District Congress President Post / ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸ್ಥಾನ ಈ ಸಲ ಸಖತ್ ಇಂಟ್ರಸ್ಟಿಂಗ್ ಆಗಿದೆ. ಏಕೆಂದರೆ, ಯಾರಾಗ್ತಾರೆ ಅಧ್ಯಕ್ಷ ಅನ್ನೋದೆ ಇಲ್ಲಿ ಕುತೂಹಲಕ್ಕೆ ಕಾರಣವಾಗಿದ್ದು, ಇಷ್ಟು ವರ್ಷ ಕಾಣದ ವಿಶೇಷತೆ ಈ ಸಲ ತೋರುತ್ತಿದೆ.
ಅಂದಹಾಗೆ, ಪ್ರಭಾವ ಮತ್ತು ಶಿಫಾರಸು, ಸೇರಿದಂತೆ ಅದದೇ ಆಧಾರದ ಅಡಿಯಲ್ಲಿ ನಡೆಯುತ್ತಿದ್ದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಈ ಸಲ ಕಾರ್ಯಕರ್ತರ ಅಣತಿಯಂತೆ ನಡೆಯುತ್ತಿದೆ. ಹೀಗಾಗಿ ಸ್ಪರ್ಧೆ ತೀವ್ರಗೊಂಡಿದೆ. ವಿಶೇಷ ಅಂದರೆ, ಇದುವರೆಗೂ 25 ಕ್ಕೂ ಹೆಚ್ಚು ಮುಖಂಡರು ಅಧ್ಯಕ್ಷ ಗಾದಿಗಾಗಿ ಅರ್ಜಿ ಸಲ್ಲಿಸಿದ್ದಾರೆ. ಬಹುಶಃ ಇಲ್ಲಿವರೆಗೂ ಇಷ್ಟೊಂದು ಮಂದಿ ಅರ್ಜಿ ಸಲ್ಲಿಸಿದ ಉದಾಹರಣೆಗಳಿಲ್ಲ. ಮೇಲಾಗಿ ಇವರೆಲ್ಲರೂ ತಮ್ಮ ತಮ್ಮ ಬೆಂಬಲಿಗರ ಮೂಲಕ ಕಾರ್ಯಕರ್ತರನ್ನು ಮನವೊಲಿಸಿ ತಮ್ಮ ಹೆಸರನ್ನ ಶಾರ್ಟ್ಲಿಸ್ಟ್ಗೆ ಬರುವಂತೆ ಮಾಡಲು ಓಡಾಡುತ್ತಿದ್ದಾರೆ.
ಈಗಾಗಲೇ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ವೀಕ್ಷಕರಾಗಿ ಆಗಮಿಸಿರುವ ಶರತ್ ತಮ್ಮ ಕೆಲಸವನ್ನ ನಿರಂತರವಾಗಿ ನಡೆಸುತ್ತಿದ್ದಾರೆ. ಮೊನ್ನೆ ಕಚೇರಿಯಲ್ಲಿ ನಡೆದ ಗಲಾಟೆಯನ್ನು ಹೊರತುಪಡಿಸಿ, ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋಗಬಲ್ಲ ವ್ಯಕ್ತಿಯ ಆಯ್ಕೆಗಾಗಿ ತಳಮಟ್ಟದ ಕಾರ್ಯಕರ್ತರಿಂದ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಕಾರ್ಯಕರ್ತರ ಒಲವು ಮತ್ತು ಅಭಿಪ್ರಾಯದ ಆಧಾರದ 6 ಜನರ ಹೆಸರನ್ನ ಶರತ್ ಹೈಕಮಾಂಡ್ಗೆ ನೀಡಲಿದ್ದಾರೆ.
ಇನ್ನೂ ಲಭ್ಯ ಮಾಹಿತಿ ಪ್ರಕಾರ, ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಮಾಜಿ ಸಂಸದ ಆಯನೂರು ಮಂಜುನಾಥ್, ಶಿವಮೊಗ್ಗ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಚ್.ಎಸ್. ಸುಂದರೇಶ್, ಪ್ರಾಧಿಕಾರದ ಮಾಜಿ ಅಧ್ಯಕ್ಷ ಎನ್. ರಮೇಶ್, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷೆ ವೇದಾ ವಿಜಯಕುಮಾರ್, ಮಹಾನಗರ ಪಾಲಿಕೆಯ ಮಾಜಿ ಉಪ ಮೇಯರ್ ಹಾಗೂ ಜಿಲ್ಲಾ ಮಹಿಳಾ ಘಟಕದ ಮಾಜಿ ಅಧ್ಯಕ್ಷೆ ವಿಜಯಲಕ್ಷ್ಮಿ ಪಾಟೀಲ್ ಸೇರಿದಂತೆ ಅನೇಕರು ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳ ಲಿಸ್ಟ್ನಲ್ಲಿದ್ದಾರೆ. ಇವರುಗಳ ಪೈಕಿ ಯಾರಾಗ್ತಾರೆ ಕಾಂಗ್ರೆಸ್ ಅಧ್ಯಕ್ಷ ಎನ್ನುವುದೇ ಸದ್ಯ ಶಿವಮೊಗ್ಗದ ಟ್ರೆಂಡಿಂಗ್ ಕುತೂಹಲವಾಗಿದೆ
