ಮಲೆನಾಡು ಟುಡೆ ಸುದ್ದಿ / ಬೈಂದೂರು /ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮೂಕಾಂಬಿಕಾ ರೋಡ್ ಬೈಂದೂರು ರೈಲ್ವೆ ನಿಲ್ದಾಣದ (Byndoor Railway Station) ಸಮಗ್ರ ಅಭಿವೃದ್ಧಿ ಹಾಗೂ ಶ್ರೀ ಕ್ಷೇತ್ರ ಕೊಲ್ಲೂರು ಮೂಕಾಂಬಿಕಾ ದೇವಿಯ ಭಕ್ತರ ಅನುಕೂಲಕ್ಕಾಗಿ ಕೈಗೊಂಡಿರುವ ವಿವಿಧ ಅಭಿವೃದ್ಧಿ ಕಾರ್ಯಗಳ ಕುರಿತು ಸಂಸದ ಬಿ.ವೈ. ರಾಘವೇಂದ್ರ ಅವರು ಇಂದು ನಿಲ್ದಾಣಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಕುರಿತು ಪ್ರಕಟಣೆ ನೀಡಿರುವ ಸಂಸದ ಬಿ.ವೈ. ರಾಘವೇಂದ್ರ ಅವರು, ಈ ಹಿಂದೆ ಕೇವಲ ಹಾಲ್ಟ್ ಸ್ಟೇಷನ್ ಆಗಿದ್ದ ಬೈಂದೂರು ರೈಲ್ವೆ ನಿಲ್ದಾಣವನ್ನು ₹2.64 ಕೋಟಿ ವೆಚ್ಚದಲ್ಲಿ ನೂತನ ನಿಲ್ದಾಣ, ಗಣಕೀಕೃತ ಟಿಕೆಟ್ ಕಾದಿರಿಸುವಿಕೆ ವ್ಯವಸ್ಥೆ (PRS) ಹಾಗೂ ಪ್ಲಾಟ್ಫಾರ್ಮ್ ವಿಸ್ತರಣೆ ಸೇರಿದಂತೆ ವಿವಿಧ ಸೌಲಭ್ಯಗಳೊಂದಿಗೆ ಮೇಲ್ದರ್ಜೆಗೇರಿಸಲಾಗಿದೆ ಎಂದು ತಿಳಿಸಿದ್ದಾರೆ.
ಈ ಹಿಂದೆ ಒಂದೂ ಎಕ್ಸ್ಪ್ರೆಸ್ ರೈಲು ನಿಲುಗಡೆಯಾಗದ ಮೂಕಾಂಬಿಕಾ ರೋಡ್ ಬೈಂದೂರು ರೈಲ್ವೆ ನಿಲ್ದಾಣದಲ್ಲಿ ಈಗ 50ಕ್ಕೂ ಹೆಚ್ಚು ಎಕ್ಸ್ಪ್ರೆಸ್ ರೈಲುಗಳು ನಿಲುಗಡೆಯಾಗುತ್ತಿವೆ. ಇದರಿಂದ ಪ್ರಯಾಣಿಕರಿಗೆ ಅನುಕೂಲವಾಗುವುದರ ಜೊತೆಗೆ ನೂರಾರು ಟ್ಯಾಕ್ಸಿ ಹಾಗೂ ಆಟೋ ಚಾಲಕರಿಗೆ ಉದ್ಯೋಗಾವಕಾಶ ದೊರೆತಿದೆ ಎಂದು ಬಿ.ವೈ. ರಾಘವೇಂದ್ರ ತಿಳಿಸಿದ್ದಾರೆ.
ಮೂಕಾಂಬಿಕಾ ರೋಡ್ ಬೈಂದೂರು ರೈಲ್ವೆ ನಿಲ್ದಾಣವು ಶ್ರೀ ಕ್ಷೇತ್ರ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಿಂದ ಕೇವಲ 27 ಕಿ.ಮೀ. ದೂರದಲ್ಲಿದ್ದು, ರಾಷ್ಟ್ರೀಯ ಹೆದ್ದಾರಿ-766ಸಿ ಮೂಲಕ ನೇರ ರಸ್ತೆ ಸಂಪರ್ಕ ಹೊಂದಿದೆ. ಕರ್ನಾಟಕ, ಕೇರಳ, ತಮಿಳುನಾಡು, ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶ ಹಾಗೂ ಗೋವಾದಿಂದ ಕೊಲ್ಲೂರು ಕ್ಷೇತ್ರಕ್ಕೆ ಆಗಮಿಸುವ ಭಕ್ತರ ಅನುಕೂಲಕ್ಕಾಗಿ ಈ ನಿಲ್ದಾಣವನ್ನು ಕೊಲ್ಲೂರು ಮೂಕಾಂಬಿಕಾ ಕ್ಷೇತ್ರದ ಅಧಿಕೃತ ರೈಲು ನಿಲ್ದಾಣವಾಗಿ ಗುರುತಿಸುವಂತೆ ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ
ಉಡುಪಿ ಜಿಲ್ಲಾ ಕೇಂದ್ರದ ನಂತರ ಅತಿ ಹೆಚ್ಚು ಆದಾಯ ತರುವ ರೈಲ್ವೆ ನಿಲ್ದಾಣವಾಗಿರುವ ಬೈಂದೂರನ್ನು ಸಂಪೂರ್ಣ ಸೌಲಭ್ಯಗಳನ್ನು ಹೊಂದಿರುವ ‘Fully Fledged’ ರೈಲ್ವೆ ನಿಲ್ದಾಣವನ್ನಾಗಿ ರೂಪಿಸುವ ಉದ್ದೇಶದಿಂದ ₹86 ಕೋಟಿ ವೆಚ್ಚದ ಸಮಗ್ರ ಅಭಿವೃದ್ಧಿ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ತಿಳಿಸಿದ್ದಾರೆ. ಈ ಪ್ರಸ್ತಾವನೆಯ ಮೂಲಕ ನಿಲ್ದಾಣದ ಮೂಲಸೌಕರ್ಯ, ಪ್ರಯಾಣಿಕರ ಸೌಲಭ್ಯ ಹಾಗೂ ಒಟ್ಟಾರೆ ರೈಲ್ವೆ ಸೇವೆಗಳನ್ನು ಮತ್ತಷ್ಟು ವಿಸ್ತರಿಸುವ ಉದ್ದೇಶ ಹೊಂದಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ಹೇಳಿದ್ದಾರೆ.
ಮುಂಬರುವ ದಿನಗಳಲ್ಲಿ ವಿವಿಧ ರಾಜ್ಯಗಳ ಪ್ರಮುಖ ರೈಲುಗಳು ಮೂಕಾಂಬಿಕಾ ರೋಡ್ ಬೈಂದೂರು ರೈಲ್ವೆ ನಿಲ್ದಾಣದಲ್ಲಿ ನಿಲುಗಡೆಯಾಗುವಂತೆ ಪ್ರಯತ್ನ ಮುಂದುವರಿಸಲಾಗಿದೆ. ಇದೇ ವೇಳೆ ಬಿಜೂರು ಹಾಗೂ ಸೇನಾಪುರ ರೈಲ್ವೆ ನಿಲ್ದಾಣಗಳಲ್ಲಿಯೂ ಎಕ್ಸ್ಪ್ರೆಸ್ ರೈಲುಗಳ ನಿಲುಗಡೆ ಕಲ್ಪಿಸುವಂತೆ ಮನವಿ ಮಾಡಲಾಗಿದೆ ಎಂದು ಬಿ.ವೈ. ರಾಘವೇಂದ್ರ ತಿಳಿಸಿದ್ದಾರೆ.
