shivamogga police / ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆಯು ಜಿಲ್ಲಾ ರಕ್ಷಣಾಧಿಕಾರಿ (ಎಸ್.ಪಿ) ನಿಖಿಲ್ ಅವರ ನೇತೃತ್ವದಲ್ಲಿ ಕಾನೂನು ಸುವ್ಯವಸ್ಥೆ ಪಾಲನೆಯಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಅಪರಾಧ ಜಗತ್ತನ್ನು ಮಟ್ಟಹಾಕಲು ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿರುವ ಪೊಲೀಸರು, ಮಾದಕ ವಸ್ತುಗಳ ಪಿಡುಗಿನ ವಿರುದ್ಧ ‘ಬೇಡ ಬ್ರೋ ಗಾಂಜಾ’ ಎಂಬ ವಿಶೇಷ ಅಭಿಯಾನದ ಮೂಲಕ ಸಮರ ಸಾರಿದ್ದಾರೆ.
ನಗರದ ಪ್ರಮುಖ ವೃತ್ತಗಳಲ್ಲಿ ಸುಗಮ ವಾಹನ ಸಂಚಾರಕ್ಕೆ ವ್ಯವಸ್ಥಿತ ಕಾರ್ಯಾಚರಣೆ ನಡೆಸಲಾಗುತ್ತಿದ್ದು, ಡ್ರೋನ್ ಕಣ್ಗಾವಲು ಹಾಗೂ ಫುಟ್ ಪೆಟ್ರೋಲಿಂಗ್ ಮೂಲಕ ಭದ್ರತೆಯನ್ನು ಬಿಗಿಗೊಳಿಸಲಾಗಿದೆ. ಈ ಕಠಿಣ ಕರ್ತವ್ಯಗಳ ನಡುವೆಯೂ, ಪೊಲೀಸ್ ಸಿಬ್ಬಂದಿ ಸಮಾಜಮುಖಿ ಹಾಗೂ ಮಾನವೀಯ ಕಾರ್ಯಗಳಲ್ಲಿಯೂ ತೊಡಗಿಸಿಕೊಳ್ಳುವ ಮೂಲಕ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗುತ್ತಿದ್ದಾರೆ. ಇತ್ತೀಚೆಗೆ ಜಿಲ್ಲೆಯ ಮೂರು ಪ್ರತ್ಯೇಕ ಪ್ರಕರಣಗಳಲ್ಲಿ ಪೊಲೀಸರು ತೋರಿದ ಮಾನವೀಯ ಕಳಕಳಿ ಇದಕ್ಕೆ ನಿದರ್ಶನವಾಗಿದೆ
ಘಟನೆ 1 : ವಿದ್ಯಾರ್ಥಿಗಳನ್ನು ಮರಳಿ ಶಾಲೆಗೆ ಸೇರಿಸಿದ ಪೊಲೀಸ್
ಶಾಲಾ ಶಿಕ್ಷಣವನ್ನು ಅರ್ಧಕ್ಕೆ ಮೊಟಕುಗೊಳಿಸಿ ಹೊರಗುಳಿದಿದ್ದ ವಿದ್ಯಾರ್ಥಿಗಳನ್ನು ಪತ್ತೆಹಚ್ಚಿ ಮರಳಿ ಶಾಲೆಯತ್ತ ಕರೆತರುವ ಜಿಲ್ಲಾ ಪೊಲೀಸ್ ಇಲಾಖೆಯ ವಿಶೇಷ ಕಾರ್ಯಕ್ರಮದ ಭಾಗವಾಗಿ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯ ಸಿಬ್ಬಂದಿ ಯಶಸ್ವಿ ಕಾರ್ಯಾಚರಣೆ ನಡೆಸಿದ್ದಾರೆ. ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮಹಿಳಾ ಪೊಲೀಸ್ ಕಾನ್ಸ್‌ಟೇಬಲ್ ನಂದಿನಿ ಹಾಗೂ ಸಿಪಿಸಿ ನವೀನ್ ಅವರು ತಮ್ಮ ಠಾಣಾ ವ್ಯಾಪ್ತಿಗೆ ಒಳಪಡುವ ಮಡಿಕೆ ಚಿಲೂರು ಮತ್ತು ಹೊಳೆ ಮಡಿಕೆ ಚಿಲೂರು ಗ್ರಾಮಗಳಲ್ಲಿ ಪೆಟ್ರೋಲಿಂಗ್ ಮಾಡುತ್ತಿದ್ದ ವೆಳೆ 14 ವರ್ಷ ವಯಸ್ಸಿನ ಇಬ್ಬರು ಬಾಲಕರು ಶಾಲೆ ಬಿಟ್ಟಿರುವುದನ್ನ ಗಮನಿಸಿದ್ದರು. ಬಳಿಕ ಈ ವಿಷಯದ ಮೇಲೆ ವರ್ಕ್ ಮಾಡಲು ಆರಂಭಿಸಿದ ಪೊಲೀಸರು ಬಾಲಕರು ಹಾಗೂ ಅವರ ಪೋಷಕರೊಂದಿಗೆ ಸಮಾಲೋಚನೆ ನಡೆಸಿ ಅವರ ಮನವೊಲಿಸಿದ್ದಾರೆ. ತದನಂತರ ಇಬ್ಬರು ಬಾಲಕರನ್ನು ಮರಳಿ ಶಾಲೆಗೆ ಕರೆದುಕೊಂಡು ಹೋಗಿ ದಾಖಲಾತಿ ಮಾಡಿಸುವ ಮೂಲಕ ಶ್ಲಾಘನೀಯ ಕಾರ್ಯ ನಿರ್ವಹಿಸಿದ್ದಾರೆ.
ಘಟನೆ 2 : ಆಸರೆಯಾಗಿ ಆಶ್ರಯ ಒದಗಿಸಿದ ಅಕ್ಕಾಪಡೆ
ಮತ್ತೊಂದು ಪ್ರಕರಣದಲ್ಲಿ, ಶಿವಮೊಗ್ಗ ನಗರದ ಜನನಿಬಿಡ ಪ್ರದೇಶವಾದ ಗಾಂಧಿ ಬಜಾರ್‌ನಲ್ಲಿ ಅಸ್ವಸ್ಥ ಸ್ಥಿತಿಯಲ್ಲಿ ಅನಾಥವಾಗಿ ಬಿದ್ದಿದ್ದ ಮಹಿಳೆಯೊಬ್ಬರನ್ನು ರಕ್ಷಿಸಿ, ಅವರಿಗೆ ಸುರಕ್ಷಿತ ಆಶ್ರಯ ಕಲ್ಪಿಸುವಲ್ಲಿ ಜಿಲ್ಲಾ ಪೊಲೀಸ್ ಇಲಾಖೆಯ ‘ಅಕ್ಕ ಪಡೆ’ಯ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ಜುಲೈ 6 ರಂದು ಕರ್ತವ್ಯದಲಿದ್ದ ಅಕ್ಕ ಪಡೆಯ ಸಿಬ್ಬಂದಿ ಎಎಸ್ಐ ಹೇಮಾವತಿ, ಪೊಲೀಸ್ ಕಾನ್ಸ್‌ಟೇಬಲ್ ಅಶ್ವಿನಿ, ಹೆಡ್ ಕಾನ್ಸ್‌ಟೇಬಲ್ ಅನುಷಾ ಮತ್ತು ಅಮೂಲ್ಯ ಗಾಂಧಿ ಬಜಾರ್ ಪ್ರದೇಶದಲ್ಲಿ ಗಸ್ತು ತಿರುಗುತ್ತಿದ್ದರು. ಈ ವೇಳೆ, ಮಹಿಳೆಯೊಬ್ಬರು ಅಸ್ವಸ್ಥರಾಗಿ ರಸ್ತೆ ಬದಿಯಲ್ಲಿರುವುದು ಗಮನಕ್ಕೆ ಬಂದಿದೆ. ತಕ್ಷಣವೇ ಸ್ಪಂದಿಸಿದ ಸಿಬ್ಬಂದಿ ಆಕೆಯ ಬಳಿ ತೆರಳಿ ವಿಚಾರಣೆ ನಡೆಸಿದ್ದಾರೆ. ಆದರೆ, ಅನಾರೋಗ್ಯದಿಂದ ಬಳಲುತ್ತಿದ್ದ ಕಾರಣ ಆಕೆ ತನ್ನ ಹೆಸರು ಹಾಗೂ ವಿಳಾಸವನ್ನು ತಿಳಿಸುವ ಸ್ಥಿತಿಯಲ್ಲಿ ಇರಲಿಲ್ಲ. ಪರಿಸ್ಥಿತಿಯನ್ನು ಅರಿತ ಸಿಬ್ಬಂದಿ, ಆಕೆಗೆ ಅಗತ್ಯವಿದ್ದ ಪ್ರಾಥಮಿಕ ಉಪಚಾರವನ್ನು ನೀಡಿದ್ದಾರೆ. ಆಕೆಯ ಆರೋಗ್ಯದಲ್ಲಿ ಕೊಂಚ ಚೇತರಿಕೆ ಕಂಡುಬಂದ ಬಳಿಕ, ಸುರಕ್ಷಿತವಾಗಿ ಕರೆದೊಯ್ದು ಶಿವಮೊಗ್ಗದ ಸೋಮಿನಕೊಪ್ಪದಲ್ಲಿರುವ ‘ಶಕ್ತಿ ಸದನ’ ಆಶ್ರಯ ಕೇಂದ್ರಕ್ಕೆ ದಾಖಲಿಸಿ ಮಾನವೀಯತೆ ಮೆರೆದಿದ್ದಾರೆ.
ಘಟನೆ 3 : ಮರಳಿಗೆ ಮನೆ ಮುಟ್ಟಿಸಿದ ಪೊಲೀಸ್
ಇದೇ ರೀತಿಯ ಮತ್ತೊಂದು ಘಟನೆಯಲ್ಲಿ, ಶಿವಮೊಗ್ಗದ ದೊಡ್ಡಪೇಟೆ ಪೊಲೀಸ್ ಠಾಣೆಯ ಮುಂಭಾಗದಲ್ಲಿರುವ ಸಾಗರ ರಸ್ತೆಯಲ್ಲಿ ಅನಾಮಧೇಯ ಮಹಿಳೆಯೊಬ್ಬರು ಅಸ್ವಸ್ಥ ಸ್ಥಿತಿಯಲ್ಲಿರುವ ಕುರಿತು ಮಾಹಿತಿ ಲಭ್ಯವಾಗಿತ್ತು. ಈ ಮಾಹಿತಿಯ ಆಧಾರದ ಮೇಲೆ ಜಿಲ್ಲಾ ಪೊಲೀಸ್ ಇಲಾಖೆಯ ‘ಅಕ್ಕ ಪಡೆ’ಯ ಅಧಿಕಾರಿಗಳಾದ ಎಎಸ್ಐ ಅಮೃತಬಾಯಿ ಹಾಗೂ ಹೆಚ್ ಸಿ ಸವಿತಾ ಅವರು ತಕ್ಷಣ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಸ್ಥಳದಲ್ಲಿ ಪರಿಶೀಲನೆ ನಡೆಸಿದಾಗ ಮಹಿಳೆ ಅನಾರೋಗ್ಯದಿಂದ ಬಳಲುತ್ತಿರುವುದು ಕಂಡುಬಂದಿದೆ. ತಕ್ಷಣ ಸ್ಪಂದಿಸಿದ ಪೊಲೀಸ್ ಸಿಬ್ಬಂದಿ, ಆಕೆಗೆ ಅಗತ್ಯ ಪ್ರಾಥಮಿಕ ಉಪಚಾರವನ್ನು ಒದಗಿಸಿದ್ದಾರೆ. ಬಳಿಕ ಮಹಿಳೆಯ ವಿಳಾಸ ಹಾಗೂ ಆಕೆಯ ಕುಟುಂಬದವರ ಬಗ್ಗೆ ಮಾಹಿತಿ ಕಲೆಹಾಕುವಲ್ಲಿ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ಮಹಿಳೆಯ ಕುಟುಂಬದವರನ್ನು ಪತ್ತೆಹಚ್ಚಿದ ನಂತರ, ಅವರನ್ನು ಸಂಪರ್ಕಿಸಿ ಸ್ಥಳಕ್ಕೆ ಕರೆಯಿಸಿಕೊಳ್ಳಲಾಗಿದೆ. ಬಳಿಕ ಅಸ್ವಸ್ಥ ಮಹಿಳೆಯನ್ನು ಅವರ ಕುಟುಂಬದ ಸದಸ್ಯರೊಂದಿಗೆ ಸುರಕ್ಷಿತವಾಗಿ ಮನೆಗೆ ಕಳುಹಿಸಿಕೊಡುವ ಮೂಲಕ ಅಕ್ಕ ಪಡೆಯು ಮತ್ತೊಂದು ಉತ್ತಮ ಕಾರ್ಯವನ್ನು ನಿರ್ವಹಿಸಿದೆ.ಹೀಗೆ ಶಿವಮೊಗ್ಗ ಪೊಲೀಸರು ತಮ್ಮ ನಿತ್ಯದ ಡ್ಯೂಟಿ ಟೆನ್ಶನ್ಗಳ ನಡುವೆ ಎದುರಿಗೆ ಸಿಕ್ಕ ಸಂದರ್ಭಗಳಲ್ಲಿ ಮಾನವೀಯ ಕೆಲಸಗಳನ್ನ ಮಾಡುತ್ತಿದ್ದಾರೆ. 112 ಪೊಲೀಸರ ಜೊತೆಗೆ ಡ್ಯೂಟಿ ಸಿಬ್ಬಂದಿಯು ಮನುಷ್ಯತ್ವವನ್ನ ಭಾವುಕವಾಗಿಸುವ ಇಂತಹ ಕೆಲಸಗಳನ್ನು ಮಾಡುತ್ತಿರುವುದು ಮೆಚ್ಚುಗೆಯ ಮಾತುಗಳಿಗೆ ನಿಜಕ್ಕೂ ಸಹ ಅನ್ವಯವಾಗಲಿದೆ.