ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ : ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್ ನೀಡಿದ್ದ ಅಖಿಲ ಭಾರತ ಬ್ಯಾಂಕ್ ಮುಷ್ಕರಕ್ಕೆ ಶಿವಮೊಗ್ಗದಲ್ಲಿಯೂ ಉತ್ತಮ ಬೆಂಬಲ ವ್ಯಕ್ತವಾಗಿದೆ.
ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಬಿ.ಹೆಚ್.ರಸ್ತೆಯಲ್ಲಿರುವ ಎಸ್ ಬಿ ಐ ಬ್ಯಾಂಕ್ ಮುಂಭಾಗದಿಂದ ಗೋಪಿ ಸರ್ಕಲ್ವರೆಗೆ ನೌಕರರು ಪ್ರತಿಭಟನಾ ಮೆರವಣಿಗೆಯನ್ನು ನಡೆಸಿದರು. ಈ ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸಿದ ನೂರಾರು ನೌಕರರು ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ವಿವಿಧ ಘೋಷಣೆಗಳನ್ನು ಕೂಗಿದರು.
ಈ ಸಂದರ್ಭದಲ್ಲಿ ನೌಕರರ ಸಂಘಟನೆಗಳು ತಮ್ಮ ಹಲವು ಪ್ರಮುಖ ಬೇಡಿಕೆಗಳನ್ನು ಮುನ್ನೆಲೆಗೆ ತಂದವು. ಸಮಾನ ಕೊಡುಗೆಗೆ ಸಮಾನ ಪಿಎಲ್ ಐ ಗೌರವ ನೀಡಬೇಕು ಹಾಗೂ ಪಿಎಲ್ ಐ ಹಂಚಿಕೆಯಲ್ಲಿ ನಡೆಯುತ್ತಿರುವ ತಾರತಮ್ಯವನ್ನು ತಕ್ಷಣವೇ ಸರಿಪಡಿಸಬೇಕು ಎಂದು ಪ್ರತಿಭಟನಾಕಾರರುಆಗ್ರಹಿಸಿದರು. ಇದರೊಂದಿಗೆ 5 ದಿನಗಳ ಬ್ಯಾಂಕಿಂಗ್ ವ್ಯವಸ್ಥೆಯನ್ನು ಕೂಡಲೇ ಜಾರಿಗೆ ತರಲು ಮನವಿ ಮಾಡಿದ ಅವರು, ಬ್ಯಾಂಕ್ಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಶೀಘ್ರವಾಗಿ ಭರ್ತಿ ಮಾಡಲು ಒತ್ತಾಯಿಸಿದರು. ಹಳೆಯ ಪಿಂಚಣಿ ವ್ಯವಸ್ಥೆಯನ್ನು ಪುನಃ ಜಾರಿಗೆ ತರುವುದು ಹಾಗೂ ನಿವೃತ್ತ ಬ್ಯಾಂಕ್ ನೌಕರರ ಪಿಂಚಣಿಯನ್ನು ತಕ್ಷಣ ಪರಿಷ್ಕರಣೆ ಮಾಡುವುದು ನೌಕರರ ಮುಖ್ಯ ಬೇಡಿಕೆಗಳಾಗಿದ್ದವು.
ತಮ್ಮ ಬೇಡಿಕೆಗಳು ಈಡೇರುವವರೆಗೆ ಹೋರಾಟವನ್ನು ಯಾವುದೇ ಕಾರಣಕ್ಕೂ ಹಿಂಪಡೆಯದೆ ಮುಂದುವರಿಸುವುದಾಗಿ ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್ ಎಚ್ಚರಿಕೆ ನೀಡಿದೆ.
