Shivamogga ಶಿವಮೊಗ್ಗ: ಯಾವುದೇ ಮುನ್ಸೂಚನೆ ನೀಡದೆ ನಿಯಮಬಾಹಿರವಾಗಿ ಜೆಸಿಬಿ ಯಂತ್ರವನ್ನು ಜಪ್ತಿ ಮಾಡಿ ಸೇವಾ ಲೋಪ ಎಸಗಿದ್ದ ಫೈನಾನ್ಸ್ ಸಂಸ್ಥೆ ಒಂದಕ್ಕೆ ಶಿವಮೊಗ್ಗದ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ದಂಡ ವಿಧಿಸಿ ಮಹತ್ವದ ಆದೇಶ ನೀಡಿದೆ. ಸೊರಬ ತಾಲೂಕಿನ ಬೆನ್ನೂರು ಗ್ರಾಮದ ಮಂಜಪ್ಪ ಕೆ. ಎಂಬುವರು ಫೈನಾನ್ಸ್ ಒಂದರಲ್ಲಿ 31,67,455 ಸಾಲ ಪಡೆದು ಜೆಸಿಬಿ…
Shivamogga ಶಿವಮೊಗ್ಗ: ಯಾವುದೇ ಮುನ್ಸೂಚನೆ ನೀಡದೆ ನಿಯಮಬಾಹಿರವಾಗಿ ಜೆಸಿಬಿ ಯಂತ್ರವನ್ನು ಜಪ್ತಿ ಮಾಡಿ ಸೇವಾ ಲೋಪ ಎಸಗಿದ್ದ ಫೈನಾನ್ಸ್ ಸಂಸ್ಥೆ ಒಂದಕ್ಕೆ ಶಿವಮೊಗ್ಗದ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ದಂಡ ವಿಧಿಸಿ ಮಹತ್ವದ ಆದೇಶ ನೀಡಿದೆ.
ಸೊರಬ ತಾಲೂಕಿನ ಬೆನ್ನೂರು ಗ್ರಾಮದ ಮಂಜಪ್ಪ ಕೆ. ಎಂಬುವರು ಫೈನಾನ್ಸ್ ಒಂದರಲ್ಲಿ 31,67,455 ಸಾಲ ಪಡೆದು ಜೆಸಿಬಿ ಖರೀದಿಸಿದ್ದರು. ಅವರು ಪ್ರತಿ ತಿಂಗಳು 71,500 ಕಂತು ಸರಿಯಾಗಿ ಪಾವತಿಸುತ್ತಿದ್ದರು. ಆದರೆ, ಅಧಿಕ ಮಳೆ ಹಾಗೂ ಜೆಸಿಬಿ ರಿಪೇರಿ ಕಾರಣದಿಂದ ಅವರಿಗೆ 3 ತಿಂಗಳ ಕಂತು ಪಾವತಿಸಲು ಸಾಧ್ಯವಾಗಿರಲಿಲ್ಲ.
ಯಾವುದೇ ಮುನ್ಸೂಚನೆ ಅಥವಾ ನೋಟೀಸ್ ನೀಡದೆ, 2025ರ ಆಗಸ್ಟ್ 6ರಂದು ಫೈನಾನ್ಸ್ ಸಂಸ್ಥೆಯವರು ಬಲವಂತವಾಗಿ ಜೆಸಿಬಿಯನ್ನು ವಶಪಡಿಸಿಕೊಂಡಿದ್ದರು. ನಂತರ ದೂರುದಾರರು 1,00,000 ಹಣ ಪಾವತಿಸಿ ಯಂತ್ರವನ್ನು ಹಿಂತಿರುಗಿಸುವಂತೆ ಕೋರಿದರೂ, ಫೈನಾನ್ಸ್‌ನವರು ಸಂಪೂರ್ಣ ಸಾಲದ ಮೊತ್ತವನ್ನೇ ಒಟ್ಟಿಗೆ ಪಾವತಿಸುವಂತೆ ಪಟ್ಟು ಹಿಡಿದಿದ್ದರು. ಇದರಿಂದ ನೊಂದ ಮಂಜಪ್ಪ ಅವರು ವಕೀಲರ ಮೂಲಕ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದರು.
ದೂರುದಾರರು ಮತ್ತು ಎದುರುದಾರರ ವಾದ-ವಿವಾದಗಳನ್ನು ಆಲಿಸಿದ ಜಿಲ್ಲಾ ಗ್ರಾಹಕರ ಆಯೋಗವು, ಆರ್‌ಬಿಐ ನಿಯಮಗಳು ಹಾಗೂ ಉಚ್ಚ ಮತ್ತು ಸರ್ವೋಚ್ಚ ನ್ಯಾಯಾಲಯದ ಆದೇಶಗಳನ್ನು ಉಲ್ಲಂಘಿಸಿ ಫೈನಾನ್ಸ್ ಕಂಪನಿಯು ಸೇವಾ ಲೋಪ ಎಸಗಿದೆ ಎಂದು ತೀರ್ಮಾನಿಸಿದೆ. ಆಯೋಗದ ಅಧ್ಯಕ್ಷರಾದ ಟಿ.ಶಿವಣ್ಣ ಹಾಗೂ ಸದಸ್ಯರಾದ ಬಿ.ಡಿ.ಯೋಗಾನಂದ ಭಾಂಡ್ಯ ಅವರನ್ನೊಳಗೊಂಡ ಪೀಠವು ಈ ಆದೇಶ ನೀಡಿದೆ.
ಆದೇಶವಾದ 45 ದಿನಗಳ ಒಳಗೆ ಫೈನಾನ್ಸ್ ಕಂಪನಿಯು ದೂರುದಾರರಿಗೆ ಜೆಸಿಬಿಯನ್ನು ಹಿಂತಿರುಗಿಸಬೇಕು. 45 ದಿನಗಳ ನಂತರ ಜೆಸಿಬಿ ನೀಡಲು ವಿಳಂಬವಾದರೆ, ವಿಳಂಬವಾಗುವ ಪ್ರತಿದಿನಕ್ಕೆ 2,000 ಗಳಂತೆ ದೂರುದಾರರಿಗೆ ಪಾವತಿಸಬೇಕು. ಅಲ್ಲದೆ, ದೂರುದಾರರಿಗಾದ ನಷ್ಟಕ್ಕೆ ಪರಿಹಾರವಾಗಿ 10,000 ಹಾಗೂ ದೂರಿನ ವೆಚ್ಚವನ್ನು 45 ದಿನಗಳ ಒಳಗೆ ಪಾವತಿಸಬೇಕು, ತಪ್ಪಿದ್ದಲ್ಲಿ ವಾರ್ಷಿಕ ಶೇ. 12ರಷ್ಟು ಬಡ್ಡಿಯನ್ನು ಪಾವತಿಸಬೇಕಾಗುತ್ತದೆ ಎಂದು ಆಯೋಗ ಸ್ಪಷ್ಟಪಡಿಸಿದೆ.
