ಶಿವಮೊಗ್ಗ, ಮಲೆನಾಡುಟುಡೆ ನ್ಯೂಸ್: ಎಐಸಿಸಿ ಅಧ್ಯಕ್ಷ ಹಾಗೂ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ್ ಖರ್ಗೆ ಅವರು ಭಾಗವಹಿಸಿದ್ದ ಸಾರ್ವಜನಿಕ ಸಮಾವೇಶದ ಸ್ಥಳವನ್ನು ಗಂಗಾಜಲದಿಂದ ಶುದ್ಧೀಕರಣ ಮಾಡಿದ ಕೃತ್ಯವನ್ನು ಖಂಡಿಸಿ, ಶಿವಮೊಗ್ಗ ಗ್ರಾಮಾಂತರ ಯುವ ಕಾಂಗ್ರೆಸ್ ಘಟಕವು ಜಿಲ್ಲಾಧಿಕಾರಿಗಳ ಮೂಲಕ ಭಾರತದ ರಾಷ್ಟ್ರಪತಿಗಳಿಗೆ ಮನವಿ ಪತ್ರ ಸಲ್ಲಿಸಿದೆ.
ಉತ್ತರಾಖಂಡದ ರಾಮಲೀಲಾ ಮೈದಾನದಲ್ಲಿ ಮಲ್ಲಿಕಾರ್ಜುನ್ ಖರ್ಗೆ ಅವರು ಸಾರ್ವಜನಿಕ ಸಮಾವೇಶ ಉದ್ದೇಶಿಸಿ ಮಾತನಾಡಿದ್ದರು. ಅವರು ತೆರಳಿದ ಬಳಿಕ, ಆ ಸ್ಥಳವನ್ನು ಗಂಗಾಜಲ ಚುಮುಕಿಸಿ ಶುದ್ಧೀಕರಿಸಿದ ಬಲಪಂಥೀಯ ಸಂಘಟನೆಗಳ ಕ್ರಮವು ಇಡೀ ದಲಿತ ಸಮುದಾಯ ಹಾಗೂ ಸಂವಿಧಾನದ 17ನೇ ವಿಧಿ (ಅಸ್ಪೃಶ್ಯತೆ ನಿಷೇಧ) ನೀಡಿದ ಹಕ್ಕುಗಳಿಗೆ ಎಸಗಿದ ಮಹಾ ಅಪಮಾನವಾಗಿದೆ ಎಂದು ಯುವ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.
ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾದರೂ ಮನುವಾದಿ ಹಾಗೂ ಜಾತೀಯ ಚಿಂತನೆಗಳನ್ನು ಪೋಷಿಸುತ್ತಿರುವುದು ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ. ಘಟನೆಗೆ ಕಾರಣರಾದವರನ್ನು ತಕ್ಷಣ ಪತ್ತೆಹಚ್ಚಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಹರ್ಷಿತ್, ಗ್ರಾಮಾಂತರ ಯುವ ಕಾಂಗ್ರೆಸ್ ಅಧ್ಯಕ್ಷ ಪ್ರವೀಣ್, ಮುಖಂಡರಾದ ಮಧುಸೂದನ್, ಗಿರೀಶ್, ಶಶಿಕುಮಾರ್, ಅಬ್ದುಲ್ ಹಾಗೂ ಇನ್ನಿತರ ಕಾರ್ಯಕರ್ತರು ಉಪಸ್ಥಿತರಿದ್ದರು
