ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ ; ಕೊಡಗಿನ ದುಬಾರೆ ಆನೆ ಶಿಬಿರದಲ್ಲಿ ಈ ಹಿಂದೆ ಪ್ರವಾಸಿ ಮಹಿಳೆ ಆನೆ ದಾಳಿಯಲ್ಲಿ ಸಾವನ್ನಪ್ಪಿದ ನಂತರ ರಾಜ್ಯದಲ್ಲಿ ಬಂದ್ ಆಗಿದ್ದ ಬಹುತೇಕ ಆನೆ ಬಿಡಾರಗಳು ಶೀಘ್ರದಲ್ಲೇ ಪ್ರವಾಸಿಗರ ವೀಕ್ಷಣೆಗೆ ಮುಕ್ತವಾಗಲಿದೆ. ಈಗಾಗಲೇ ಸರ್ಕಾರ ಸೂಚಿಸಿದ ಎಸ್ ಒ ಪಿ ನಿಯಮಗಳನ್ನು ಜಾರಿಗೆ ತಂದು ಮತ್ತಿಗೋಡು ಹಾಗೆಯೇ ಹಾರಂಗಿ ಶಿಬಿರಗಳು ಪ್ರವಾಸಿಗರಿಗೆ ಮುಕ್ತವಾಗಿದ್ದು ಇನ್ನೇನು ಶೀಘ್ರದಲ್ಲೇ ಸಕ್ರೇಬೈಲು ಆನೆಬಿಡಾರ ಪ್ರವಾಸಿಗರ ವೀಕ್ಷಣೆಗೆ ಮುಕ್ತವಾಗಲಿದೆ ಎಂಬ ಮಾಹಿತಿ ಬಲ್ಲ ಮೂಲಗಳಿಂದ ತಿಳಿದು ಬಂದಿ.
ಹೌದು ಈ ಹಿಂದೆ ಅಂದರೆ ಮೇ 18 2026 ರಂದು ಕೊಡಗು ದುಬಾರೆ ಶಿಬಿರದಲ್ಲಿ ಸಾಕಾನೆಗಳ ಜಗಳದಿಂದ ಮದ್ಯ ಸಿಲುಕಿದ ಚೆನ್ನೈ ಮೂಲದ ಮಹಿಳೆಯೊಬ್ಬರು ಸಾವನ್ನಪ್ಪಿದ್ದರು, ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ರಾಜ್ಯ ಸರ್ಕಾರ ರಾಜ್ಯದ ಎಲ್ಲಾ ಆನೆ ಬಿಡಾರಗಳಿಗೂ ಎಸ್ ಓ ಪಿ ನಿಯಮಗಳನ್ನು ಜಾರಿಗೊಳಿಸುವಂತೆ ಆದೇಶವನ್ನು ನೀಡಿತತ್ತು. ಅಷ್ಟೇ ಅಲ್ಲದೆ ಎಸ್ ಓ ಪಿ ನಿಯಮಗಳನ್ನು ಜಾರಿಗೆ ತರುವವರೆಗೂ ಆನೆ ಬಿಡಾರಕ್ಕೆ ಪ್ರವಾಸಿಗರ ವೀಕ್ಷಣೆಗೆ ನಿರ್ಭಂದವನ್ನು ಹೇರಿತ್ತು. ಈ ಹಿನ್ನೆಲೆ ಕಳೆದ 3 ತಿಂಗಳುಗಳಿಂದ ವಿವಿಧ ಆನೇ ಬಿಡಾರಗಳು ಎಸ್ಓ ಪಿ ನಿಯಮಗಳನ್ನು ಅಳವಡಿಸಿಕೊಳ್ಳುವಲ್ಲಿ ಕಾರ್ಯನಿರತವಾಗಿದ್ದವು, ಇದೀಗ ಮತ್ತಿಗೋಡು ಹಾಗೂ ಹಾರಂಗಿ ಆನೆ ಬಿಡರದಲ್ಲಿ ಸೂಕ್ತವಾದಂತಹ ಎಸ್ ಓ ಪಿ ನಿಯಮಗಳು ಜಾರಿಗೆ ತಂದು ಶಿಬಿರವನ್ನು ಸಾರ್ವಜನಿಕ ವೀಕ್ಷಣೆಗೆ ಮುಕ್ತಮಾಡಿದ್ದು ಅದೇ ಹಾದಿಯಲ್ಲಿ ಸಕ್ರೆಬೈಲ್ ಆನೆ ಬಿಡಾರ ಸಹ ಮುಂದುವರೆದಿದೆ.
ಯಾವಾಗ ಓಪನ್ ಆಗುತ್ತೆ ಸಕ್ರೆಬೈಲ್ ಆನೆ ಬಿಡಾರ ?
ಸಕ್ರೆಬೈಲ್ ಆನೆ ಬಿಡಾರ ಬಂದ್ ಆಗಿ ಸರಿ ಸುಮಾರು 3 ತಿಂಗಳುಗಳೇ ಕಳೆದಿವೆ.ಈ ಹಿನ್ನೆಲೆ ಸರ್ಕಾರ ಸೂಚಿಸಿದ ಎಸ್ ಓ ಪಿ ನಿಯಮಗಳನ್ನು ಜಾರಿಗೆ ತರುಲು ಸಿಬ್ಬಂದಿಗಳು ಎಲ್ಲಾ ರೀತಿಯ ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ. ಇದೀಗ ಸಿಸಿ ಟಿವಿ ಅಳವಡಿಕೆ ಸೇರಿದಂತೆ ಬ್ಯಾರಿಗೇಡ್ ಅಳವಡಿಕೆಗಳ ಕಾರ್ಯಗಳು ಬಹುತೇಕ ಮುಗಿದಿದ್ದು, ಇನ್ನೇನು ಕೆಲವೇ ದಿನಗಳಲ್ಲಿ ಸಾರ್ವಜನಿಕ ವೀಕ್ಷಣೆಗೆ ಮುಕ್ತವಾಗಲಿದೆ ಎಂಬ ವಿಚಾರ ಕೆಲವು ಖಾಸಗಿ ಮೂಲಗಳಿಂದ ತಿಳಿದುಬಂದಿದೆ.
ಏನಿದು ಎಸ್ ಒ ಪಿ ನಿಯಮ
1 . ನೇರ ಸಂಪರ್ಕ ಹಾಗೂ ಸ್ಪರ್ಶಕ್ಕೆ ನಿಷೇಧ
- ಆನೆಗಳನ್ನು ಮುಟ್ಟುವುದು, ಅಪ್ಪಿಕೊಳ್ಳುವುದು ಅಥವಾ ಹತ್ತಿರದಲ್ಲಿ ನಿಂತು ಸೆಲ್ಫಿ/ಫೋಟೋ ತೆಗೆದುಕೊಳ್ಳುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
- ಪ್ರವಾಸಿಗರು ಆನೆಗಳಿಗೆ ನೇರವಾಗಿ ಕೈಯಿಂದ ಬಾಳೆಹಣ್ಣು, ಬೆಲ್ಲ, ಕಬ್ಬು ಮುಂತಾದ ಆಹಾರ ನೀಡುವುದನ್ನು ತಡೆಯಲಾಗಿದೆ.
- ಪ್ರವಾಸಿಗರು ನದಿ ಅಥವಾ ಆನೆಗಳ ಸ್ನಾನದ ಸ್ಥಳಕ್ಕೆ ಇಳಿಯುವಂತಿಲ್ಲ; ಸ್ನಾನ ಮಾಡಿಸುವ ಹೈ-ರಿಸ್ಕ್ (ಅಪಾಯಕಾರಿ) ಚಟುವಟಿಕೆಗಳಲ್ಲಿ ಪ್ರವಾಸಿಗರಿಗೆ ಪ್ರವೇಶವಿಲ್ಲ. [
2. ವಲಯಗಳ ವಿಂಗಡಣೆ
ಆನೆ ಶಿಬಿರಗಳನ್ನು ಮೂರು ವಿಧದ ವಲಯಗಳಾಗಿ ವಿಂಗಡಿಸಲಾಗಿದೆ:
- ಗ್ರೀನ್ ವಲಯ (Green Zone): ಪ್ರವಾಸಿಗರು ಬ್ಯಾರಿಕೇಡ್ಗಳ ಹಿಂದೆ ನಿಂತು ಆನೆಗಳನ್ನು ವೀಕ್ಷಿಸಲು ಮಾತ್ರ ಮೀಸಲಾದ ಸುರಕ್ಷಿತ ವಲಯ.
- ಅಂಬರ್ ವಲಯ (Amber Zone): ಅಧಿಕೃತ ಸಿಬ್ಬಂದಿ ಹಾಗೂ ತುರ್ತು ಸೇವಾ ಸಿಬ್ಬಂದಿಗೆ ಮಾತ್ರ ಪ್ರವೇಶವಿರುವ ನಿಯಂತ್ರಿತ ಮಾರ್ಗ.
- ರೆಡ್ ವಲಯ (Red Zone): ಆನೆಗಳು ವಾಸಿಸುವ, ಆಹಾರ ಸೇವಿಸುವ ಹಾಗೂ ಸ್ನಾನ ಮಾಡುವ ಕಾರ್ಯಾಚರಣಾ ಸ್ಥಳ. ಇಲ್ಲಿ ಮಾವುತರು, ಕಾವಡಿಗರು ಮತ್ತು ಪಶುವೈದ್ಯರಿಗೆ ಮಾತ್ರ ಪ್ರವೇಶವಿರುತ್ತದೆ.
3. ಕನಿಷ್ಠ ಅಂತರ ಮತ್ತು ಸಮಯದ ಮಿತಿ
- ಆನೆಗಳಿಂದ ಪ್ರವಾಸಿಗರು ಕನಿಷ್ಠ 30 ಸುರಕ್ಷಿತ ಅಂತರ ಕಾಯ್ದುಕೊಳ್ಳಬೇಕು.
- ಒಂದೇ ಸಮಯದಲ್ಲಿ ಗ್ರೀನ್ ವಲಯದಲ್ಲಿ ೫೦ ರಿಂದ ೭೫ ಪ್ರವಾಸಿಗರಿಗೆ ಮಾತ್ರ ಅವಕಾಶವಿರುತ್ತದೆ. ಪ್ರತಿ ಬ್ಯಾಚ್ ಪ್ರವಾಸಿಗರಿಗೆ ೪೫ ರಿಂದ ೬೦ ನಿಮಿಷಗಳ ವೀಕ್ಷಣೆ ಮತ್ತು ಸುರಕ್ಷತಾ ಮಾರ್ಗದರ್ಶನದ ಸಮಯ ನಿಗದಿಪಡಿಸಲಾಗಿದೆ. [1, 2]
4. ಆನೆಗಳ ಆರೋಗ್ಯ ಮತ್ತು ಪ್ರದರ್ಶನದ ಮಿತಿ
- ಮಸ್ತದಲ್ಲಿದ್ದ (ಮದವೇರಿದ್ದ), ಆಕ್ರಮಣಕಾರಿ ಸ್ವಭಾವದ, ಗಾಯಗೊಂಡ ಅಥವಾ ಅನಾರೋಗ್ಯಪೂರಿತ ಆನೆಗಳನ್ನು ಸಾರ್ವಜನಿಕ ಪ್ರದರ್ಶನದಿಂದ ದೂರವಿಡಲಾಗುತ್ತದೆ.
- ಸಾರ್ವಜನಿಕ ವೀಕ್ಷಣೆಗೆ ಏಕಕಾಲದಲ್ಲಿ ಗರಿಷ್ಠ 10 ಆನೆಗಳಿಗೆ ಮಾತ್ರ ಅವಕಾಶ ನೀಡಲಾಗುತ್ತದೆ. ಪ್ರತಿ ದಿನ ಆನೆಗಳ ಆರೋಗ್ಯ ಹಾಗೂ ವರ್ತನೆಯನ್ನು ಪರೀಕ್ಷಿಸಿ ನಂತರವೇ ಪ್ರದರ್ಶನಕ್ಕೆ ಬಿಡಲಾಗುತ್ತದೆ.
5. ಇತರೆ ಪ್ರಮುಖ ನಿಯಮಗಳು
- ಆನೆಗಳಿಗೆ ವಿಶ್ರಾಂತಿ ಹಾಗೂ ಬಿಡಾರದ ನಿರ್ವಹಣೆಗಾಗಿ ವಾರದಲ್ಲಿ ಒಂದು ದಿನ (ಸಾಮಾನ್ಯವಾಗಿ ಮಂಗಳವಾರ) ಸಾರ್ವಜನಿಕ ಪ್ರವೇಶಕ್ಕೆ ಬಿಡಾರದಲ್ಲಿ ರಜೆ ಇರುತ್ತದೆ.
- ಪ್ರಮುಖ ಪ್ರದೇಶಗಳಲ್ಲಿ ಸಿಸಿಟಿವಿ (CCTV) ಕಣ್ಗಾವಲು ಹಾಗೂ ತುರ್ತು ಚಿಕಿತ್ಸೆ, ಪ್ರಥಮ ಚಿಕಿತ್ಸಾ ಸಾಮಾಗ್ರಿಗಳು ಮತ್ತು ಆಂಬ್ಯುಲೆನ್ಸ್ ವ್ಯವಸ್ಥೆ ಕಡ್ಡಾಯಗೊಳಿಸಲಾಗಿದೆ.
ಇದೀಗ ಸಕ್ರೆಬೈಲ್ನ ಆನೆ ಬಿಡಾರದಲ್ಲಿಯೂ ಸಹ ಎಸ್ ಓ ಪಿ ನಿಯಮಗಳನ್ನು ಅಳವಡಿಸಿಕೊಂಡಿದ್ದು, ವಿವಿಧ ಪ್ರದೇಶಗಳಲ್ಲಿ 6 ಸಿಸಿಟಿವಿಗಳನ್ನು ಅಳವಡಿಸಲಾಗಿದೆ. ಇನ್ನಿತರೇ ಎಸ್ ಓ ಪಿ ಇನ್ನುಳಿದ ಎಸ್ ಓ ಪಿ ನಿಯಮಗಳಿಗೆ ಸಂಬಂಧಿಸಿದ ಕಾರ್ಯಗಳು ಬಿರುಸಿನಿಂದ ಸಾಗಿದೆ, ಇದೀಗ ಸಿಬ್ಬಂದಿ ಸಕ್ರೆಬೈಲ್ ಆನೆ ಬಿಡಾರದ ಪ್ರದೇಶಗಳನ್ನು ಸ್ವಚ್ಚಗೊಳಿಸುವ ಕಾರ್ಯದಲ್ಲಿ ತೊಡಗಿದ್ದು, ಎಲ್ಲಾ ಅಂದುಕೊಂಡಂತೆ ಆದರೆ ಶಿಘ್ರದಲ್ಲೇ ಬಿಡಾರ ಸಾರ್ವಜನಿಕ ವೀಕ್ಷಣೆಗೆ ಮುಕ್ತವಾಗುವುದು ಎಂಬ ಮಾಹಿತಿ ಕೆಲವು ಖಾಸಗಿ ಮೂಲಗಳಿಂದ ತಿಳಿದು ಬಂದಿದೆ.
