ಸುದ್ದಿಯ ಸ್ಥಳ: Shivamogga district, Karnataka
ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ : ಯುಯುಸಿಎಂಎಸ್ (UUCMS) ತಾಂತ್ರಿಕ ದೋಷದಿಂದಾಗಿ ಪರೀಕ್ಷಾ ಶುಲ್ಕ ಪಾವತಿಸಲು ಸಾಧ್ಯವಾಗದೆ ಕಂಗಾಲಾಗಿದ್ದ ನೂರಾರು ವಿದ್ಯಾರ್ಥಿಗಳ ನೆರವಿಗೆ ನಿಂತ ಶಿವಮೊಗ್ಗ ಜಿಲ್ಲಾ ಎನ್‌ಎಸ್‌ಯುಐ (NSUI) ಘಟಕದ ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಿದೆ. ಮಧ್ಯಾಹ್ನದಿಂದ ತಡರಾತ್ರಿಯವರೆಗೂ ನಡೆದ ನಿರಂತರ ಪ್ರತಿಭಟನೆಗೆ ಮಣಿದ ಕುವೆಂಪು ವಿಶ್ವವಿದ್ಯಾಲಯದ ಆಡಳಿತ ಮಂಡಳಿ, ದಂಡ ಶುಲ್ಕವನ್ನು ಅರ್ಧದಷ್ಟು ಇಳಿಕೆ ಮಾಡುವುದರ ಜೊತೆಗೆ ಶುಲ್ಕ ಪಾವತಿಯ ಕೊನೆಯ ದಿನಾಂಕವನ್ನು ವಿಸ್ತರಿಸಿ ಮಹತ್ವದ ಆದೇಶ ಹೊರಡಿಸಿದೆ.
ತಾಂತ್ರಿಕ ಸಮಸ್ಯೆಯಿಂದಾಗಿ ನಿಗದಿತ ಸಮಯಕ್ಕೆ ಶುಲ್ಕ ಕಟ್ಟಲಾಗದ ವಿದ್ಯಾರ್ಥಿಗಳಿಗೆ ವಿಧಿಸಲಾಗುತ್ತಿದ್ದ ದುಬಾರಿ ದಂಡವನ್ನು ಖಂಡಿಸಿ ಶಿವಮೊಗ್ಗ ಜಿಲ್ಲಾ NSUI ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಬಳಿಕ ನಿಯೋಗವು ಕುವೆಂಪು ವಿಶ್ವವಿದ್ಯಾಲಯದ ಮಾನ್ಯ ಕುಲಪತಿಗಳು ಹಾಗೂ ಮೌಲ್ಯಮಾಪನ ಕುಲಸಚಿವರನ್ನು ಭೇಟಿ ಮಾಡಿ ವಿದ್ಯಾರ್ಥಿಗಳ ಅಳಲನ್ನು ತೋಡಿಕೊಂಡು ಮನವಿ ಪತ್ರ ಸಲ್ಲಿಸಿತು.
ವಿದ್ಯಾರ್ಥಿಗಳ ಒಗ್ಗಟ್ಟು ಮತ್ತು NSUI ಕಾರ್ಯಕರ್ತರ ತಡರಾತ್ರಿಯವರೆಗಿನ ಪಟ್ಟುಬಿಡದ ಹೋರಾಟಕ್ಕೆ ಸ್ಪಂದಿಸಿದ ವಿಶ್ವವಿದ್ಯಾಲಯವು, ಈ ಹಿಂದೆ ನಿಗದಿಪಡಿಸಿದ್ದ 1,000 ದಂಡ ಶುಲ್ಕವನ್ನು 500ಕ್ಕೆ ಇಳಿಕೆ ಮಾಡಿದೆ. ಅಲ್ಲದೆ, ಪರೀಕ್ಷಾ ಶುಲ್ಕ ಪಾವತಿಸಲು ನವೆಂಬರ್ 21, 2026ರವರೆಗೆ ಕಾಲಾವಕಾಶ ವಿಸ್ತರಿಸಿ ಪ್ರಕಟಣೆ ನೀಡಿದೆ.
ವಿಶ್ವವಿದ್ಯಾಲಯ ನೀಡಿರುವ ಈ ಸುವರ್ಣಾವಕಾಶವನ್ನು ಎಲ್ಲಾ ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಂಡು, ನವೆಂಬರ್ 21ರೊಳಗೆ ತಮ್ಮ ಪರೀಕ್ಷಾ ಶುಲ್ಕವನ್ನು ಪಾವತಿಸಿಕೊಳ್ಳುವಂತೆ NSUI ಪದಾಧಿಕಾರಿಗಳು ಮನವಿ ಮಾಡಿದ್ದಾರೆ.
ಈ ಹೋರಾಟದಲ್ಲಿ NSUI ಜಿಲ್ಲಾಧ್ಯಕ್ಷ ವಿಜಯ್, ಕಾರ್ಯಾಧ್ಯಕ್ಷ ರವಿ ಕಟಿಕೆರೆ, ನಗರಾಧ್ಯಕ್ಷ ರವಿಕುಮಾರ್, ನಗರ ಉಪಾಧ್ಯಕ್ಷರಾದ ಆದಿತ್ಯ ಸುಭಾನ್, ಸುಲ್ತಾನ್, ಕುಮಾರ್ ಸೇರಿದಂತೆ UUCMS ಸಮಸ್ಯೆಯಿಂದ ನೊಂದಿದ್ದ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡು ಬೆಂಬಲ ಸೂಚಿಸಿದರು.
