ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ : ಶಿವಮೊಗ್ಗದ ಮೆಗ್ಗಾನ್ ಬೋಧನಾ ಆಸ್ಪತ್ರೆಗೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಾದ ನಾಗಲಕ್ಷ್ಮಿ ಚೌಧರಿ ಅವರು ಇಂದು ಭೇಟಿ ನೀಡಿ, ಆಸ್ಪತ್ರೆಯ ವೈದ್ಯಕೀಯ ಸೇವೆ ಹಾಗೂ ಮೂಲಸೌಕರ್ಯ ವ್ಯವಸ್ಥೆಗಳ ಬಗ್ಗೆ ಪರಿಶೀಲನೆ ನಡೆಸಿದರು.
ನಾಗಲಕ್ಷ್ಮಿ ಚೌಧರಿ ಅವರು ನೇರವಾಗಿ ಮಹಿಳಾ ಜನರಲ್ ವಾರ್ಡ್‌ಗೆ ತೆರಳಿ, ಚಿಕಿತ್ಸೆ ಪಡೆಯುತ್ತಿರುವ ಮಹಿಳಾ ರೋಗಿಗಳ ಆರೋಗ್ಯ ವಿಚಾರಿಸಿದರು. ಈ ಸಂದರ್ಭದಲ್ಲಿ ರೋಗಿಗಳಿಗೆ ದೊರೆಯುತ್ತಿರುವ ಚಿಕಿತ್ಸೆಯ ಗುಣಮಟ್ಟ, ಅಗತ್ಯ ಔಷಧಿಗಳ ಲಭ್ಯತೆ, ಶೌಚಾಲಯಗಳ ಸ್ವಚ್ಛತೆ ಹಾಗೂ ಕುಡಿಯುವ ನೀರಿನ ವ್ಯವಸ್ಥೆಯ ಕುರಿತು ರೋಗಿಗಳಿಂದಲೇ ವಿವರವಾದ ಮಾಹಿತಿ ಪಡೆದುಕೊಂಡರು.
ಪರಿಶೀಲನೆಯ ವೇಳೆ ಆಸ್ಪತ್ರೆಯಲ್ಲಿ ಎದುರಾಗುತ್ತಿರುವ ವಿವಿಧ ಸಮಸ್ಯೆಗಳ ಬಗ್ಗೆ ರೋಗಿಗಳು ಹಾಗೂ ಅವರ ಸಂಬಂಧಿಕರು ಅಧ್ಯಕ್ಷರ ಗಮನಕ್ಕೆ ತಂದರು. ಮುಖ್ಯವಾಗಿ, ಆಸ್ಪತ್ರೆಯಲ್ಲಿ ಅಗತ್ಯ ಔಷಧಿಗಳು ಸಮರ್ಪಕವಾಗಿ ಸಿಗುತ್ತಿಲ್ಲ ಹಾಗೂ ಕೆಲವು ಪ್ರಮುಖ ಔಷಧಿಗಳನ್ನು ಹೊರಗಿನ ಮೆಡಿಕಲ್ ಶಾಪ್‌ಗಳಿಂದ ಹಣ ಕೊಟ್ಟು ಖರೀದಿಸಿ ತರಬೇಕಾದ ಅನಿವಾರ್ಯತೆ ಇದೆ ಎಂದು ಆಸ್ಪತ್ರೆ ಆಡಳಿತ ಮಂಡಳಿಯ ವಿರುದ್ಧ ರೋಗಿಗಳ ಕಡೆಯವರು ದೂರು ನೀಡಿದರು.
ದೂರುಗಳನ್ನು ಆಲಿಸಿದ ನಾಗಲಕ್ಷ್ಮಿ ಚೌಧರಿ ಅವರು, ಆಸ್ಪತ್ರೆಯಲ್ಲಿ ಈ-ಫಾರ್ಮಸಿ ಹಾಗೂ ಡಿಜಿಟಲ್ ವ್ಯವಸ್ಥೆ ಜಾರಿಯಲ್ಲಿದೆ. ಹೀಗಿರುವಾಗ ರೋಗಿಗಳು ಹೊರಗಡೆಯಿಂದ ಔಷಧಿ ಖರೀದಿಸುವ ಪರಿಸ್ಥಿತಿ ಯಾವುದೇ ಕಾರಣಕ್ಕೂ ನಿರ್ಮಾಣವಾಗಬಾರದು. ಔಷಧಿ ವಿತರಣೆ ಮತ್ತು ದಾಖಲಾತಿಯಲ್ಲಿ ಸಂಪೂರ್ಣ ಪಾರದರ್ಶಕತೆ ಇರಬೇಕು ಎಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ಜೊತೆಗೆ, ಡಯಾಲಿಸಿಸ್ ರೋಗಿಗಳಿಗೆ ಸಾಧ್ಯವಾದಷ್ಟು ಹೆಚ್ಚಿನ ನೆರವು ಮತ್ತು ಆದ್ಯತೆ ನೀಡುವಂತೆ ಸಿಬ್ಬಂದಿಗೆ ತಾಕೀತು ಮಾಡಿದರು.
ಇದೇ ವೇಳೆ ಆಸ್ಪತ್ರೆಯ ಶೌಚಾಲಯದ ನೈರ್ಮಲ್ಯ ಹಾಗೂ ಕುಡಿಯುವ ನೀರಿನ ಪೂರೈಕೆಯಲ್ಲಿ ಕಂಡುಬಂದ ಕೊರತೆಯ ಬಗ್ಗೆ ಅಧ್ಯಕ್ಷರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಆಸ್ಪತ್ರೆಯಲ್ಲಿ ಒಂದೇ ಒಂದು ದಿನವೂ ನೀರಿನ ಅಭಾವ ಉಂಟಾಗಬಾರದು. ಒಂದು ವೇಳೆ ತಾಂತ್ರಿಕ ಸಮಸ್ಯೆ ಎದುರಾದರೆ ತಕ್ಷಣವೇ ಪರ್ಯಾಯ ನೀರಿನ ವ್ಯವಸ್ಥೆ ಕಲ್ಪಿಸಬೇಕು ಎಂದು ಆಸ್ಪತ್ರೆಯ ಜವಾಬ್ದಾರಿಯುತ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
