ನಿಮ್ಮ ಬಗ್ಗೆ ನಿಮಗಿಂತ ನಿಮ್ಮ ಮೊಬೈಲ್‌ಗೆ ಹೆಚ್ಚು ಗೊತ್ತಿದೆಯೇ?! ಓದಿ ಅಚ್ಚರಿ ಎನಿಸುತ್ತೆ!

ಹಂಚಿಕೊಳ್ಳಿ
WhatsApp Facebook X Telegram
Does Your Smartphone Know More About You Than You Do
Does Your Smartphone Know More About You Than You Do

ನಿಮ್ಮ ಮೊಬೈಲ್‌ಗೆ ಹೆಚ್ಚು ಗೊತ್ತಿದೆಯೇ ! ಬೆಳಗ್ಗೆ ಎದ್ದ ತಕ್ಷಣ ನಾವು ಏನು ಮಾಡುತ್ತೇವೆ? ಹೆಚ್ಚಿನವರು ಮೊಬೈಲ್‌ ನೋಡುತ್ತಾರೆ! ಸಮಯ ನೋಡಲು ಫೋನ್ ತಗೊಂಡ್ವಿ ಅಂತಾ ಅಂದುಕೊಂಡರೂ ಸಹ,, ಆಮೇಲೆ ಸೀದಾ WhatsApp ತೆರೆದು ನೋಡುತ್ತೇವೆ. ನಂತರ Instagram, Facebook, YouTube, ಸುದ್ದಿ, ಹವಾಮಾನ, ಬ್ಯಾಂಕ್ ಖಾತೆ… ಹೀಗೆ ದಿನ ಆರಂಭವಾಗುವ ಮೊದಲೇ ಮೊಬೈಲ್ ನಮ್ಮ ಜೊತೆ ಮಾತನಾಡಲು ಶುರುಮಾಡಿರುತ್ತದೆ! ಹೌದಲ್ವಾ!?

ಹಾಗೆ ಇಲ್ಲಿ ಒಂದು ಪ್ರಶ್ನೆ ಇದೆ. ನಾವು ಮೊಬೈಲ್ ಬಳಸುತ್ತಿದ್ದೇವೆಯೇ? ಅಥವಾ ನಮ್ಮ ಮೊಬೈಲೇ ಖುದ್ದಾಗಿ ನಮ್ಮ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದೆಯೇ?
ನಮಗೆ ಇಷ್ಟವಾದ ಹಾಡು ಯಾವುದು, ಯಾವ ವಿಡಿಯೊ ಹೆಚ್ಚು ಹೊತ್ತು ನೋಡುತ್ತೇವೆ, ಯಾವ ವಿಷಯಕ್ಕೆ ತಕ್ಷಣ ಕ್ಲಿಕ್ ಮಾಡುತ್ತೇವೆ, ರಾತ್ರಿ ಎಷ್ಟು ಹೊತ್ತಿಗೆ ಫೋನ್ ಬಳಸುತ್ತೇವೆ, ಬೆಳಿಗ್ಗೆ ಎಷ್ಟು ಗಂಟೆಗೆ ಎದ್ದೇಳುತ್ತೇವೆ! ಪ್ರತಿದಿನದ ರೊಟಿನ್ ಯಾವುದು! ಎಲ್ಲೆಲ್ಲಿಗೆ ಹೋಗುತ್ತೇವೆ! ಏನೇನು ಕಾಯಿಲೆ ಇದೆ! ಹೀಗೆ ಅನೇಕ ಸಂಗತಿಗಳು ನಮ್ಮ ಮೊಬೈಲ್​ಗೆ ಗೊತ್ತಾಗುತ್ತಿದೆ.ಈ ಕಾರಣಕ್ಕೆ ಆಗಾಗ ನಾವು ಮನಸ್ಸಲ್ಲಿ ಅಂದುಕೊಂಡಿದ್ದು ಸಹ ಮೊಬೈಲ್​ನಲ್ಲಿ ನೋಡಲು ಸಿಗುತ್ತದೆ.

ಭಾರತ್ ಜೋಡೋ ಯಾತ್ರೆ 2.0

ಮೊಬೈಲ್‌ಗೆ ನಮ್ಮ ಬಗ್ಗೆ ಹೇಗೆ ಗೊತ್ತಾಗುತ್ತದೆ?

ಮೊಬೈಲ್‌ಗೆ ಮಾಯಾ ಶಕ್ತಿ ಇಲ್ಲ ಆದಾಗ್ಯು ಅದು ನಾವು ಮಾಡುವ ಕೆಲಸಗಳಿಂದಲೇ ಮಾಹಿತಿ ಪಡೆಯುತ್ತದೆ. ಉದಾಹರಣೆಗೆ, ಪ್ರತಿದಿನ ಬೆಳಿಗ್ಗೆ ಕ್ರಿಕೆಟ್ ಸುದ್ದಿ ಹುಡುಕುತ್ತೀರಿ ಎಂದುಕೊಳ್ಳಿ. ಕೆಲವು ದಿನಗಳ ಬಳಿಕ ನಿಮ್ಮ ಫೋನ್‌ನಲ್ಲಿ ಕ್ರಿಕೆಟ್‌ಗೆ ಸಂಬಂಧಿಸಿದ ವಿಡಿಯೊ, ಸುದ್ದಿ, ಸೂಚನೆಗಳು ಹೆಚ್ಚು ಕಾಣಿಸಬಹುದು.

ನೀವು ಅಡುಗೆ ವಿಡಿಯೊಗಳನ್ನು ಹೆಚ್ಚು ನೋಡುತ್ತಿದ್ದರೆ, ಮತ್ತಷ್ಟು ಅಡುಗೆ ವಿಡಿಯೊಗಳು ನಿಮ್ಮ ಮುಂದೆ ಬರಬಹುದು. ನೀವು ಪ್ರವಾಸದ ಸ್ಥಳಗಳನ್ನು ಹುಡುಕಿದರೆ, ಕೆಲವು ಆಪ್‌ಗಳು ಪ್ರವಾಸಕ್ಕೆ ಸಂಬಂಧಿಸಿದ ವಿಷಯಗಳನ್ನು ಹೆಚ್ಚು ತೋರಿಸಬಹುದು. ಇದು ಏಕೆಂದರೆ ನಾವು ಏನು ನೋಡುತ್ತೇವೆ, ಯಾವುದರಲ್ಲಿ ಹೆಚ್ಚು ಸಮಯ ಕಳೆಯುತ್ತೇವೆ, ಏನನ್ನು ಒತ್ತುತ್ತೇವೆ ಎಂಬುದರ ಆಧಾರದಲ್ಲಿ ಹಲವು ಡಿಜಿಟಲ್ ಸೇವೆಗಳು ನಮ್ಮ ಆಸಕ್ತಿಯನ್ನು ಅಂದಾಜು ಮಾಡುತ್ತವೆ.

ಹುಡುಕಿದ ಪದವೂ ಒಂದು ಸುಳಿವು

ಒಮ್ಮೆ ಯೋಚಿಸಿ ನೋಡಿ. ನೀವು ಒಂದು ದಿನ ಹೊಸ ಪೊಲೋ ಟೀ ಶರ್ಟ್​ ಎಂದು ಹುಡುಕಿದಿರಿ. ನಂತರ ಕೆಲವು ದಿನ ಟೀ ಶರ್ಟ್​ನ ವಿವಿಧ ಜಾಹೀರಾತುಗಳು ಕಾಣಿಸಬಹುದು.ಆಗ ನಮಗೆ ಆಶ್ಚರ್ಯವಾಗುತ್ತದೆ ಇದಕ್ಕೆ ಹೇಗೆ ಗೊತ್ತಾಯಿತು? ನಾವು ಹುಡುಕಿದ್ದೇವೆ, ಯಾವುದೋ ಪುಟ ತೆರೆದಿದ್ದೇವೆ, ವಿಡಿಯೊ ನೋಡಿದ್ದೇವೆ ಅಥವಾ ಅದಕ್ಕೆ ಸಂಬಂಧಿಸಿದ ವಿಷಯದಲ್ಲಿ ಆಸಕ್ತಿ ತೋರಿಸಿದ್ದೇವೆ ಎಂಬುದೇ ಮೊಬೈಲ್​ಗೆ ಸುಳಿವು ನೀಡುವ ನಮ್ಮ ಡಿಜಿಟಲ್ ಹೆಜ್ಜೆಗಳು

ನಮ್ಮ ಸ್ಥಳವೂ ಮಾಹಿತಿ ಹೇಳುತ್ತದೆ

ನಾವು ಎಲ್ಲಿಗೆ ಹೋಗುತ್ತೇವೆ ಎಂಬುದೂ ಕೆಲವು ಆಪ್‌ಗಳಿಗೆ ಮುಖ್ಯವಾಗಬಹುದು. ನೀವು ಪ್ರತಿದಿನ ಒಂದೇ ಸಮಯಕ್ಕೆ ಶಾಲೆಗೆ, ಕಚೇರಿಗೆ ಅಥವಾ ಅಂಗಡಿಗೆ ಹೋಗುತ್ತೀರಿ ಎಂದುಕೊಳ್ಳಿ. ಮೊಬೈಲ್‌ನಲ್ಲಿರುವ ಸ್ಥಳಸೇವೆಗಳು ಚಾಲ್ತಿಯಲ್ಲಿದ್ದರೆ, ಕೆಲವು ಸೇವೆಗಳು ಆ ಸ್ಥಳದ ಮಾಹಿತಿಯನ್ನು ಬಳಸಬಹುದು. ಮ್ಯಾಪ್ ಬಳಸಲು ಸ್ಥಳದ ಮಾಹಿತಿ ಬೇಕಾಗುತ್ತದೆ. ಹತ್ತಿರದ ಹೋಟೆಲ್ ಹುಡುಕಲು ಸ್ಥಳ ಬೇಕಾಗುತ್ತದೆ. ಹವಾಮಾನ ತಿಳಿಯಲು ನಗರ ಗೊತ್ತಿರಬೇಕು. ಆದರೆ ಈ ಮಾಹಿತಿಯು ಮೊಬೈಲ್​ನಲ್ಲಿ ಬೇರೆಯದ್ದಕ್ಕೂ ಬಳಕೆಯಾಗುತ್ತದೆ ಎಂಬುದಕ್ಕೆ ಸಾಕ್ಷ್ಯ ಇಲ್ಲದೆ ಇಲ್ಲ!

ಫೋನ್ ನಮ್ಮ ಸಮಯವನ್ನೂ ಕಲಿಯುತ್ತದೆ

ಕೆಲವು ದಿನ ಗಮನಿಸಿ.ನೀವು ರಾತ್ರಿ 11 ಗಂಟೆಗೆ ಹೆಚ್ಚು ವಿಡಿಯೊ ನೋಡುತ್ತಿದ್ದೀರಾ? ಮಧ್ಯಾಹ್ನ ಸುದ್ದಿ ಓದುತ್ತೀರಾ? ಬೆಳಿಗ್ಗೆ ಸಂಗೀತ ಕೇಳುತ್ತೀರಾ? ನಮ್ಮ ದಿನಚರಿ ನಿಧಾನವಾಗಿ ಡಿಜಿಟಲ್ ಕ್ಲಾಕ್​ ಮಾದರಿಯಂತೆ ಕಾಣಬಹುದು. ಒಬ್ಬ ವ್ಯಕ್ತಿ ಪ್ರತಿದಿನ ರಾತ್ರಿ ಒಂದೇ ಸಮಯಕ್ಕೆ YouTube ತೆರೆದರೆ, ಆ ಸಮಯದಲ್ಲಿ ಅವನಿಗೆ ಇಷ್ಟವಾಗುವ ವಿಡಿಯೊಗಳು ಸಿದ್ಧವಾಗಿರುವ ಸಾಧ್ಯತೆ ಹೆಚ್ಚು. ಏಕೆಂದರೆ ಹಿಂದಿನ ಬಳಕೆಯೇ ಮುಂದಿನ ಸಲಹೆಗೆ ಆಧಾರವಾಗಬಹುದು. ಅಂದರೆ ತನ್ನ ಮಾಲೀಕನ ಟೈಮಿಗೆ ತಕ್ಕಂತೆ ವಿಡಿಯೋಗಳನ್ನ ಪ್ರದರ್ಶಿಸುವ ಸಾಧ್ಯತೆ ಇರುತ್ತದೆ

ಬೆರಳುಗಳೂ ಕಥೆ ಹೇಳುತ್ತವೆ

ಯಾವ ಚಿತ್ರಕ್ಕೆ ನಿಲ್ಲುತ್ತೀರಿ? ಯಾವ ವಿಡಿಯೊವನ್ನು ಅರ್ಧದಲ್ಲೇ ಬಿಡುತ್ತೀರಿ? ಯಾವ ಪೋಸ್ಟ್‌ನ್ನು ಮತ್ತೆ ನೋಡುತ್ತೀರಿ? ಯಾವುದಕ್ಕೆ ಲೈಕ್ ಮಾಡುತ್ತೀರಿ? ಇವೆಲ್ಲವೂ ಸಣ್ಣ ಕೆಲಸಗಳಂತೆ ಕಾಣುತ್ತವೆ. ಆದರೆ ಡಿಜಿಟಲ್ ಜಗತ್ತಿನಲ್ಲಿ ಅವು ಸಂಕೇತಗಳಾಗಬಹುದು. ನೀವು ಯಾವುದನ್ನಾದರೂ ಇಷ್ಟಪಡುತ್ತೀರಿ ಎಂದು ಹೇಳಬೇಕಾಗಿಲ್ಲ. ಯಾವುದನ್ನು ಹೆಚ್ಚು ಹೊತ್ತು ನೋಡಿದರೂ ಆಸಕ್ತಿ ಇದೆ ಎಂದು ಕೆಲವು ವ್ಯವಸ್ಥೆಗಳು ಅಂದಾಜಿಸಬಹುದು. ಇದಕ್ಕೆ ಸಾಕ್ಷಿ ಎಂಬಂತೆ, ಕೆಲವರು ಮೊಬೈಲ್​ ಓಪನ್​ ಮಾಡಿದರೆ ಸಾಕು ಬರೀ ಅಶ್ಲೀಲ ಕಂಟೆಂಟ್ ಬರುತ್ತಿದೆ ಎಂದು ದೂರುತ್ತಾರೆ. ಆದರೆ, ಅವರ ಮೊಬೈಲ್​ನಲ್ಲಿ ಅಂತಹದ್ದೊಂದು ವಿಡಿಯೋಗಳು ಹೆಚ್ಚು ಸಮಯ ವೀವ್​ ಆಗಿದ್ದರೆ, ಮೊಬೈಲ್​ ಮುಂದಿನ ಎರಡು ಮೂರು ದಿನ ಅದೇ ರೀತಿಯ ಹೊಸ ಹೊಸ ಕಟೆಂಟ್​ ತೋರಿಸುತ್ತದೆ. ಇದಕ್ಕೆ ಮೊಬೈಲ್​ಗಳ ಒಳಗೆ ಅಲೋ..ಅಲೋ ಅಂತಾ ಪರ್ಮಿಶನ್​ ತೆಗೆದುಕೊಂಡ ಮೊಬೈಲ್ ಆಪ್​ಗಳು ನೇರ ಕಾರಣ

ಮೊಬೈಲ್ ನಮ್ಮ ನೆನಪನ್ನ ಸಂಗ್ರಹಿಸುತ್ತದೆ

ಹಿಂದೆ ಜನರು ದೂರವಾಣಿ ಸಂಖ್ಯೆಯನ್ನು ನೆನಪಿಟ್ಟುಕೊಳ್ಳುತ್ತಿದ್ದರು. ಈಗ ಅನೇಕರಿಗೆ ತಮ್ಮ ಮನೆಯವರ ಸಂಖ್ಯೆಯೇ ಪೂರ್ಣವಾಗಿ ನೆನಪಿಲ್ಲ. ಹಿಂದೆ ವಿಳಾಸವನ್ನು ನೆನಪಿಟ್ಟುಕೊಳ್ಳಬೇಕಿತ್ತು. ಈಗ ಮ್ಯಾಪ್ ಇದೆ. ಹಿಂದೆ ಹುಟ್ಟುಹಬ್ಬದ ದಿನಾಂಕ ನೆನಪಿಟ್ಟುಕೊಳ್ಳಬೇಕಿತ್ತು. ಈಗ ಫೋನ್ ನೆನಪಿಸುತ್ತದೆ. ಫೋಟೋ, ಸಂಪರ್ಕ ಸಂಖ್ಯೆ, ಸಂದೇಶ, ಬ್ಯಾಂಕ್ ಮಾಹಿತಿ, ಪ್ರಯಾಣದ ಟಿಕೆಟ್, ವೈದ್ಯರ ಅಪಾಯಿಂಟ್‌ಮೆಂಟ್, ಕೆಲಸದ ಪಟ್ಟಿ—ಎಲ್ಲವೂ ಒಂದೇ ಸಾಧನದಲ್ಲಿ ಇದೆ.ಹೀಗಾಗಿ ಮೊಬೈಲ್ ಈಗ ಕೇವಲ ಕರೆ ಮಾಡುವ ಯಂತ್ರವಲ್ಲ. ನಮ್ಮ ಜೀವನದ ಒಂದು ಭಾಗದ ನೆನಪಿನ ಪೆಟ್ಟಿಗೆಯಾಗಿದೆ.. ಅಷ್ಟೆಅಲ್ಲದೆ ಎಐ ಬಂದಮೇಲೆ ನಾವು ಹಂಚಿಕೊಳ್ಳುವ ಮಾಹಿತಿ ಡಿಲೀಟ್ ಆದರೂ, ಕೊಡುವ ಉತ್ತರಗಳಲ್ಲಿ ಎಐ ನೀವು ಹೀಗೆ,, ನಿಮ್ಮ ವಿಚಾರ ಹೀಗೆ ಎಂದು ಹೇಳಿ ಹಳೆಯ ಯಾವುದೋ ಮಾಹಿತಿಯನ್ನ ಥಟ್​ ಎಂದು ಎದುರು ತರುತ್ತದೆ. ಈ ಮಾಹಿತಿ ನಿನಗೆ ಹೇಗೆ ಗೊತ್ತು ತಿರುಗಿ ಕೇಳಿದರೆ, ಇಲ್ಲ ತಪ್ಪಾಗಿದೆ ಎನ್ನುತ್ತದೆ ಎಐ!

ಇದರಿಂದ ಹೆದರಬೇಕೇ?

ಅಗತ್ಯವಿಲ್ಲ. ಆದರೆ ಎಚ್ಚರಿಕೆಯಿಂದ ಇರಬೇಕು. ಮನೆಯ ಬಾಗಿಲನ್ನು ಎಲ್ಲರಿಗೂ ತೆರೆದಿಡುವುದಿಲ್ಲ ಅಲ್ಲವೇ? ಹಾಗೆಯೇ ಮೊಬೈಲ್‌ನಲ್ಲೂ ಪ್ರತಿಯೊಂದು ಆಪ್‌ಗೆ ಎಲ್ಲ ಅನುಮತಿಗಳನ್ನೂ ಕೊಡಬೇಕೆಂದಿಲ್ಲ. ಟಾರ್ಚ್ ಆಪ್‌ಗೆ ನಮ್ಮ ಸಂಪರ್ಕ ಸಂಖ್ಯೆಗಳು ಬೇಕೇ? ಸಾಮಾನ್ಯ ಆಟಕ್ಕೆ ನಮ್ಮ ಮೈಕ್ರೊಫೋನ್ ಬೇಕೇ? ಫೋಟೋ ಎಡಿಟಿಂಗ್ ಆಪ್‌ಗೆ ಸದಾ ಸ್ಥಳ ಮಾಹಿತಿ ಬೇಕೇ?ಇಂಥ ಪ್ರಶ್ನೆಗಳನ್ನು ಕೇಳುವುದು ಒಳ್ಳೆಯ ಅಭ್ಯಾಸ. ಅನುಮತಿ ಕೇಳಿದಾಗ “Allow” ಒತ್ತುವ ಮೊದಲು, “ಇದಕ್ಕೆ ಇದು ನಿಜವಾಗಿಯೂ ಬೇಕೇ?” ಎಂದು ಒಂದು ಕ್ಷಣ ಯೋಚಿಸಿದರೆ ಸಾಕು.

ಮಕ್ಕಳಿಗೂ ಕಲಿಸಬೇಕಾದ ಹೊಸ ಪಾಠ

ಹಿಂದೆ ಮಕ್ಕಳಿಗೆ “ಅಪರಿಚಿತರ ಜೊತೆ ಮಾತನಾಡಬೇಡ” ಎಂದು ಹೇಳಲಾಗುತ್ತಿತ್ತು. ಈಗ ಅದರ ಜೊತೆಗೆ “ಅಪರಿಚಿತ ಲಿಂಕ್ ಒತ್ತಬೇಡ”, “OTP ಯಾರಿಗೂ ಹೇಳಬೇಡ”, “ಪಾಸ್‌ವರ್ಡ್ ಹಂಚಿಕೊಳ್ಳಬೇಡ”, “ಯಾವ ಆಪ್ ಏನು ಕೇಳುತ್ತಿದೆ ನೋಡಿ” ಎಂಬುದನ್ನೂ ಹೇಳಬೇಕು. ಡಿಜಿಟಲ್ ಜಗತ್ತಿನಲ್ಲಿ ಸುರಕ್ಷತೆ ಎಂದರೆ ಕೇವಲ ಫೋನ್‌ಗೆ ಲಾಕ್ ಹಾಕುವುದಲ್ಲ. ನಮ್ಮ ಮಾಹಿತಿ ಯಾರಿಗೆ ಹೋಗುತ್ತಿದೆ ಎಂಬುದನ್ನು ಅರ್ಥಮಾಡಿಕೊಳ್ಳುವುದೂ ಸುರಕ್ಷತೆಯೇ. ಮೊಬೈಲ್ ನಮ್ಮ ಬಗ್ಗೆ ಎಲ್ಲವನ್ನೂ ತಿಳಿದಿಲ್ಲ. ಅದು ನಮ್ಮ ಮನಸ್ಸಿನೊಳಗೆ ನುಗ್ಗಿ ನಮ್ಮ ಆಲೋಚನೆಗಳನ್ನ ರೀಡ್ ಮಾಡುತ್ತಿಲ್ಲ.

ಆದರೆ ನಾವು ಪ್ರತಿದಿನ ಮಾಡುವ ಅನೇಕ ಕೆಲಸಗಳ ಗುರುತು ಅದರಲ್ಲಿ ಉಳಿಯಬಹುದು. ನಾವು ಏನು ಹುಡುಕುತ್ತೇವೆ, ಏನು ನೋಡುತ್ತೇವೆ, ಯಾವಾಗ ನೋಡುತ್ತೇವೆ, ಎಲ್ಲಿಗೆ ಹೋಗುತ್ತೇವೆ, ಯಾರ ಜೊತೆ ಸಂಪರ್ಕದಲ್ಲಿರುತ್ತೇವೆ—ಇವುಗಳ ಕೆಲವು ಭಾಗಗಳು ಡಿಜಿಟಲ್ ಜಗತ್ತಿನಲ್ಲಿ ದಾಖಲಾಗಬಹುದು.ಅದಕ್ಕಾಗಿಯೇ ಇಂದಿನ ಕಾಲದಲ್ಲಿ ಹೊಸ ಜಾಣ್ಮೆ ಬೇಕಾಗಿದೆ. ಮೊಬೈಲ್ ಅನ್ನು ಬಳಸಬೇಕು. ಆದರೆ ಮೊಬೈಲ್‌ಗೆ ನಮ್ಮ ಬಗ್ಗೆ ಎಷ್ಟು ಮಾಹಿತಿ ಕೊಡುತ್ತಿದ್ದೇವೆ ಎಂಬುದನ್ನೂ ನಾವು ತಿಳಿದುಕೊಳ್ಳಬೇಕು.ಏಕೆಂದರೆ ನಮ್ಮ ಕೈಯಲ್ಲಿರುವ ಆ ಚಿಕ್ಕ ಪರದೆ ಜಗತ್ತನ್ನು ನಮಗೆ ತೋರಿಸುವ ಕಿಟಕಿಯಲ್ಲ. ಕೆಲವೊಮ್ಮೆ ನಾವು ಜಗತ್ತಿನಲ್ಲಿ ಹೇಗೆ ಬದುಕುತ್ತಿದ್ದೇವೆ ಎಂಬುದರ ಚಿಕ್ಕ ಕನ್ನಡಿ ಕೂಡ ಆಗಿರಬಹುದು.

ಹಂಚಿಕೊಳ್ಳಿ
WhatsApp Facebook X Telegram
Ajjimane Ganesh
ಲೇಖಕರ ಬಗ್ಗೆ

Ajjimane Ganesh

Malenadu Today Contributor