Solar Eclipse / ಮಲೆನಾಡು ಟುಡೆ ಸುದ್ದಿ / ನವದೆಹಲಿ / ಈ ವರ್ಷದ ಹರಿಯಾಳಿ ಅಮಾವಾಸ್ಯೆಯ ದಿನದಂದೇ ವರ್ಷದ ಕೊನೆಯ ಸೂರ್ಯಗ್ರಹಣ ಸಂಭವಿಸಲಿದೆ. ಶ್ರಾವಣ ಅಮಾವಾಸ್ಯೆ ಎಂದೂ ಕರೆಯಲ್ಪಡುವ ಹರಿಯಾಳಿ ಅಮಾವಾಸ್ಯೆಯು ಪಿತೃಗಳಿಗೆ ತರ್ಪಣ ಬಿಡಲು ಅತ್ಯಂತ ಮಹತ್ವದ ದಿನವೆಂದೇ ಹೇಳಲಾಗುತ್ತಿದೆ. ಕಾಕತಾಳೀಯವಾಗಿ ಆಗಸ್ಟ್ 12 ರ ಬುಧವಾರ ವರ್ಷದ ಅಂತಿಮ ಸೂರ್ಯಗ್ರಹಣ ಏರ್ಪಡಲಿದೆ. ಆದರೆ ಇದು ದೇಶದಲ್ಲಿ ಗೋಚರಿಸುವುದಿಲ್ಲ. ಹಾಗಾಗಿ ಗ್ರಹಣದ ಪ್ರಭಾವ ಅಮಾವಾಸ್ಯೆಯ ಆಚರಣೆಗಳ ಮೇಲೆ ಬೀರುವುದಿಲ್ಲ ಎನ್ನುತ್ತಾರೆ ಜ್ಯೋತಿಷ್ಯ ತಜ್ಞರು.
ದೃಕ್ ಪಂಚಾಂಗದ ಪ್ರಕಾರ ಈ ವರ್ಷ ಹರಿಯಾಳಿ ಅಮಾವಾಸ್ಯೆಯು ಆಗಸ್ಟ್ 12 ರಂದು ಆಚರಿಸಲ್ಪಡುತ್ತಿದ್ದು, ಅದೇ ದಿನ ಸೂರ್ಯಗ್ರಹಣವಿದೆ. ಹರಿಯಾಳಿ ಅಮಾವಾಸ್ಯೆಯ ಮುಹೂರ್ತವು ಆಗಸ್ಟ್ 12 ರ ಮಧ್ಯರಾತ್ರಿ 1 ಗಂಟೆ 52 ನಿಮಿಷಕ್ಕೆ ಆರಂಭವಾಗಿ, ಅದೇ ದಿನ ರಾತ್ರಿ 11 ಗಂಟೆ 6 ನಿಮಿಷಕ್ಕೆ ಮುಕ್ತಾಯಗೊಳ್ಳಲಿದೆ.
ಸೂರ್ಯಗ್ರಹಣ ರಾತ್ರಿ 9 ಗಂಟೆ 4 ನಿಮಿಷಕ್ಕೆ ಶುರುವಾಗಲಿದ್ದು, ಆಗಸ್ಟ್ 13 ರ ಮಧ್ಯರಾತ್ರಿ 1 ಗಂಟೆ 24 ನಿಮಿಷಕ್ಕೆ ಅಂತ್ಯಗೊಳ್ಳಲಿದೆ. ಈ ಗ್ರಹಣ ಕರ್ಕಾಟಕ ರಾಶಿ, ಆಶ್ಲೇಷಾ ನಕ್ಷತ್ರ ಹಾಗೂ ಕನ್ಯಾ ರಾಶಿಯಲ್ಲಿ ಸಂಭವಿಸಲಿದೆ.ದೇಶದಲ್ಲಿ ಇದು ಗೋಚರಿಸದ ಕಾರಣ, ಯಾವುದೇ ನಿಯಮಗಳು ಅನ್ವಯವಾಗುವುದಿಲ್ಲ. ಆದರೆ ಎಲ್ಲಾ ರಾಶಿಗಳ ಮೇಲೂ ಇದರ ಪ್ರಭಾವ ಇರಲಿದೆ.
ಇನ್ನೂ ಬೃಹಸ್ಪತಿ ಆಗಸ್ಟ್ 12 ರ ಮುಂಜಾನೆ 5 ಗಂಟೆ 3 ನಿಮಿಷಕ್ಕೆ ಕರ್ಕಾಟಕ ರಾಶಿಯಲ್ಲಿ ಉದಯಿಸಲಿದ್ದಾರೆ. ಬರೋಬ್ಬರಿ 28 ದಿನಗಳ ನಂತರ ಗುರು ಉದಯಿಸುತ್ತಿರುವುದರಿಂದ ಶುಭ ಕಾರ್ಯಗಳಿಗೆ ಮರುಚಾಲನೆ ದೊರೆಯಲಿದೆ, ಎಲ್ಲಾ ರಾಶಿಗಳಿಗೂ ಹೊಸ ಸಕಾರಾತ್ಮಕ ಶಕ್ತಿ, ಧನ ಲಾಭ ಮತ್ತು ಪ್ರಗತಿಯ ಅವಕಾಶಗಳು ಒದಗಿಬರಲಿವೆ.
ಜ್ಯೋತಿಷ್ಯ ಶಾಸ್ತ್ರದಲ್ಲಿ ದೇವಗುರು ಬೃಹಸ್ಪತಿಯನ್ನು ಸುಖ, ಸಮೃದ್ಧಿ, ಜ್ಞಾನ, ವಿವಾಹ ಹಾಗೂ ಸಂತಾನ ಕಾರಕ ಎಂದು ನಂಬಲಾಗಿದೆ. ಗುರುವು ತನ್ನ ಉಚ್ಚ ರಾಶಿಯಾದ ಕರ್ಕಾಟಕದಲ್ಲಿ ಉದಯಿಸುತ್ತಿರುವುದು ಅತ್ಯಂತ ಶುಭ ವಿದ್ಯಮಾನವಾಗಿದೆ. ಇದರಿಂದಾಗಿ ಗುರುವಿನ ಶುಭ ಫಲ ವೃದ್ಧಿಯಾಗಲಿದ್ದು, ಸ್ಥಗಿತಗೊಂಡಿದ್ದ ಯೋಜನೆಗಳು ಪುನರಾರಂಭಗೊಳ್ಳಲಿವೆ ಹಾಗೂ ಇದರ ಪ್ರಭಾವ ವಿವಿಧ ರಾಶಿಗಳ ಮೇಲೆ ಗೋಚರಿಸಲಿದೆ.
