ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಕಳೆದ ಕೆಲವು ವಾರಗಳಿಂದ ತೀವ್ರ ಕುತೂಹಲ ಮೂಡಿಸಿದ್ದ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸ್ಥಾನದ ಆಯ್ಕೆ ಕೊನೆಗೂ ಅಂತಿಮಗೊಂಡಿದೆ. ಜಿಲ್ಲಾ ಕಾಂಗ್ರೆಸ್‌ನ ನೂತನ ಅಧ್ಯಕ್ಷರನ್ನಾಗಿ ಕಾಂಗ್ರೆಸ್ ಮುಖಂಡ ಹೆಚ್.ಸಿ. ಯೋಗೇಶ್ ಅವರನ್ನು ಅಖಿಲ ಭಾರತ ಕಾಂಗ್ರೆಸ್ ಸಮಿತಿ ನೇಮಕ ಮಾಡಿದೆ. ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಸೆಪ್ಟೆಂಬರ್ 9ರಂದು ಬಿಡುಗಡೆ ಮಾಡಿರುವ ಅಧಿಕೃತ ಪಟ್ಟಿಯು ಮಲೆನಾಡು ಟುಡೆಗೆ ಲಭ್ಯವಾಗಿದೆ.
ಈ ಪಟ್ಟಿಯಲ್ಲಿ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿ ಹೆಚ್.ಸಿ. ಯೋಗೇಶ್ ಅವರ ಹೆಸರನ್ನು ಪ್ರಕಟಿಸಲಾಗಿದೆ. ಕಾಂಗ್ರೆಸ್ ಅಧ್ಯಕ್ಷರ ಅನುಮೋದನೆಯೊಂದಿಗೆ ಈ ನೇಮಕಾತಿ ತಕ್ಷಣದಿಂದಲೇ ಜಾರಿಗೆ ಬರಲಿದೆ ಎಂದು ಎಐಸಿಸಿ ತಿಳಿಸಿದೆ. ಅಧಿಕೃತ ಪಟ್ಟಿಯ 32ನೇ ಕ್ರಮಸಂಖ್ಯೆಯಲ್ಲಿ ಶಿವಮೊಗ್ಗ ಜಿಲ್ಲೆಗೆ ಹೆಚ್.ಸಿ. ಯೋಗೇಶ್ ಅವರ ಹೆಸರಿದೆ.
25ಕ್ಕೂ ಹೆಚ್ಚು ಮಂದಿ ಅಧ್ಯಕ್ಷ ಗಾದಿಯ ಆಕಾಂಕ್ಷಿಗಳು
ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಈ ಬಾರಿ ಹಿಂದೆಂದಿಗಿಂತಲೂ ಹೆಚ್ಚಿನ ಪೈಪೋಟಿ ಏರ್ಪಟ್ಟಿತ್ತು. ‘ಅಧ್ಯಕ್ಷ… ಅಧ್ಯಕ್ಷ.. ಅಧ್ಯಕ್ಷ… ಯಾರಾಗ್ತಾರೆ ಶಿವಮೊಗ್ಗ ಕಾಂಗ್ರೆಸ್ ಅಧ್ಯಕ್ಷ!’ ಎಂಬ ಶೀರ್ಷಿಕೆಯಡಿ ಆಗಸ್ಟ್ 11ರಂದು ಮಲೆನಾಡು ಟುಡೆ ಈ ಬಗ್ಗೆ ವಿಸ್ತೃತ ವರದಿ ಪ್ರಕಟಿಸಿತ್ತು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ 25ಕ್ಕೂ ಹೆಚ್ಚು ಮುಖಂಡರು ಆಕಾಂಕ್ಷಿಗಳಾಗಿದ್ದು, ನೇಮಕಾತಿ ಪ್ರಕ್ರಿಯೆಯೇ ಕಾಂಗ್ರೆಸ್ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿತ್ತು.
ಆ ಸಂದರ್ಭದಲ್ಲಿ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ವೀಕ್ಷಕರಾಗಿ ಶಿವಮೊಗ್ಗಕ್ಕೆ ಆಗಮಿಸಿದ್ದ ಶರತ್ ಅವರು ಪಕ್ಷದ ತಳಮಟ್ಟದ ಕಾರ್ಯಕರ್ತರು ಹಾಗೂ ಮುಖಂಡರಿಂದ ಅಭಿಪ್ರಾಯ ಸಂಗ್ರಹಿಸುತ್ತಿದ್ದರು. ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋಗಬಲ್ಲ ನಾಯಕನ ಆಯ್ಕೆಗಾಗಿ ಅಭಿಪ್ರಾಯ ಪಡೆದ ಅವರು ಕಾರ್ಯಕರ್ತರ ಒಲವು ಮತ್ತು ಅಭಿಪ್ರಾಯದ ಆಧಾರದಲ್ಲಿ 6 ಮಂದಿಯ ಹೆಸರನ್ನು ಹೈಕಮಾಂಡ್‌ಗೆ ಸಲ್ಲಿಸುವ ಪ್ರಕ್ರಿಯೆಯನ್ನ ಯಶಸ್ವಿಯಾಗಿ ನಿಭಾಯಿಸಿದ್ದರು.
ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳ ಪಟ್ಟಿಯಲ್ಲಿ ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಮಾಜಿ ಸಂಸದ ಆಯನೂರು ಮಂಜುನಾಥ್, ಶಿವಮೊಗ್ಗ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಚ್.ಎಸ್. ಸುಂದರೇಶ್, ಪ್ರಾಧಿಕಾರದ ಮಾಜಿ ಅಧ್ಯಕ್ಷ ಎನ್. ರಮೇಶ್, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷೆ ವೇದಾ ವಿಜಯಕುಮಾರ್, ಮಹಾನಗರ ಪಾಲಿಕೆಯ ಮಾಜಿ ಉಪ ಮೇಯರ್ ಹಾಗೂ ಜಿಲ್ಲಾ ಮಹಿಳಾ ಘಟಕದ ಮಾಜಿ ಅಧ್ಯಕ್ಷೆ ವಿಜಯಲಕ್ಷ್ಮಿ ಪಾಟೀಲ್ ಸೇರಿದಂತೆ ಹಲವು ಮುಖಂಡರ ಹೆಸರುಗಳು ಚರ್ಚೆಯಲ್ಲಿದ್ದವು, ಮೇಲಾಗಿ ಹಲವರು ತಮ್ಮದೇ ಆದ ಶೈಲಿಯಲ್ಲಿ ಲಾಭಿ ಪ್ರಯತ್ನವನ್ನ ಸಹ ನಡೆಸಿದ್ದರು.
ಈ ಸ್ಪರ್ಧೆಯಲ್ಲಿ ಸದ್ಯ ಹೆಚ್ ಸಿ ಯೋಗೇಶ್ರವರ ಕೈ ಮೇಲಾಗಿದೆ. ಈ ಬಾರಿ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರ ನೇಮಕವನ್ನು ಸಂಘಟನ್ ಸೃಜನ್ ಅಭಿಯಾನದ ಭಾಗವಾಗಿ ನಡೆಸಲಾಗಿದೆ ಎಂದು ಎಐಸಿಸಿ ತಿಳಿಸಿದೆ. ಪ್ರತಿ ಜಿಲ್ಲೆಗೆ ನೇಮಕಗೊಂಡಿದ್ದ ಎಐಸಿಸಿ ವೀಕ್ಷಕರು ಪಕ್ಷದ ಪದಾಧಿಕಾರಿಗಳು ಮತ್ತು ಸಂಬಂಧಪಟ್ಟವರೊಂದಿಗೆ ಸಮಾಲೋಚನೆ ನಡೆಸಿ ವಿಸ್ತೃತ ವರದಿ ಸಲ್ಲಿಸಿದ್ದರು. ನಂತರ ಪ್ರತಿಯೊಬ್ಬ ವೀಕ್ಷಕರೊಂದಿಗೆ ಪ್ರತ್ಯೇಕವಾಗಿ ಚರ್ಚೆ ನಡೆಸುವುದರ ಜೊತೆಗೆ ಹಿರಿಯ ನಾಯಕರೊಂದಿಗೂ ಸಮಾಲೋಚನೆ ನಡೆಸಿ ನೇಮಕಾತಿ ಅಂತಿಮಗೊಳಿಸಲಾಗಿದೆ ಎಂದು ಕೆ.ಸಿ. ವೇಣುಗೋಪಾಲ್ ಅವರ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
