ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗದಲ್ಲಿ ಬೆಳಗ್ಗೆಯಿಂದಲು ಮಳೆಯಾಗುತ್ತಿದೆ. ನಡು ಮಳೆಗಾಲದಂತಹ ವಾತಾವರಣ ಕಾಣಿಸಿದ್ದು, ಗಾಳಿ ಗುಡುಗು ಇಲ್ಲದೇ ದೋ ಎನ್ನುತ್ತಿದೆ ವರ್ಷಧಾರೆ. ಇನ್ನೂ ಹವಾಮಾನ ಇಲಾಖೆ ಪ್ರಕಾರ, ರಾಜ್ಯಾದ್ಯಂತ ಮುಂದಿನ ಮೂರು ದಿನಗಳ ಕಾಲ ಗುಡುಗು, ಮಿಂಚು ಹಾಗೂ ಬಿರುಗಾಳಿ ಸಹಿತ ಸಾಧಾರಣದಿಂದ ಭಾರಿ ಮಳೆಯಾಗುವ ಸೂಚನೆ ಇದೆ.
ನೈಋತ್ಯ ಮುಂಗಾರು ಪ್ರವೇಶಕ್ಕೆ ಪೂರಕ ವಾತಾವರಣ ನಿರ್ಮಾಣವಾಗಿದ್ದು, ಅರಬ್ಬಿ ಸಮುದ್ರ ಹಾಗೂ ಬಂಗಾಳಕೊಲ್ಲಿಯ ಹಲವು ಭಾಗಗಳಲ್ಲಿ ಮುಂಗಾರು ಚುರುಕಾಗುವ ಸಾಧ್ಯತೆಯಿದೆ ಅಂತಾ ಹವಾಮಾನ ಇಲಾಖೆ ಹೇಳಿದೆ.
ಇನ್ನೂ ಮೂರು ದಿನ ಬಿರುಗಾಳಿ ಸಹಿತ ಭಾರಿ ಮಳೆ ಮುನ್ಸೂಚನೆ
ದಕ್ಷಿಣ ಒಳನಾಡಿನ, ಶಿವಮೊಗ್ಗ ಚಿಕ್ಕಮಗಳೂರು ಸೇರಿದಂತೆ ಕೋಲಾರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ತುಮಕೂರು, ಚಿಕ್ಕಬಳ್ಳಾಪುರ ಮತ್ತು ರಾಮನಗರ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಗಂಟೆಗೆ 50 ರಿಂದ 60 ಕಿಲೋಮೀಟರ್ ವೇಗದ ಬಿರುಗಾಳಿ ಸಹಿತ ಭಾರಿ ಮಳೆಯಾಗುವ ಸಾಧ್ಯತೆಯಿದೆ.
ಇದೇ ವೇಳೆ ಬಳ್ಳಾರಿ, ವಿಜಯನಗರ, ಚಿತ್ರದುರ್ಗ ಜಿಲ್ಲೆಗಳಲ್ಲಿ 40 ರಿಂದ 50 ಕಿಲೋಮೀಟರ್ ವೇಗದ ಗಾಳಿಯೊಂದಿಗೆ ಸಾಧಾರಣ ಮಳೆಯಾಗಲಿದೆ.
ಉತ್ತರ ಒಳನಾಡಿನ ಯಾದಗಿರಿ, ರಾಯಚೂರು, ಕೊಪ್ಪಳ, ಗದಗ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ 50 ರಿಂದ 60 ಕಿಲೋಮೀಟರ್ ವೇಗದ ಗಾಳಿಯೊಂದಿಗೆ ಮಳೆಯಾಗುವ ಮುನ್ಸೂಚನೆ ಇದೆ.
ಕರಾವಳಿಯ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ ಎಂದು ಇಲಾಖೆ ತಿಳಿಸಿದೆ.
ನಮ್ಮ ಮಲೆನಾಡು ಟುಡೆಯ ವಿಡಿಯೋಗಳನ್ನು ನೀವಿಲ್ಲಿ ನೋಡಬಹುದು: https://www.youtube.com/shorts/x8I63rpLvyw
