ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಶಿವಮೊಗ್ಗದಲ್ಲಿ ಎರಡು ದಿನಗಳ ಅವಧಿಯಲ್ಲಿ ನಡೆದ ಮೂರು ಪ್ರತ್ಯೇಕ ಘಟನೆಗಳಲ್ಲಿ ಮೂವರು ಮೃತಪಟ್ಟಿದ್ದಾರೆ. ಭದ್ರಾವತಿ ತಾಲೂಕಿನಲ್ಲಿ ಸಂಭವಿಸಿದ ಬೈಕ್ ಅಪಘಾತದಲ್ಲಿ ಯುವ ರಂಗ ಕಲಾವಿದ ಮೃತಪಟ್ಟಿದ್ದರೆ, ಹೊಸನಗರ ತಾಲೂಕಿನಲ್ಲಿ ಯುವಕನೊಬ್ಬ ಮನೆಯ ಹಿಂಭಾಗದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಮೃತಪಟ್ಟಿದ್ದಾನೆ. ಶಿವಮೊಗ್ಗ ನಗರದಲ್ಲಿ ಗಾರೆ ಕೆಲಸ ಮಾಡಿಕೊಂಡಿದ್ದ ವ್ಯಕ್ತಿಯೊಬ್ಬರ ಹತ್ಯೆ ನಡೆದಿದೆ.
ಭದ್ರಾವತಿ ತಾಲೂಕಿನ ಹೊನ್ನಟ್ಟಿ ಹೊಸೂರು ಸಮೀಪ ಬೈಕ್ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ 31 ವರ್ಷದ ಯುವ ರಂಗ ಕಲಾವಿದ ಹರ್ಷ ಮೃತಪಟ್ಟಿದ್ದಾರೆ. ಸಂಬಂಧಿಯೊಬ್ಬರನ್ನು ಭದ್ರಾವತಿಗೆ ಬಿಟ್ಟು ಬರಲು ಹರ್ಷ ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ಹೊನ್ನಟ್ಟಿ ಹೊಸೂರು ಸಮೀಪ ಬೈಕ್ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಗಂಭೀರವಾಗಿ ಗಾಯಗೊಂಡ ಹರ್ಷ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಘಟನೆಯ ಮಾಹಿತಿ ತಿಳಿದು ಭದ್ರಾವತಿ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಇನ್ನೊಂದು ಘಟನೆಯಲ್ಲಿ ಹೊಸನಗರ ತಾಲೂಕಿನ ಕೋಡೂರು ಸಮೀಪದ ಯಳಗಲ್ಲು ಗ್ರಾಮದಲ್ಲಿ 30 ವರ್ಷದ ಸಂದೀಪ್ ಮನೆಯ ಹಿಂಭಾಗದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಮೃತಪಟ್ಟಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು, ಕುಟುಂಬಸ್ಥರು ಹಾಗೂ ಸ್ಥಳೀಯರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಲಾಗಿದೆ. ಸಂದೀಪ್ ಅವರ ಮೃತದೇಹವನ್ನು ರಿಪ್ಪನ್‌ಪೇಟೆಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ರವಾನಿಸಲಾಗಿದೆ. ಘಟನೆ ಸಂಬಂಧ ರಿಪ್ಪನ್‌ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಸಂದೀಪ್ ಅವರ ಸಾವಿಗೆ ನಿಖರ ಕಾರಣ ಏನು ಎಂಬುದು ತಿಳಿದುಬಂದಿಲ್ಲ.
ಮತ್ತೊಂದೆಡೆ ಶಿವಮೊಗ್ಗದಲ್ಲಿ ಅಣ್ಣಾನಗರದ ಚಾನಲ್ ಬಳಿ ಅಶೋಕನಗರದ ನಿವಾಸಿ ಹುಸ್ಮಾನ್ ಅಲಿ (34) ಹತ್ಯೆಯಾಗಿದ್ದಾರೆ. ಹುಸ್ಮಾನ್ ಅಲಿ ಗಾರೆ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಹುಸ್ಮಾನ್ ಅಲಿ ಅವರ ಜೊತೆಗಿದ್ದವರೇ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ. ಹಣಕಾಸಿನ ವಿಚಾರಕ್ಕೆ ಸಂಬಂಧಿಸಿ ಹತ್ಯೆ ನಡೆದಿರಬಹುದೆಂಬ ಶಂಕೆಯೂ ವ್ಯಕ್ತವಾಗಿದೆ. ಘಟನಾ ಸ್ಥಳಕ್ಕೆ ದೊಡ್ಡಪೇಟೆ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣಕ್ಕೆ ಸಂಬಂಧಿಸಿದವರ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ.
