Shimoga-Talaguppa Trains ಶಿವಮೊಗ್ಗ : ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ (ಕೆಎಸ್ಆರ್) ಮುಖ್ಯ ರೈಲು ನಿಲ್ದಾಣದಲ್ಲಿ ಅತ್ಯಂತ ಪ್ರಮುಖವಾದ ಯಾರ್ಡ್ ನವೀಕರಣ ಹಾಗೂ ಸುರಕ್ಷತಾ ಮೇಲ್ದರ್ಜೆಗೇರಿಸುವ ಕಾಮಗಾರಿಗಳು ಭರದಿಂದ ಸಾಗುತ್ತಿವೆ. ಈ ಹಿನ್ನೆಲೆಯಲ್ಲಿ 2026ರ ಆಗಸ್ಟ್ 18ರಿಂದ ಸೆಪ್ಟೆಂಬರ್ 4ರವರೆಗೆ ಶಿವಮೊಗ್ಗಕ್ಕೆ ಆಗಮಿಸುವ ಹಾಗೂ ಶಿವಮೊಗ್ಗದಿಂದ ಹೊರಡುವ ಹಲವು ಪ್ರಮುಖ ರೈಲುಗಳ ದೈನಂದಿನ ಸೇವೆಯಲ್ಲಿ ಭಾರಿ ವ್ಯತ್ಯಯ ಉಂಟಾಗಲಿದೆ ಎಂದು ನೈಋತ್ಯ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿದೆ.
ಶಿವಮೊಗ್ಗ : ಮನೆಗೆ ನುಗ್ಗಿ ವ್ಯಕ್ತಿಯ ಮೇಲೆ ಡ್ರ್ಯಾಗರ್‌ನಿಂದ ಹಲ್ಲೆ, ಜೀವ ಬೆದರಿಕೆ
ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ ಕೈಗೊಳ್ಳಲಾಗಿರುವ ಈ ಕಾಮಗಾರಿಗಳ ಕಾರಣದಿಂದ ಕೆಲವು ರೈಲುಗಳನ್ನು ಸಂಪೂರ್ಣವಾಗಿ ರದ್ದುಗೊಳಿಸಲಾಗಿದ್ದರೆ, ಇನ್ನು ಕೆಲವು ರೈಲುಗಳನ್ನು ಮಾರ್ಗಮಧ್ಯೆ ಮೊಟಕುಗೊಳಿಸಲಾಗಿದೆ.
ಯಶವಂತಪುರ-ಶಿವಮೊಗ್ಗ ಟೌನ್ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 16581) ಸಂಚಾರವನ್ನು 2026ರ ಸೆಪ್ಟೆಂಬರ್ 4ರಂದು ಸಂಪೂರ್ಣವಾಗಿ ರದ್ದುಗೊಳಿಸಲಾಗಿದೆ. ಅದೇ ರೀತಿ, ಅಂದು ಶಿವಮೊಗ್ಗ ಟೌನ್-ಯಶವಂತಪುರ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 16582) ರೈಲಿನ ಸಂಚಾರವೂ ಕೂಡ ಸಂಪೂರ್ಣವಾಗಿ ರದ್ದಾಗಿರುತ್ತದೆ. ಇನ್ನು ತಾಳಗುಪ್ಪ-ಬೆಂಗಳೂರು ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 20652) ರೈಲಿನ ಸಂಚಾರವನ್ನು ಆಗಸ್ಟ್ 18ರಿಂದ ಸೆಪ್ಟೆಂಬರ್ 3ರವರೆಗೆ ಅರಸೀಕೆರೆ ಹಾಗೂ ಕೆಎಸ್ಆರ್ ಬೆಂಗಳೂರು ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳಿಸಲಾಗಿದೆ. ಪರಿಣಾಮವಾಗಿ, ಈ ಅವಧಿಯಲ್ಲಿ ತಾಳಗುಪ್ಪದಿಂದ ಹೊರಡುವ ಈ ರೈಲು ಅರಸೀಕೆರೆ ನಿಲ್ದಾಣದಲ್ಲಿಯೇ ತನ್ನ ಪ್ರಯಾಣವನ್ನು ಅಂತ್ಯಗೊಳಿಸಲಿದೆ. ಇದೇ ಮಾದರಿಯಲ್ಲಿ, ಶಿವಮೊಗ್ಗ ಟೌನ್-ಬೆಂಗಳೂರು ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 12090) ಕೂಡ ಆಗಸ್ಟ್ 18ರಿಂದ ಸೆಪ್ಟೆಂಬರ್ 3ರವರೆಗೆ ಅರಸೀಕೆರೆ ಮತ್ತು ಬೆಂಗಳೂರು ನಡುವೆ ಭಾಗಶಃ ರದ್ದಾಗಲಿದ್ದು, ಇದು ಕೂಡ ಅರಸೀಕೆರೆಯಲ್ಲಿಯೇ ನಿಲ್ಲಲಿದೆ. ಮರುಪ್ರಯಾಣದಲ್ಲಿ, ಬೆಂಗಳೂರು-ಶಿವಮೊಗ್ಗ ಟೌನ್ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 12089) ಆಗಸ್ಟ್ 18ರಿಂದ ಸೆಪ್ಟೆಂಬರ್ 3ರವರೆಗೆ ಬೆಂಗಳೂರಿನ ಬದಲಾಗಿ ಅರಸೀಕೆರೆ ನಿಲ್ದಾಣದಿಂದಲೇ ತನ್ನ ಪ್ರಯಾಣವನ್ನು ಆರಂಭಿಸಲಿದೆ.
ರೈಲುಗಳ ಮಾರ್ಗ ಬದಲಾವಣೆ ಕುರಿತು ಮಾಹಿತಿ ನೀಡಿರುವ ಇಲಾಖೆಯು, ತಾಳಗುಪ್ಪ-ಮೈಸೂರು ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 16228) ರೈಲು 2026ರ ಆಗಸ್ಟ್ 30ರಂದು ತನ್ನ ನಿಗದಿತ ಮಾರ್ಗದ ಬದಲಾಗಿ ತಾಳಗುಪ್ಪದಿಂದ ಹೊರಟು ಅರಸೀಕೆರೆ, ಹಾಸನ ಮತ್ತು ಕೃಷ್ಣರಾಜನಗರ ಮಾರ್ಗವಾಗಿ ಮೈಸೂರು ತಲುಪಲಿದೆ. ಈ ಕಾರಣದಿಂದಾಗಿ ಅಂದು ತುಮಕೂರು, ಯಶವಂತಪುರ ಹಾಗೂ ಕೆಎಸ್ಆರ್ ಬೆಂಗಳೂರು ಸೇರಿದಂತೆ ಪ್ರಮುಖ ನಿಲ್ದಾಣಗಳ ನಿಲುಗಡೆಯನ್ನು ಕೈಬಿಡಲಾಗಿದೆ. ಇದೇ ರೀತಿ, ಮೈಸೂರು-ತಾಳಗುಪ್ಪ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 16227) ರೈಲು ಕೂಡ 2026ರ ಆಗಸ್ಟ್ 30ರಂದು ಮೈಸೂರಿನಿಂದ ಹೊರಟು ಕೃಷ್ಣರಾಜನಗರ, ಹಾಸನ ಹಾಗೂ ಅರಸೀಕೆರೆ ಮಾರ್ಗವಾಗಿ ಸಂಚರಿಸಲಿದೆ ಎಂದು ಇಲಾಖೆ ತಿಳಿಸಿದೆ.
