗಿದೆ.
- ವಲಯ ವರ್ಗೀಕರಣ: ಪ್ರವಾಸಿಗರಿಗೆ ಗ್ರೀನ್ ಝೋನ್ನಲ್ಲಿ ಬ್ಯಾರಿಕೇಡ್ಗಳ ಹಿಂದೆ ನಿಂತು ವೀಕ್ಷಿಸಲು ಮಾತ್ರ ಅವಕಾಶವಿರುತ್ತದೆ. ರೆಡ್ ಝೋನ್ನಲ್ಲಿ ಕಾವಡಿಗರು ಹಾಗೂ ವೈದ್ಯರಿಗೆ ಮಾತ್ರ ಪ್ರವೇಶವಿರುತ್ತದೆ.
- ಸಮಯ ಮತ್ತು ಸಂಖ್ಯೆಯ ಮಿತಿ: ಏಕಕಾಲದಲ್ಲಿ 50 ರಿಂದ 75 ಪ್ರವಾಸಿಗರಿಗೆ ಮಾತ್ರ ಅವಕಾಶ ನೀಡಲಾಗುತ್ತಿದ್ದು, ವೀಕ್ಷಣೆಗೆ 45 ರಿಂದ 60 ನಿಮಿಷಗಳ ಸಮಯ ನಿಗದಿಪಡಿಸಲಾಗಿದೆ.
- ಕನಿಷ್ಠ ಅಂತರ: ಪ್ರವಾಸಿಗರು ಹಾಗೂ ಆನೆಗಳ ನಡುವೆ ಕನಿಷ್ಠ 10 ಮೀಟರ್ (30 ಅಡಿ) ಅಂತರ ಕಾಯ್ದುಕೊಳ್ಳುವುದು ಕಡ್ಡಾಯವಾಗಿದೆ.
ಇ ಪೇಪರ್ನಲ್ಲಿರುವ ಪ್ರಮುಖ 5 ಸುದ್ದಿಗಳು
- ಕುವೆಂಪು ವಿವಿಯಲ್ಲಿ UUCMS ಅಂಕ ಬದಲಾವಣೆ ಆರೋಪ; ಎಫ್ಐಆರ್ ದಾಖಲು: ಕುವೆಂಪು ವಿಶ್ವವಿದ್ಯಾಲಯದ UUCMS ಪೋರ್ಟಲ್ನಲ್ಲಿ ಅನುತ್ತೀರ್ಣಗೊಂಡಿದ್ದ ಎಂ.ಬಿ.ಎ. ವಿದ್ಯಾರ್ಥಿಯೊಬ್ಬರ ಅಂಕಗಳನ್ನು ಅಕ್ರಮವಾಗಿ ಬದಲಾಯಿಸಿ ಉತ್ತೀರ್ಣಗೊಳಿಸಿದ ಆರೋಪದ ಮೇಲೆ, ವಿವಿಯ ಅಡ್ಮಿನ್ ಅನುಷಾ ಹಾಗೂ ಸಂಬಂಧಪಟ್ಟ ವಿದ್ಯಾರ್ಥಿಯ ವಿರುದ್ಧ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- ಶಿವಮೊಗ್ಗದಲ್ಲಿ ಗಣಪತಿ ಕೂರಿಸಲು ಫೀಸ್ ಇಲ್ಲ – ಪಾಲಿಕೆ ಸ್ಪಷ್ಟನೆ: ಶಿವಮೊಗ್ಗದಲ್ಲಿ ಸಾರ್ವಜನಿಕ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಪಾಲಿಕೆಯಿಂದ ₹2,500 ಶುಲ್ಕ ವಸೂಲಿ ಮಾಡಲಾಗುತ್ತಿದೆ ಎಂಬ ಗಾಳಿ ಸುದ್ದಿಯನ್ನು ಮಹಾನಗರ ಪಾಲಿಕೆ ಆಯುಕ್ತ ಮಾಯಣ್ಣಗೌಡ ಸಾರಾಸಗಟಾಗಿ ತಳ್ಳಿಹಾಕಿದ್ದು, ಪಾಲಿಕೆಯಿಂದ ಯಾವುದೇ ಶುಲ್ಕ ಪಡೆಯುತ್ತಿಲ್ಲ, ಸಾರ್ವಜನಿಕರು ವದಂತಿಗಳಿಗೆ ಕಿವಿಗೊಡಬಾರದು ಎಂದು ಸ್ಪಷ್ಟಪಡಿಸಿದ್ದಾರೆ.
- ಖಾಸಗಿ ಶಾಲಾ ಶಿಕ್ಷಕರಿಗೂ ರಾಜ್ಯ ಮಟ್ಟದ ಶಿಕ್ಷಕ ಪ್ರಶಸ್ತಿ – ಸಚಿವ ಮಧು ಬಂಗಾರಪ್ಪ: ಸರ್ಕಾರಿ ಹಾಗೂ ಅನುದಾನಿತ ಶಾಲಾ ಶಿಕ್ಷಕರಂತೆ ಖಾಸಗಿ ಶಾಲೆಗಳಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿರುವ ಶಿಕ್ಷಕರನ್ನೂ ರಾಜ್ಯ ಮಟ್ಟದ ಶಿಕ್ಷಕ ಪ್ರಶಸ್ತಿಗೆ ಪರಿಗಣಿಸುವ ಕುರಿತು ಸರ್ಕಾರ ಗಂಭೀರ ಚಿಂತನೆ ನಡೆಸುತ್ತಿದೆ ಎಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.
- ಮೆಗ್ಗಾನ್ ಆಸ್ಪತ್ರೆಯ ಮಹಿಳಾ ವಾರ್ಡ್ಗಳಿಗೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಭೇಟಿ: ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ ಅವರು ಶಿವಮೊಗ್ಗದ ಜಿಲ್ಲಾ ಮೆಗ್ಗಾನ್ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿ ಮೂಲಸೌಕರ್ಯ, ಸ್ವಚ್ಛತೆ ಹಾಗೂ ರೋಗಿಗಳ ಭದ್ರತೆಯನ್ನು ಪರಿಶೀಲಿಸಿದರು. ಹೊರಗಿನಿಂದ ಔಷಧ ಬರೆದುಕೊಡಬಾರದು ಮತ್ತು ಗರ್ಭಿಣಿಯರು ಸರತಿಯಲ್ಲಿ ನಿಲ್ಲುವುದನ್ನು ತಪ್ಪಿಸಲು ಕೌಂಟರ್ ಹೆಚ್ಚಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
- ಶಿವಮೊಗ್ಗದಲ್ಲಿ ‘ಮೈಸೂರು ಸ್ಯಾಂಡಲ್ ಸೋಪ್’ ಸಾಬೂನು ಮೇಳ ಆರಂಭ: ಕರ್ನಾಟಕ ಸೋಪ್ಸ್ ಅಂಡ್ ಡಿಟರ್ಜೆಂಟ್ಸ್ ಲಿಮಿಟೆಡ್ (KSDL) ವತಿಯಿಂದ ಶಿವಮೊಗ್ಗದ ಪೊಲೀಸ್ ಭವನದಲ್ಲಿ ಸೆಪ್ಟೆಂಬರ್ 18ರವರೆಗೆ ‘ಮೈಸೂರು ಸ್ಯಾಂಡಲ್ ಸಾಬೂನು ಮೇಳ’ವನ್ನು ಆಯೋಜಿಸಲಾಗಿದ್ದು, ಸಂಸದ ಬಿ.ವೈ. ರಾಘವೇಂದ್ರ ಮೇಳಕ್ಕೆ ಚಾಲನೆ ನೀಡಿದರು. ಮೇಳದಲ್ಲಿ 80ಕ್ಕೂ ಹೆಚ್ಚು ಕೆಎಸ್ಡಿಎಲ್ ಉತ್ಪನ್ನಗಳು ವಿಶೇಷ ರಿಯಾಯಿತಿ ದರದಲ್ಲಿ ಲಭ್ಯವಿವೆ.
ಈ ಮೇಲಿನ ಎಲ್ಲಾ ಸುದ್ದಿಗಳ ಸಂಪೂರ್ಣ ಸುದ್ದಿಗಳನ್ನು ವೀಕ್ಷಿಸಲು (ಇ ಲಿಂಕ್ ) ಕ್ಲಿಕ್ ಮಾಡಿ
