ಮಲೆನಾಡು ಟುಡೆ ಸುದ್ದಿ / ಚಿಕ್ಕಮಗಳೂರು / ಡಾಲ್ಡಾ ಹಾಗೂ ವನಸ್ಪತಿಗೆ ರಾಸಾಯನಿಕಗಳನ್ನು ಬೆರೆಸಿ ನಕಲಿ ನಾಟಿ ತುಪ್ಪ (Fake Ghee) ತಯಾರಿಸಿ ಗ್ರಾಮೀಣ ಪ್ರದೇಶಗಳಲ್ಲಿ ಮಾರಾಟ ಮಾಡುತ್ತಿದ್ದ ದಂಧೆಯನ್ನು ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳು ಪತ್ತೆಹಚ್ಚಿದ್ದಾರೆ.
ಚಿಕ್ಕಮಗಳೂರು ನಗರದ ಮಾರ್ಕೆಟ್ ರಸ್ತೆಯಲ್ಲಿರುವ ಪಾಳುಬಿದ್ದ ಮನೆಯೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅಕ್ರಮ ಘಟಕದ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ನಕಲಿ ತುಪ್ಪ ತಯಾರಿಸಲು ಬಳಸುತ್ತಿದ್ದ ರಾಸಾಯನಿಕ ವಸ್ತುಗಳು ಹಾಗೂ ಬಳ್ಳಾರಿ ಜಿಲ್ಲಾ ನೋಂದಣಿ ಹೊಂದಿರುವ 3 ಬೈಕ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
ಘಟನೆಯ ವಿವರ ಗಮನಿಸುವುದಾದರೆ, ಆಹಾರ ಸುರಕ್ಷತಾ ಅಧಿಕಾರಿ ನಾಗರತ್ನ ಅವರ ನೇತೃತ್ವದ ತಂಡ ಮಾಹಿತಿಯನ್ನು ಆಧರಿಸಿ ಘಟಕದ ಮೇಲೆ ದಿಢೀರ್ ದಾಳಿ ನಡೆಸಿ ಪರಿಶೀಲಿಸಿದೆ. ಈ ವೇಳೆ ಡಾಲ್ಡಾ ಹಾಗೂ ವನಸ್ಪತಿಗೆ ರಾಸಾಯನಿಕಗಳನ್ನು ಬೆರೆಸಿ, ನಾಟಿ ತುಪ್ಪದಂತೆ ಕಾಣುವ ಉತ್ಪನ್ನವನ್ನು ತಯಾರಿಸುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದೆ. ತಯಾರಿಸುತ್ತಿದ್ದ ನಕಲಿ ತುಪ್ಪಕ್ಕೆ ನಾಟಿ ತುಪ್ಪದಂತೆ ಹಳದಿ ಬಣ್ಣ ಮತ್ತು ಪರಿಮಳ ಬರುವಂತೆ ಮಾಡಲು ರಾಸಾಯನಿಕಗಳನ್ನು ಬಳಸಲಾಗುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಕ್ರಮವಾಗಿ ತಯಾರಿಸಿದ ನಕಲಿ ತುಪ್ಪವನ್ನು ಬಳ್ಳಾರಿ ನೋಂದಣಿ ಹೊಂದಿರುವ ಬೈಕ್‌ಗಳಲ್ಲಿ ಸಾಗಿಸಲಾಗುತ್ತಿತ್ತು ಎನ್ನಲಾಗಿದೆ.
ಈ ಬೈಕ್‌ಗಳಲ್ಲಿ ಚಿಕ್ಕಮಗಳೂರು ಸುತ್ತಮುತ್ತಲಿನ ಗ್ರಾಮಗಳಿಗೆ ತೆರಳುತ್ತಿದ್ದ ಆರೋಪಿಗಳು, ತಾವು ತಂದಿರುವ ಉತ್ಪನ್ನವನ್ನು ಅಪ್ಪಟ ಹಳ್ಳಿ ನಾಟಿ ತುಪ್ಪ ಎಂದು ಸಾರ್ವಜನಿಕರನ್ನು ನಂಬಿಸಿ ಮಾರಾಟ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಇನ್ನೂ ದಾಳಿಯ ವೇಳೆ ನಕಲಿ ತುಪ್ಪ ತಯಾರಿಕೆಗೆ ಬಳಸುತ್ತಿದ್ದ ರಾಸಾಯನಿಕ ವಸ್ತುಗಳನ್ನು ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ನಕಲಿ ತುಪ್ಪವನ್ನು ಗ್ರಾಮಗಳಿಗೆ ಸಾಗಿಸಲು ಬಳಸಲಾಗುತ್ತಿತ್ತು ಎನ್ನಲಾದ ಬಳ್ಳಾರಿ ಜಿಲ್ಲಾ ನೋಂದಣಿಯ 3 ಬೈಕ್‌ಗಳನ್ನ ವಶಕ್ಕೆ ಪಡೆಯಲಾಗಿದೆ.
