ಕಾಂಡಿಮೆಂಟ್ಸ್​ನಲ್ಲಿ ನಾಟಿ ಮಾತ್ರೆ, ಟೆಸ್ಟ್​ನಲ್ಲಿ ಗೊತ್ತಾಗಿದ್ದೆ ಬೇರೆ! ಶಿವಮೊಗ್ಗ ಡಿಸಿ ಆಕ್ಷನ್​!

Published: 29 ಜುಲೈ 2026, 8:41 ಫೂರ್ವಾಹ್ನ • 1 min read
✨ AI ಓವರ್‌ವ್ಯೂ (ಮುಖ್ಯಾಂಶ)

Shivamogga DC Prabhulinga Kavalikatti Orders / ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ನಗರದ ಕಾಂಡಿಮೆಟ್ಸ್ ಒಂದರಲ್ಲಿ ಆಯುರ್ವೇದ ಔಷಧಿ ಎಂಬ ಹೆಸರಿನಲ್ಲಿ ಮಾರಾಟ ಮಾಡಲಾಗುತ್ತಿದ್ದ ಮಾತ್ರೆಯನ್ನು ಪ್ರಯೋಗಾಲಯಕ್ಕೆ ಕಳುಹಿಸಿ ಪರೀಕ್ಷಿಸಿದಾಗ ಅದು ನೋವು ನಿವಾರಕ ಎಂದು ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ಆಯುಷ್ ಇಲಾಖೆ ಅಧಿಕಾರಿಗಳು ಅಂಗಡಿಯನ್ನು ಪರಿಶೀಲಿಸಿ ವರದಿ ನೀಡುವಂತೆ…

Shivamogga DC Prabhulinga Kavalikatti Orders / ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ನಗರದ ಕಾಂಡಿಮೆಟ್ಸ್ ಒಂದರಲ್ಲಿ ಆಯುರ್ವೇದ ಔಷಧಿ ಎಂಬ ಹೆಸರಿನಲ್ಲಿ ಮಾರಾಟ ಮಾಡಲಾಗುತ್ತಿದ್ದ ಮಾತ್ರೆಯನ್ನು ಪ್ರಯೋಗಾಲಯಕ್ಕೆ ಕಳುಹಿಸಿ ಪರೀಕ್ಷಿಸಿದಾಗ ಅದು ನೋವು ನಿವಾರಕ ಎಂದು ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ಆಯುಷ್ ಇಲಾಖೆ ಅಧಿಕಾರಿಗಳು ಅಂಗಡಿಯನ್ನು ಪರಿಶೀಲಿಸಿ ವರದಿ ನೀಡುವಂತೆ ಹಾಗೂ ಔಷಧ ನಿಯಂತ್ರಣಾಧಿಕಾರಿಗಳು ಸಹ ಅಂಗಡಿಗೆ ಭೇಟಿ ನೀಡಿ ಸೂಕ್ತ ಕ್ರಮ ಜರುಗಿಸುವಂತೆ ಶಿವಮೊಗ್ಗ ಡಿಸಿ ಪ್ರಭುಲಿಂಗ ಕವಳಿಕಟ್ಟಿ ಸೂಚಿಸಿದ್ದಾರೆ. ಅಲ್ಲದೆ ಅಂಗಡಿಯ ಟ್ರೇಡ್ ಲೈಸೆನ್ಸ್ ರದ್ದುಪಡಿಸಲು ಕ್ರಮ ವಹಿಸುವಂತೆ ನಿರ್ದೇಶನ ಕೊಟ್ಟಿದ್ದಾರೆ.

ನಿನ್ನೆ ದಿನ ಮಂಗಳವಾರ, ಶಿವಮೊಗ್ಗ ಜಿಲ್ಲಾಡಳಿತ ಕಚೇರಿಯಲ್ಲಿ ‘ನಾರ್ಕೋ ಸಮನ್ವಯ ಸಮಿತಿಯ ಮೀಟಿಂಗ್​ ನಡೆಸಿದ ಅವರು ಅಧಿಕಾರಿಗಳಿಗೆ ಪ್ರಮುಖ ಸೂಚನೆಗಳನ್ನು ನೀಡಿದರು. ಅದರ ವಿವರ ಹೀಗಿದೆ.

ಶಿಕ್ಷಣ ಇಲಾಖೆ

  1. ಶಿಕ್ಷಣ ಇಲಾಖೆಯಿಂದ ಪ್ರತಿ ತಿಂಗಳು ಮಕ್ಕಳ ಕ್ಲಬ್‌ಗಳಲ್ಲಿ ಪೊಲೀಸ್ ಇಲಾಖೆಯ ಸಹಯೋಗದೊಂದಿಗೆ ಪರಿಣಾಮಕಾರಿಯಾಗಿ ಕಾರ್ಯಕ್ರಮ ನಡೆಸಿ ವರದಿ ಸಲ್ಲಿಸಬೇಕು.
  2. ಹಾಸ್ಟೆಲ್‌ಗಳಲ್ಲಿನ ಮಕ್ಕಳು ಸಿಗರೇಟ್ ಸೇವನೆ, ಗುಟ್ಕಾ ಇತ್ಯಾದಿ ಮಾದಕ ವಸ್ತುಗಳ ಸೇವನೆ ಕುರಿತು ಹಾಸ್ಟೆಲ್ ವಾರ್ಡನ್‌ಗಳು ತೀವ್ರ ನಿಗಾ ವಹಿಸಬೇಕು.
  3. ಹಾಗೂ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಇಲಾಖೆ ವತಿಯಿಂದ ನಿಯಮಿತವಾಗಿ, ವಿವಿಧ ಕಾರ್ಯಕ್ರಮಗಳಲ್ಲಿ ಮಾದಕ ವಸ್ತುಗಳ ವ್ಯಸನದಿಂದಾಗುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಬೇಕೆಂದರು.

ಆರೋಗ್ಯ ಇಲಾಖೆ ಹಾಗೂ ಚಿಕಿತ್ಸೆ

ತಾಲೂಕು ಮತ್ತು ಜಿಲ್ಲಾ ಆಸ್ಪತ್ರೆಗಳಲ್ಲಿ ಮಾದಕ ದ್ರವ್ಯ ಪತ್ತೆ ಹಚ್ಚುವ ‘ಟೆಸ್ಟಿಂಗ್ ಕಿಟ್’ಗಳು ಲಭ್ಯವಿದ್ದು, ಎನ್‌ಡಿಪಿಎಸ್ ಕಾಯ್ದೆಯ ಪ್ರಕಾರ, ಮಾದಕ ವಸ್ತು ಸೇವನೆ ಮಾಡಿದವರು ಡಿ-ಅಡಿಕ್ಷನ್ (ವ್ಯಸನ ಮುಕ್ತಿ) ಕೇಂದ್ರಕ್ಕೆ ದಾಖಲಾಗಲು ಒಪ್ಪಿಕೊಂಡು, 3 ತಿಂಗಳವರೆಗೆ ಚಿಕಿತ್ಸೆ ಪಡೆದು, ಪ್ರಮಾಣ ಪತ್ರ ಪಡೆದವರ ವಿರುದ್ದ ಚಾರ್ಜ್​ ಶೀಟ್​ ಹಾಕುವುದಿಲ್ಲ. ಆದ್ದರಿಂದ ಜಿಲ್ಲೆಯ ಡಿ-ಅಡಿಕ್ಷನ್ ಕೇಂದ್ರಗಳನ್ನು ಬಲಪಡಿಸಲು ಅಧಿಕಾರಿಗಳಿಗೆ ಸೂಚಿಸಿದರು.

ಅಬಕಾರಿ ಹಾಗೂ ಪೊಲೀಸ್ ಇಲಾಖೆ

ಅನಧಿಕೃತ ಸ್ಥಳಗಳಲ್ಲಿ, ಅಂಗಡಿ ಹಾಗೂ ಮನೆಗಳಲ್ಲಿ ಮದ್ಯ ಮಾರಾಟ ಮಾಡುವುದನ್ನು ಅಬಕಾರಿ ಇಲಾಖೆ ಕಟ್ಟುನಿಟ್ಟಾಗಿ ತಡೆಯಬೇಕು. ಪ್ರತಿಯೊಬ್ಬರೂ ಕಣ್ಣು ಮತ್ತು ಕಿವಿಯಾಗಿ ಕೆಲಸ ಮಾಡಿ ಮಾಹಿತಿ ನೀಡಬೇಕು.

ಕೃಷಿ ಮತ್ತು ಅರಣ್ಯ ಇಲಾಖೆ

ಕೃಷಿ ಇಲಾಖೆಯು ಬೆಳೆ ಸಮೀಕ್ಷೆ ವೇಳೆ ಹಾಗೂ ರೈತರ ಸಾಮರ್ಥ್ಯ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಈ ಬಗ್ಗೆ ಅರಿವು ಮೂಡಿಸಬೇಕು. ಅರಣ್ಯ ಇಲಾಖೆಯು ತಮ್ಮ ನಿಯಮಿತ ಭೇಟಿ ವೇಳೆ ಅಕ್ರಮವಾಗಿ ಗಾಂಜಾ ಬೆಳೆದಿರುವ ಕುರಿತು ಪರಿಶೀಲಿಸಿ ಮಾಹಿತಿ ನೀಡಬೇಕು.

ಇನ್ನೂ ವೇಳೆ ಮಾತನಾಡಿದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕಾರಿಯಪ್ಪ, ಅರಣ್ಯ ಮತ್ತು ಅಬಕಾರಿ ಅಧಿಕಾರಿಗಳು ಗಾಂಜಾ ಸರಬರಾಜು, ಗಿಡಗಳ ವಿವರ, ಪೆಡ್ಲರ್‌ಗಳ ಮಾಹಿತಿ ನೀಡಿ ಹಾಗೂ ಮದ್ಯದ ಬಗ್ಗೆ ನಿಯಮಿತವಾಗಿ ಪೊಲೀಸ್ ಇಲಾಖೆಯೊಂದಿಗೆ ಸಮನ್ವಯ ಸಾಧಿಸಿ ಕ್ರಮ ಕೈಗೊಳ್ಳಬೇಕು ಎಂದರು.

ಯಾವುದೇ ಪ್ರಾವಿಜನ್ ಸ್ಟೋರ್ ಮತ್ತು ಅಂಗಡಿಗಳಲ್ಲಿ ಆಯುರ್ವೇದ ಮತ್ತು ಇತರೆ ಅಧಿಕೃತವಲ್ಲದ ಔಷಧಿಗಳನ್ನು ಮಾರಾಟ ಮಾಡುವ ಹಾಗಿಲ್ಲ. ಒಂದು ವೇಳೆ ಅಂಗಡಿಗಳಲ್ಲಿ ಅಧಿಕೃತವಲ್ಲದ ವಸ್ತುಗಳನ್ನು ಮಾರಾಟ ಮಾಡುವುದು ಕಂಡುಬಂದಲ್ಲಿ ಅಂತಹ ಅಂಗಡಿಗಳ ವಿರುದ್ದ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವುದು.

ಪ್ರಭುಲಿಂಗ ಕವಳಿಕಟ್ಟಿ, ಜಿಲ್ಲಾಧಿಕಾರಿಗಳು

END OF STORY

ajjimane ganesh

Senior Journalist | Malenadu Today
✓ Verified Journalist