ಮಲೆನಾಡುಟುಡೆ ಸುದ್ದಿ/ ಶಿವಮೊಗ್ಗ: ಕಾಲ ಬದಲಾದಂತೆ ಮನುಷ್ಯರ ವರ್ತನೆಗಳು, ಮನಸ್ಥಿತಿಗಳು ಸಹ ಬದಲಾಗುತ್ತೆ. ಅದಕ್ಕೆ ಸ್ಪಷ್ಟ ಉದಾಹರಣೆ ಈ ಜೆನ್-ಝಿ (Gen-Z) ಯುಗ. ಅವರ ಆಲೋಚನೆ, ಟ್ರೆಂಡಿಂಗ್ ತಕ್ಕಹಾಗೆ ಹೊಂದಿಕೊಳ್ಳುವ ರೀತಿ ಎಲ್ಲದರಲ್ಲಿಯೂ ಸಹ ಅವರು ಮುಂದೆ ಎಂದೇ ಹೇಳಬಹುದು. ಇದರ ನಡುವೆ ಮನುಷ್ಯರಷ್ಟೇ ಅಲ್ಲ, ಪ್ರಾಣಿಗಳು ಸಹ ಅದಕ್ಕೆ ಹೊರತಾಗಿಲ್ಲ. ಮನುಷ್ಯ ಹೇಗೆ ಬದಲಾಗುತ್ತಾನೋ ಅವುಗಳು ಸಹ ಅವರನ್ನು ನೋಡಿ ಅದನ್ನೇ ಮಾಡಲು ಶುರು ಮಾಡುತ್ತವೆ. ಈ ವಿಚಾರದ ಕುರಿತಾಗಿ ಇಷ್ಟೆಲ್ಲಾ ಡೀಟೇಲ್ಸ್ ಕೊಡ್ತಿರೋದಕ್ಕೆ ಕಾರಣ ಏನಂದರೆ, ಇಲ್ಲೊಂದು ಮುಸಿಯ ಯುವಕರೊಂದಿಗೆ ಕುಳಿತುಕೊಂಡು ಸೆಲ್ಫಿಗೆ ಪೋಸ್ ಕೊಟ್ಟಿರುವುದು ಎಲ್ಲೆಡೆ ವೈರಲ್ ಆಗ್ತಾ ಇದೆ.
ಹೌದು, ಮುಸಿಯ ಸೆಲ್ಫಿಗೆ ಪೋಸ್ ಕೊಟ್ಟ ಅಪರೂಪದ ದೃಶ್ಯ ಕಂಡಿದ್ದು ಜಿಲ್ಲೆಯ 15ನೇ ಮೈಲಿಕಲ್ಲಿನಲ್ಲಿ. ಕಾಲೇಜಿಗೆ ಹೋಗುವ ಕೆಲವು ಯುವಕರು ಬಸ್ಗಾಗಿ ಬಸ್ಸ್ಟ್ಯಾಂಡ್ನಲ್ಲಿ ಕುಳಿತಿದ್ದರು. ಈ ಸಂದರ್ಭದಲ್ಲಿ ಕಾಡಿನಿಂದ ಕಪ್ಪು ಮುಖದ, ಉದ್ದ ಬಾಲದ ಮುಸಿಯೊಂದು ಸ್ಥಳಕ್ಕೆ ಎಂಟ್ರಿ ಕೊಟ್ಟಿದೆ. ಮುಸಿಯನ ಚೂಪಾದ ಹಲ್ಲನ್ನು ನೋಡಿದ ಯುವಕರು ಸ್ವಲ್ಪ ಗಾಬರಿಯಾದರೂ, ಅಲ್ಲಿದ್ದ ಯುವಕನೊಬ್ಬ ಅದರ ಚಲನವಲನವನ್ನು ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾನೆ.
ವೀಡಿಯೋದಲ್ಲಿರುವಂತೆ ಮೊದಲಿಗೆ ರಸ್ತೆಯಲ್ಲಿ ಕೂತಿದ್ದ ಮುಸಿಯು ಯುವಕರು ಮಾಡುತ್ತಿದ್ದ ವೀಡಿಯೋವನ್ನು ನೋಡಿ, ಅಲ್ಲಿಯೇ ಬಸ್ಸ್ಟ್ಯಾಂಡ್ನಲ್ಲಿ ಕುಳಿತಿದ್ದ ಯುವಕರ ಪಕ್ಕಕ್ಕೆ ಹೋಗಿದೆ. ಆದರೂ ಯುವಕರು ಬಂಡ ಧೈರ್ಯ ಮಾಡಿ ಅದರೊಂದಿಗೆ ಸೆಲ್ಫಿಗೆ ಮುಂದಾಗಿದ್ದಾರೆ. ಸೆಲ್ಫಿಗೆ ಕ್ಯಾಮೆರಾ ಹಿಡಿದಿದ್ದೇ ತಡ, ಮನುಷ್ಯರು ಹೇಗೆ ಮುಂದೆ ಬಂದು ಹಲ್ಲು ಬಿಟ್ಟು ಪೋಸ್ ಕೊಡ್ತಾರೋ, ಈ ಮುಸಿಯ ಸಹ ಯುವಕನ ಕಾಲಿನ ಮೇಲೆ ಕೈಯಿಟ್ಟು ಫೋಟೋಗೆ ಪೋಸ್ ಕೊಟ್ಟಿದೆ.
ಸದ್ಯ ಅಲ್ಲಿ ಮುಸಿಯ ತನ್ನ ಕುಚೇಷ್ಟೆಯನ್ನು ತೋರಿಸಲಿಲ್ಲ. ಸಾಮಾನ್ಯವಾಗಿ ಕೋತಿಗಳು ಅಥವಾ ಮುಸಿಯಗಳು ಮನುಷ್ಯರನ್ನು ಕಂಡರೆ ದಾಳಿ ಮಾಡುವುದು ಸಹಜ. ಅದಕ್ಕೆ ನಿದರ್ಶನ ವೆಂವಂತೆ ಈ ಹಿಂದೆ ಅಬ್ಬಲಗೆರೆಯಲ್ಲಿ ಬೈಕ್ ಮೇಲೆ ಕುಳಿತಿದ್ದ ಮಂಗವೊಂದು, ಸವಾರ ಹತ್ತಲು ಬಂದಾಗ ಅವರ ಮೇಲೆ ದಾಳಿ ನಡೆಸಿದ ಘಟನೆ ನಡೆದಿತ್ತು. ಆದರೆ, ಈ ಮುಸಿಯ ಯಾವುದೇ ತುಂಟಾಟ ಮಾಡದೆ, ಯುವಕರೊಂದಿಗೆ ಸೌಮ್ಯವಾಗಿ ಕುಳಿತು ತನ್ನ ಚೂಪಾದ ಹಲ್ಲುಗಳನ್ನು ಪ್ರದರ್ಶಿಸುತ್ತಾ ಸೆಲ್ಫಿಗೆ ಪೋಸ್ ಕೊಟ್ಟಿರುವುದು ಸಾರ್ವಜನಿಕರ ಆಶ್ಚರ್ಯಕ್ಕೆ ಕಾರಣವಾಗಿದೆ.
ಆಧುನಿಕ ಯುಗದಲ್ಲಿ ಮನುಷ್ಯನ ಜೀವನಶೈಲಿ ಮತ್ತು ತಂತ್ರಜ್ಞಾನ ಎಷ್ಟರಮಟ್ಟಿಗೆ ಬೆಳೆದಿದೆಯೆಂದರೆ, ಕಾಡುಪ್ರಾಣಿಗಳು ಸಹ ಮನುಷ್ಯರ ನಡವಳಿಕೆಯನ್ನು ಸಹಜವಾಗಿ ಅನುಕರಿಸಲು ಶುರುಮಾಡಿವೆ ಎಂಬುದಕ್ಕೆ ಈ ಅಪರೂಪದ ಸೆಲ್ಫಿ ಸನ್ನಿವೇಶವೇ ಸಾಕ್ಷಿ.
ಬರಹ: ಪ್ರತಾಪ್ ತೀರ್ಥಹಳ್ಳಿ
