ಮಲೆನಾಡು ಟುಡೆ ಸುದ್ದಿ/ ಹೊಸನಗರ: ಪಶ್ಚಿಮ ಘಟ್ಟ ಪರಿಸರ ಸೂಕ್ಷ್ಮ ಪ್ರದೇಶ ಎಂದು ಗುರುತಿಸುವ ಕಸ್ತೂರಿ ರಂಗನ್ ವರದಿಯನ್ನು ಯಾವುದೇ ಕಾರಣಕ್ಕೂ ಜಾರಿಗೊಳಿಸಬಾರದು ಹಾಗೂ ಅದನ್ನು ತಕ್ಷಣವೇ ಮಾರ್ಪಾಡು ಮಾಡಬೇಕು ಎಂದು ಆಗ್ರಹಿಸಿ ಶಿವಮೊಗ್ಗ ಜಿಲ್ಲೆಯ ಸಹಕಾರಿ ಒಕ್ಕೂಟಗಳ ನೇತೃತ್ವದಲ್ಲಿ ಹೊಸನಗರದಲ್ಲಿ ಬೃಹತ್ ಪಾದಯಾತ್ರೆ ನಡೆಯಿತು .
ಈ ಪ್ರತಿಭಟನಾ ಪಾದಯಾತ್ರೆಯು ಹೊಸನಗರ ತಾಲೂಕಿನ ಐತಿಹಾಸಿಕ ಕಾರಣಗಿರಿ ದೇವಸ್ಥಾನದಿಂದ ಪ್ರಾರಂಭವಾಗಿ ಹೊಸನಗರದ ತಾಲೂಕು ಕೇಂದ್ರದವರೆಗೆ ಅತ್ಯಂತ ಯಶಸ್ವಿಯಾಗಿ ಸಾಗಿತು. ಈ ಬೃಹತ್ ಜಾಗೃತಿ ಜಾಥಾದಲ್ಲಿ ಹೊಸನಗರ ಹಾಗೂ ಸುತ್ತಮುತ್ತಲಿನ ಗ್ರಾಮಾಂತರ ಪ್ರದೇಶಗಳ ಸಾವಿರಾರು ರೈತರು, ಕೃಷಿಕರು ಮತ್ತು ಸಹಕಾರಿಗಳು ಸ್ವಯಂಪ್ರೇರಿತರಾಗಿ ಭಾಗವಹಿಸಿ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು
ಶಾಸಕ ಬೇಳೂರು ಗೋಪಾಲಕೃಷ್ಣ ಅವರು ಸ್ವತಃ ರೈತರೊಂದಿಗೆ ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಿ ಪ್ರತಿಭಟನೆಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದರು. ಶಿವಮೊಗ್ಗ ಜಿಲ್ಲೆಯ ಸುಮಾರು 447 ಹಳ್ಳಿಗಳ ಸಾರ್ವಜನಿಕರ ಮೇಲೆ ಕಸ್ತೂರಿ ರಂಗನ್ ವರದಿಯು ತೂಗುಗತ್ತಿಯಂತೆ ತೂಗುತ್ತಿದ್ದು, ಇದು ಜನರ ನಿತ್ಯಜೀವನ ಮತ್ತು ಕೃಷಿ ಚಟುವಟಿಕೆಗಳಿಗೆ ತೀವ್ರ ಭಂಗ ತರಲಿದೆ ಎಂದು ಹೋರಾಟಗಾರರು ಎಚ್ಚರಿಸಿದರು .
ಕಸ್ತೂರಿ ರಂಗನ್ ವರದಿಯನ್ನು ಯಥಾವತ್ತಾಗಿ ಜಾರಿಗೆ ತರದೆ, ನೆರೆಯ ಕೇರಳ ರಾಜ್ಯದಲ್ಲಿ ಜಾರಿಗೆ ತಂದ ಮಾದರಿಯಲ್ಲೇ ಜನವಸತಿ ಮತ್ತು ಕೃಷಿ ಭೂಮಿಯನ್ನು ಹೊರಗಿಟ್ಟು ಸಂಪೂರ್ಣ ಮಾರ್ಪಾಡು ಮಾಡಬೇಕು. ಅಲ್ಲಿಯವರೆಗೆ ನಮ್ಮ ಈ ಜನಪರ ಹೋರಾಟ ತಡೆಯುವುದಿಲ್ಲ ಎಂದು ಪಾದಯಾತ್ರೆಯ ನೇತೃತ್ವ ವಹಿಸಿದ್ದ ಮುಖಂಡರು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
