ಮಲೆನಾಡು ಟುಡೇ ಸುದ್ದಿ: ಶಿವಮೊಗ್ಗ ಜಿಲ್ಲೆಯ ವಿವಿಧ ಭಾಗಗಳಲ್ಲಿ ಪ್ರತಿನಿತ್ಯ ಒಂದಲ್ಲಾ ಒಂದು ವಿಭಿನ್ನ ಘಟನೆಗಳು ಸಂಭವಿಸುತ್ತಲೇ ಇರುತ್ತವೆ. ಅವುಗಳಲ್ಲಿ ಕೆಲವು ಸಂಧಾನದ ಮೂಲಕ ಬಗೆಹರಿದರೆ, ಮತ್ತೆ ಕೆಲವು 112 ಪೊಲೀಸ್ ಹೆಲ್ಪ್‌ಲೈನ್‌ಗೆ ತಲುಪುತ್ತವೆ. ಅದರಲ್ಲಿ ಕೆಲವು ಆಯ್ದ ಸುದ್ದಿಗಳು ಚಟ್‌ಪಟ್ ಸುದ್ದಿಯಲ್ಲಿವೆ ನೋಡಿ.
1. ಲಾರಿ-ಆಟೋ ಮುಖಾಮುಖಿ ಡಿಕ್ಕಿ: ಗಾಯಾಳು ಆಸ್ಪತ್ರೆಗೆ ದಾಖಲು

ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಲಾರಿ ಹಾಗೂ ಪ್ಯಾಸೆಂಜರ್ ಆಟೋ ನಡುವೆ ಅಪಘಾತ ಸಂಭವಿಸಿದೆ ಎಂದು 112ಗೆ ಕರೆ ಬಂದಿತ್ತು. ತಕ್ಷಣವೇ ಕಾರ್ಯಪ್ರವೃತ್ತರಾದ ಸಿಬ್ಬಂದಿಗಳು ಘಟನಾ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಅಪಘಾತದಲ್ಲಿ ಗಾಯಗೊಂಡಿದ್ದ ಆಟೋ ಚಾಲಕನನ್ನು ಕೂಡಲೇ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿ, ಎರಡೂ ವಾಹನಗಳನ್ನು ವಶಕ್ಕೆ ಪಡೆದು ಮುಂದಿನ ಕಾನೂನು ಕ್ರಮಕ್ಕಾಗಿ ಸಂಬಂಧಪಟ್ಟ ಪೊಲೀಸ್ ಠಾಣೆಗೆ ಹಸ್ತಾಂತರಿಸಿದ್ದಾರೆ.
2. ಚಂಪಕ ಸರಸುವಿನ ಕೊಳದಲ್ಲಿ ಆತ್ಮಹತ್ಯೆ
ಆನಂದಪುರ ಪೊಲೀಸ್ ಠಾಣಾ ವ್ಯಾಪ್ತಿಯ ಪ್ರಸಿದ್ಧ ಚಂಪಕ ಸರಸು ಕೊಳಕ್ಕೆ ವ್ಯಕ್ತಿಯೊಬ್ಬರು ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ 112 ಗೆ ಮಾಹಿತಿ ಲಭಿಸಿತ್ತು. ಸ್ಥಳಕ್ಕೆ ಧಾವಿಸಿದ ERV ಸಿಬ್ಬಂದಿಗಳು ಕೂಡಲೇ ಪೊಲೀಸ್ ಠಾಣೆಗೆ ಮಾಹಿತಿ ರವಾನಿಸಿದ್ದಾರೆ. ನಂತರ ಮೃತರ ಕುಟುಂಬಸ್ಥರು ಹಾಗೂ ಗ್ರಾಮಸ್ಥರ ಸಮ್ಮುಖದಲ್ಲಿ ಈಜುಗಾರರ ಸಹಾಯದಿಂದ ಕೊಳದಲ್ಲಿದ್ದ ಮೃತದೇಹವನ್ನು ಹೊರತೆಗೆದು, ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ.
3. ಮನೆಗೆ ಬಂದು ಗಲಾಟೆ ಮಾಡುತ್ತಿದ್ದ ಸಾಲ ರಿಕವರಿ ಏಜೆಂಟ್‌ಗಳಿಗೆ ಕ್ಲಾಸ್
ಆನಂದಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಾಲ ಮರುಪಾವತಿಯ ನೆಪದಲ್ಲಿ ರಿಕವರಿ ಏಜೆಂಟ್‌ಗಳು ಮನೆಗೆ ಬಂದು ಗಲಾಟೆ ಮಾಡುತ್ತಿದ್ದಾರೆ ಎಂದು ಸಂತ್ರಸ್ತರು 112ಗೆ ಕರೆ ಮಾಡಿ ನೆರವು ಕೋರಿದ್ದರು. ಸ್ಥಳಕ್ಕೆ ತೆರಳಿದ ERV ಸಿಬ್ಬಂದಿಗಳು ತಕ್ಷಣ ಗಲಾಟೆಯನ್ನು ತಡೆದು ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ. ಖಾಸಗಿ ಸ್ಥಳಗಳಲ್ಲಿ ಗಲಾಟೆ ಮಾಡದಂತೆ ಏಜೆಂಟ್‌ಗಳಿಗೆ ಎಚ್ಚರಿಕೆ ನೀಡಿದ ಸಿಬ್ಬಂದಿಗಳು, ಸಮಸ್ಯೆಯಿದ್ದರೆ ಪೊಲೀಸ್ ಠಾಣೆಗೆ ಬಂದು ಕಾನೂನುಬದ್ಧವಾಗಿ ದೂರು ನೀಡಿ ಬಗೆಹರಿಸಿಕೊಳ್ಳುವಂತೆ ಎರಡೂ ಕಡೆಯವರಿಗೆ ತಿಳುವಳಿಕೆ ನೀಡಿದ್ದಾರೆ.
