ಜಯನಗರ, ಗ್ರಾಮಾಂತರ ಹಾಗೂ ದೊಡ್ಡಪೇಟೆ ಠಾಣೆ ವ್ಯಾಪ್ತಿಯಲ್ಲಿ ನಾಲ್ವರು ವಶಕ್ಕೆ

ಶಿವಮೊಗ್ಗ ನಗರದ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗಾಂಜಾ ಸೇವಿಸಿ ಅನುಮಾನಾಸ್ಪದವಾಗಿ ವರ್ತಿಸುತ್ತಿದ್ದ ನಾಲ್ವರು ಯುವಕರನ್ನು ಪೊಲೀಸರು ಪ್ರತ್ಯೇಕ ಪ್ರಕರಣಗಳಲ್ಲಿ ವಶಕ್ಕೆ ಪಡೆದಿದ್ದಾರೆ. ನಾರ್ಕೋಟಿಕ್ ಡ್ರಗ್ಸ್ ಅಂಡ್ ಸೈಕೋಟ್ರೋಪಿಕ್ ಸಬ್‌ಸ್ಟೆನ್ಸಸ್ (ಎನ್.ಡಿ.ಪಿ.ಎಸ್) ಕಾಯ್ದೆ 1985 ರ ಸೆಕ್ಷನ್ 27(ಬಿ) ಅಡಿಯಲ್ಲಿ ಈ ಎಲ್ಲಾ ಪ್ರಕರಣಗಳು ದಾಖಲಾಗಿವೆ.

ದಿನಾಂಕ 19/05/2026 ರಂದು ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಪೇಸ್ ಕಾಲೇಜಿನ ಹತ್ತಿರದ ಬಸ್ ನಿಲ್ದಾಣದ ಬಳಿ ಮೊದಲನೇ ಘಟನೆ ವರದಿಯಾಗಿದೆ. ಠಾಣಾ ಸಿಬ್ಬಂದಿ ಗಸ್ತಿನಲ್ಲಿದ್ದಾಗ ಯುವಕನೊಬ್ಬ ಅನುಮಾನಾಸ್ಪದವಾಗಿ ವರ್ತಿಸುತ್ತಿರುವುದನ್ನು ಗಮನಿಸಿದ್ದಾರೆ. ಆತನನ್ನು ಠಾಣೆಗೆ ಕರೆತಂದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದೆ. ಈ ಸಂಬಂಧ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಮತ್ತೊಂದು ಪ್ರಕರಣವು ದಿನಾಂಕ 18/05/2026 ರಂದು ಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯ ಬಸವನಗುಡಿ 03 ನೇ ಕ್ರಾಸ್ ಬಳಿ ವರದಿಯಾಗಿದೆ. ಸ್ಟೇಷನ್​ ಸಿಬ್ಬಂದಿ ಗಸ್ತು ತಿರುಗುತ್ತಿದ್ದಾಗ ನಾಲ್ವರು ವ್ಯಕ್ತಿಗಳು ಅನುಮಾನಾಸ್ಪದವಾಗಿ ಕೂಗಾಡುತ್ತಿರುವುದನ್ನು ಗಮನಿಸಿದ್ದಾರೆ. ಅವರ ಬಳಿ ತೆರಳಿ ವಿಚಾರಿಸಿದಾಗ ನಾಲ್ವರು ಮದ್ಯಪಾನ ಹಾಗೂ ಗಾಂಜಾ ಸೇವಿಸಿರುವ ಅನುಮಾನ ಮೂಡಿದೆ. ಹೀಗಾಗಿ ಜನರಿಗೆ ಉಪಟಳ ನೀಡಬಹುದೆಂಬ ಅನುಮಾನದ ಮೇಲೆ ಎಲ್ಲರನ್ನೂ ವಶಕ್ಕೆ ಪಡೆದು ಮೆಗ್ಗಾನ್ ಆಸ್ಪತ್ರೆಗೆ ವೈದ್ಯಕೀಯ ತಪಾಸಣೆಗೆ ಕಳುಹಿಸಿದ್ದರು. ಪರೀಕ್ಷೆಯಲ್ಲಿ ಓರ್ವ ಗಾಂಜಾ ಸೇವಿಸಿರುವುದು ದೃಢಪಟ್ಟಿದೆ. ಆತನ ವಿರುದ್ಧ ಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ದೊಡ್ಡಪೇಟೆ ಠಾಣೆ ವ್ಯಾಪ್ತಿಯಲ್ಲಿ ಇಬ್ಬರು ವಶಕ್ಕೆ

ದೊಡ್ಡಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿಯೂ ಎರಡು ಪ್ರತ್ಯೇಕ ಪ್ರಕರಣಗಳು ವರದಿಯಾಗಿವೆ. ಮೇ 18 ರಂದು ಮಿಳಘಟ್ಟ ಸಂತೆ ಮೈದಾನದಲ್ಲಿ ಗಸ್ತು ತಿರುಗುತ್ತಿದ್ದಾಗ ಯುವಕನೊಬ್ಬನನ್ನು ಗಾಂಜಾ ಸೇವಿಸಿ ಸಾರ್ವಜನಿಕರಿಗೆ ಉಪಟಳ ನೀಡುತ್ತಿರುವ ಶಂಕೆಯ ಮೇಲೆ ವಶಕ್ಕೆ ಪಡೆಯಲಾಗಿತ್ತು. ಆತನ ವೈದ್ಯಕೀಯ ತಪಾಸಣೆಯಲ್ಲೂ ಗಾಂಜಾ ಸೇವನೆ ದೃಢಪಟ್ಟಿದೆ.

ಅದೇ ರೀತಿ, ಮೇ 19 ರಂದು ಖಾಸಗಿ ಬಸ್ ನಿಲ್ದಾಣದ ಬಳಿ 28 ವರ್ಷದ ಎಂಬಾತನನ್ನು ವಶಕ್ಕೆ ಪಡೆಯಲಾಗಿದೆ. ಆತನೂ ಸಹ ಗಾಂಜಾ ಸೇವಿಸಿರುವುದು ಮೆಗ್ಗಾನ್ ಆಸ್ಪತ್ರೆಯ ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿದ್ದು, ಈ ಇಬ್ಬರ ವಿರುದ್ಧವೂ ದೊಡ್ಡಪೇಟೆ ಠಾಣೆಯಲ್ಲಿ ಎನ್.ಡಿ.ಪಿ.ಎಸ್ ಕಾಯ್ದೆಯಡಿ ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗಿದೆ.

ನಮ್ಮ ಮಲೆನಾಡು ಟುಡೆಯ ವಿಡಿಯೋಗಳನ್ನು ನೀವಿಲ್ಲಿ ನೋಡಬಹುದು: https://www.youtube.com/shorts/x8I63rpLvyw