ಶಿವಮೊಗ್ಗ ಪೊಲೀಸ್ ತನಿಖಾ ಸುದ್ದಿ : ಲೆನಾಡಿನ ಒಂಟಿ ಮನೆ ಕಳ್ಳತನ, ದರೋಡೆ ಮತ್ತು ಕೊಲೆ ಪ್ರಕರಣಗಳನ್ನು ಈವರೆಗೂ ಭೇದಿಸಲಾಗದ ಹೊತ್ತಿನಲ್ಲಿ ಆಗುಂಬೆ ಪೊಲೀಸರು ಖಡಕ್ ಕಾರ್ಯಾಚರಣೆ ಮಾಡಿದ್ದಾರೆ. ಒಂಟಿ ಮನೆಗಳ ಜನರ ಆತಂಕ ದೂರ ಮಾಡಿದ್ದಾರೆ. ಇತ್ತೀಚೆಗೆ ಆಗುಂಬೆಯ ಲಕ್ಕುಂದ ಗ್ರಾಮದಲ್ಲಿ ನಡೆದ ಒಂಟಿ ಮನೆ ಕಳ್ಳತನವನ್ನು ಪೊಲೀಸರು ಚಾಣಾಕ್ಷತನದಿಂದ ಭೇದಿಸಿದ್ದಾರೆ.
ಆಗುಂಬೆಯ ಲಕ್ಕುಂದದಲ್ಲಿ ನಡೆದಿದ್ದ ಘಟನೆ
ಏಪ್ರಿಲ್ 21 ರಂದು ಆಗುಂಬೆ ಸನಿಹದ ಲಕ್ಕುಂದ ಗ್ರಾಮದಲ್ಲಿ ಹಾಡಹಗಲೇ ನೀರು ಕೇಳುವ ನೆಪದಲ್ಲಿ ಬಂದ ಮೂವರು ಅಪರಿಚಿತ ಕಳ್ಳರು, ಒಂಟಿ ವೃದ್ಧೆಯ ಮೇಲೆ ಹಲ್ಲೆ ನಡೆಸಿದರು. ಅಲ್ಲದೆ ಬಾಯಿಗೆ ಬಟ್ಟೆ ತುರುಕಿ ಅಡುಗೆ ಮನೆಯಲ್ಲಿ ಕೂಡಿಹಾಕಿ, ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ನಗದನ್ನು ದೋಚಿ ಪರಾರಿಯಾಗಿದ್ದರು.
ಮನೆಯೊಳಗೆ ನುಗ್ಗಿ ನಡೆದಿಸಿದ್ರು ದರೋಡೆ
ಲಕ್ಕುಂದ ಗ್ರಾಮದ ಒಂಟಿ ಮನೆಯಲ್ಲಿ ವಾಸವಿದ್ದ ವಿಶಾಲಾಕ್ಷಿ (74) ಎಂಬುವವರೇ ದರೋಡೆಕೋರರ ಹಲ್ಲೆಗೆ ಒಳಗಾಗಿದ್ದರು. ವಿಶಾಲಾಕ್ಷಿ ಅವರ ಪತಿ 15 ವರ್ಷಗಳ ಹಿಂದೆಯೇ ನಿಧನರಾಗಿದ್ದರಿಂದ ಇವರು ಮನೆಯಲ್ಲಿ ಒಬ್ಬರೇ ವಾಸವಾಗಿದ್ದರು. ಏಪ್ರಿಲ್ 21ರ ಮಧ್ಯಾಹ್ನ ಸುಮಾರು 3 ಗಂಟೆಯ ಸುಮಾರಿಗೆ ವಿಶಾಲಾಕ್ಷಿ ಅವರು ಮನೆಯಲ್ಲಿ ಮಲಗಿದ್ದಾಗ ಯಾರೋ ಬಾಗಿಲು ತಟ್ಟಿದ ಶಬ್ದ ಕೇಳಿಸಿತ್ತು. ತಕ್ಷಣ ಎಚ್ಚರಗೊಂಡ ವಿಶಾಲಾಕ್ಷಿ ಕಿಟಕಿಯ ಮೂಲಕ ನೋಡಿದಾಗ ಮೂವರು ಅಪರಿಚಿತ ವ್ಯಕ್ತಿಗಳು ನಿಂತಿರುವುದು ಗೊತ್ತಾಯಿತು.
ಆ ಅಪರಿಚಿತರು ಕುಡಿಯಲು ನೀರು ಕೊಡುವಂತೆ ವಿಶಾಲಾಕ್ಷಿಯನ್ನು ಕೇಳಿದ್ದರು. ವಿಶಾಲಾಕ್ಷಿ ಜಾಗರೂಕತೆ ವಹಿಸಿ ಬಾಗಿಲು ತೆರೆಯದೇ, ‘ನಲ್ಲಿಯಲ್ಲಿ ನೀರಿದೆ ಅಲ್ಲೇ ಕುಡಿಯಿರಿ’ ಎಂದು ಕಿಟಕಿಯ ಮೂಲಕವೇ ತಿಳಿಸಿದ್ದರು. ನೀರು ಕುಡಿದು ಅಪರಿಚಿತರು ಹೋಗಿರಬಹುದು ಎಂದು ಭಾವಿಸಿದ ವಿಶಾಲಾಕ್ಷಿ ಅವರು ಹಿತ್ತಲ ಬಾಗಿಲನ್ನು ತೆರೆದಾಗ ಆಘಾತ ಕಾದಿತ್ತು. ಅಲ್ಲಿಯೇ ಮರೆಯಾಗಿ ನಿಂತಿದ್ದ ಮೂವರು ದರೋಡೆಕೋರರು ಒಮ್ಮೆಲೇ ವೃದ್ಧೆಯನ್ನು ಮನೆಯೊಳಗೆ ತಳ್ಳಿ ನುಗ್ಗಿದ್ದರು.
ಒಳನುಗ್ಗಿದ ಕಳ್ಳರು ನಂತರ ವಿಶಾಲಾಕ್ಷಿ ಅವರ ಬಾಯಿಯನ್ನು ಬಲವಾಗಿ ಒತ್ತಿ ಹಿಡಿದು, ಬಳಿಕ ಇವರ ಕೈಗಳನ್ನು ಸೀರೆಯಿಂದ ಕಟ್ಟಿಹಾಕಿದರು. ಕಿರುಚಾಡದಂತೆ ಬಾಯಿಗೆ ಬಟ್ಟೆ ತುರುಕಿದ್ದರು. ಕಳ್ಳರು ವಿಶಾಲಾಕ್ಷಿ ಅವರ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿ, ಅಡುಗೆ ಮನೆಯಲ್ಲಿ ಕೂಡಿಹಾಕಿದ್ದರು. ನಂತರ ಇಡೀ ಮನೆ ಜಾಲಾಡಿದ ಕಳ್ಳರು, ರೂಮಿನಲ್ಲಿದ್ದ ಬೀರುವನ್ನು ಒಡೆದು ಅದರಲ್ಲಿದ್ದ ಆಭರಣಗಳನ್ನು ದೋಚಿದ್ದರು.
₹17.52 ಚಿನ್ನ ದರೋಡೆಯಾಗಿತ್ತು
- ಇದಲ್ಲದೆ ವಿಶಾಲಾಕ್ಷಿ ಅವರ ಮೈಮೇಲಿದ್ದ ಚಿನ್ನದ ಸರ, ಎರಡು ಕೈಬಳೆ ಹಾಗೂ ಕಿವಿ ಓಲೆ ಸೇರಿದಂತೆ ಒಟ್ಟು 146 ಗ್ರಾಂ ತೂಕದ ಚಿನ್ನಾಭರಣಗಳನ್ನು ಬಲವಂತವಾಗಿ ಕಸಿದುಕೊಂಡಿದ್ದರು. ಇದರ ಅಂದಾಜು ಮೌಲ್ಯ ₹17.52 ಲಕ್ಷ ಎಂದು ಲೆಕ್ಕಾಚಾರ ಹಾಕಲಾಗಿತ್ತು.
- ಇದರೊಂದಿಗೆ ಬೀರುವಿನಲ್ಲಿದ್ದ ₹50,000 ನಗದು, ಟೇಬಲ್ ಮೇಲಿದ್ದ ಪರ್ಸ್‌ನಲ್ಲಿದ್ದ ₹1,000 ಹಣ ಹಾಗೂ ಒಂದು ಮೊಬೈಲ್ ಫೋನ್ ಅನ್ನು ದೋಚಿದ ಕಳ್ಳರು ಹಿತ್ತಲ ಬಾಗಿಲಿನ ಮೂಲಕವೇ ಓಡಿ ಪರಾರಿಯಾಗಿದ್ದರು.
- ಹಾಡುಹಗಲೇ ನಡೆದ ಈ ಘಟನೆ ಆಗುಂಬೆ ಮತ್ತು ತೀರ್ಥಹಳ್ಳಿ ಭಾಗದ ಜನರಲ್ಲಿ ತೀವ್ರ ಆತಂಕವನ್ನು ಮೂಡಿಸಿತ್ತು. ಆಗುಂಬೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಕಳ್ಳರ ಪತ್ತೆಗಾಗಿ ಜಾಲ ಬೀಸಿದ್ದರು. ಘಟನಾ ಸ್ಥಳಕ್ಕೆ ಖುದ್ದು ಎಸ್ಪಿ ನಿಖಿಲ್ ಬಿ. ರವರು ಭೇಟಿ ನೀಡಿ ಪರಿಶೀಲಿಸಿದ್ದರು.
ಶಿವಮೊಗ್ಗ ಪೊಲೀಸ್ ತನಿಖೆ ತಂಡದಲ್ಲಿದ್ದರು ಸ್ಪೆಷಲ್ ಕ್ರೈಂ ತಜ್ಞರು
ಎಸ್ಪಿ ನಿಖಿಲ್ ಬಿ. ಆರೋಪಿ ಹಾಗೂ ಮಾಲು ಪತ್ತೆಗಾಗಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಕಾರಿಯಪ್ಪ ಎ.ಜಿ. ರವರ ಮಾರ್ಗದರ್ಶನದಲ್ಲಿ, ತೀರ್ಥಹಳ್ಳಿ ಡಿವೈಎಸ್ಪಿ ಅರವಿಂದ ಕಲಗುಜ್ಜಿ, ಮಾಳೂರು ವೃತ್ತದ ಸಿಪಿಐ ರಾಜಶೇಖರ್ ಎಲ್. ಹಾಗೂ ತೀರ್ಥಹಳ್ಳಿ ಪೊಲೀಸ್ ಠಾಣೆಯ ಪಿಐ ಇಮ್ರಾನ್ ಬೇಗ್ ರವರ ನೇತೃತ್ವದಲ್ಲಿ ತನಿಖಾ ತಂಡವನ್ನು ರಚಿಸಿದ್ದರು.
ಈ ತಂಡದಲ್ಲಿ ಆಗುಂಬೆ ಪೊಲೀಸ್ ಠಾಣೆಯ ಪಿ.ಎಸ್.ಐ ಶಿವನಗೌಡ, ಮಾಳೂರು ಪಿ.ಎಸ್.ಐ ಸುನಿಲ್, ಸಿಬ್ಬಂದಿಯವರಾದ ಲಿಂಗೇಗೌಡ, ಸುರಕ್ಷಿತ್, ಕಿರಣ್ ಕುಮಾರ್, ಕುಮಾರ್, ಜೋಸೆಫ್ ಮ್ಯಾಥ್ಯೂ, ಸುರೇಶ್ ನಾಯ್ಕ, ಜಯಕುಮಾರ್, ರಮೇಶ ಅಕ್ಕಸಾಲಿ, ವಿನಯ್ ಕುಮಾರ್, ಉಲ್ಲಾಸ್ ನಾಯ್ಕ, ಪ್ರಶಾಂತ್.ಓ, ಅನಿಲ್, ನಾಗಾರ್ಜುನ್, ವಿಶ್ವನಾಥ, ಸುನಿಲ್, ರವಿ.ಹೆಚ್.ಸಿ, ಅರವಿಂದ, ಚಾಲಕರಾದ ಅವಿನಾಶ್, ತಾಂತ್ರಿಕ ವಿಭಾಗದ ಸಿಬ್ಬಂದಿಯವರಾದ ಗುರುರಾಜ್ ಮತ್ತು ಇಂದ್ರೇಶ್ ರವರುಗಳನ್ನು ಒಳಗೊಂಡಿತ್ತು.
ಆರೋಪಿಗಳು ಪತ್ತೆಯಾಗಿದ್ದು ಹೇಗೆ
ತೀರ್ಥಹಳ್ಳಿ ಭಾಗದಲ್ಲಿ ನಡೆದ ಈ ದರೋಡೆ ಪ್ರಕರಣ ಒಂಟಿ ಮನೆಗಳಲ್ಲಿ ತೀವ್ರ ಆತಂಕ ಸೃಷ್ಟಿಸಿತ್ತು. ಹಾಡಹಗಲೇ ಈ ಘಟನೆ ನಡೆದಿದ್ದರಿಂದ ಜನರು ಇನ್ನೂ ಭಯಭೀತರಾಗಿದ್ದರು. ಆದರೆ ಎಸ್ಪಿ ನಿಖಿಲ್ ಬಿ. ರವರು ರಚಿಸಿದ ತನಿಖಾ ತಂಡ ಆರೋಪಿಗಳನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದೆ. ಈ ಜಾಡಿನ ಬೆನ್ನಹಿಂದೆ ಬಿದ್ದ ಪೊಲೀಸರು ಇತರ ಆರೋಪಿಗಳನ್ನು ಬಂಧಿಸುತ್ತಾರೆ. ಆರೋಪಿಗಳಾದ 1) ಭರತ್ ವೈ. ಅಲಿಯಾಸ್ ಭಟ್ಟ (25 ವರ್ಷ), ವಾಸ: ಜೇಡಿಕಟ್ಟೆ, ಹೊಸೂರು, ತವಲಗುಂದಿ ಪೋಸ್ಟ್, ಭದ್ರಾವತಿ (ತಾ). 2) ಅಶೋಕ (28 ವರ್ಷ), ಜಾವಳ್ಳಿ ಗ್ರಾಮ, ಶಿವಮೊಗ್ಗ. 3) ಮಹಮ್ಮದ್ ಇಬ್ರಾಹಿಂ ಮೀರಾ ಅಲಿಯಾಸ್ ಟಕ್ಕರ್ (24 ವರ್ಷ), ವಾಸ: ವೀರಾಪುರ, ಭದ್ರಾಕಾಲೋನಿ, ಭದ್ರಾವತಿ (ತಾ) ಮತ್ತು ಇತರರನ್ನು ದಸ್ತಗಿರಿ ಮಾಡಲಾಗಿದೆ.
ಕ್ರಿಮಿನಲ್ನ ಸ್ಕೆಚ್ಗೆ ಖಾಕಿ ಹೆಣೆಯಿತು ರೋಚಕ ಬಲೆ
ಹೌದು, ಒಂಟಿ ಮನೆಗಳಲ್ಲಿ ಕಳ್ಳತನ ಮಾಡುವುದೆಂದರೆ ಪೂರ್ವಾಪರ ಮಾಹಿತಿ ಕಲೆಹಾಕದೆ ಮಾಡಲು ಸಾಧ್ಯವಿಲ್ಲ. ಕುರುವಳ್ಳಿ…… ಎಂಬ ಸ್ಥಳೀಯ ಕ್ರಿಮಿನಲ್ ಮೊದಲು ವಿಶಾಲಾಕ್ಷಿ ಮನೆಯಲ್ಲಿ ಒಬ್ಬಂಟಿಯಾಗಿರುವ ಮಾಹಿತಿ ಕಲೆಹಾಕಿರುತ್ತಾನೆ. ನಂತರ ತನ್ನ ಹೊರ ತಾಲೂಕಿನ ಸಹಚರ ಮಿತ್ರರ ತಂಡವನ್ನು ರೆಡಿ ಮಾಡಿದ್ದಾನೆ. ಅಂದುಕೊಂಡಂತೆ ಏಪ್ರಿಲ್ 21 ರಂದು ಮಧ್ಯಾಹ್ನ ಮನೆ ದರೋಡೆಗೆ ಸ್ಕೆಚ್ ಹಾಕಿದ್ದಾನೆ. ಮೇಲಿನ ಕುರುವಳ್ಳಿ ………..ನ ಬೈಕ್ ಪೊಲೀಸರು ಹುಡುಕುತ್ತಿದ್ದ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿರುತ್ತದೆ. ಆತನ ಫೋನ್ ಕರೆಗಳ ಮೇಲೆ ನಿಗಾ ಇಟ್ಟ ಪೊಲೀಸರಿಗೆ ಮತ್ತಷ್ಟು ಮಾಹಿತಿ ಲಭ್ಯವಾಗುತ್ತದೆ. ಮೊದಲೇ ಕ್ರೈಂ ಶೀಟ್‌ನಲ್ಲಿರುವ ……ನ ಬೈಕ್ ಲಕ್ಕುಂದ ಸನಿಹದಿಂದ ತೀರ್ಥಹಳ್ಳಿಗೆ ಬರುವವರೆಗೆ ಅಲ್ಲಲ್ಲಿ ಲಭ್ಯವಿರುವ ಸಿಸಿ ಕ್ಯಾಮೆರಾಗಳಲ್ಲಿ ಸ್ಕೂಟಿಯಲ್ಲಿ ಬರುವ ದೃಶ್ಯ ಸೆರೆಯಾಗಿರುತ್ತದೆ. ಈತನ ಚಲನವಲನದ ಮೇಲೆ ಹದ್ದಿನ ಕಣ್ಣಿಡುವ ಪೊಲೀಸರಿಗೆ ನಿಜವಾದ ಆರೋಪಿಗಳ ಪತ್ತೆಗೆ ಬಲೆ ಬೀಸಲು ಸಾಧ್ಯವಾಗುತ್ತದೆ.
ಶಿವಮೊಗ್ಗ ಪೊಲೀಸ್ / ನೆರವಾದ ತಂತ್ರಜ್ಞಾನ, ಸಿಸಿಟಿವಿ ಫೂಟೇಜ್
ದರೋಡೆ ನಡೆದ ನಂತರ ಪೊಲೀಸರು ಅಂದಾಜು 60 ಕಿಲೋಮೀಟರ್ ವ್ಯಾಪ್ತಿಯ ಎಲ್ಲಾ ಸಿಸಿಟಿವಿ ಕ್ಯಾಮೆರಾಗಳ ಫೂಟೇಜ್‌ಗಳನ್ನು ಪೊಲೀಸರು ಜಾಲಾಡಿದ್ದಾರೆ. ದರೋಡೆ ನಡೆದ ಸ್ಥಳದ ಸನಿಹ ಲಭ್ಯವಿರುವ ಸಿಸಿ ಕ್ಯಾಮೆರಾಗಳ ವಿಡಿಯೋವನ್ನು ಅವಲೋಕಿಸಿದ್ದಾರೆ. ಬೈಕ್‌ನಲ್ಲಿ, ಕಾರಿನಲ್ಲಿ, ನಡೆದಾಡಿಕೊಂಡು ಹೋದವರ ಪ್ರತಿಯೊಂದು ಮಾಹಿತಿಯನ್ನು ಕಲೆಹಾಕಿದ್ದಾರೆ. ಬೈಕ್ ನಂಬರ್‌ಗಳನ್ನು ಟ್ರೇಸ್ ಮಾಡಿದ್ದಾರೆ. ಹಾಡಹಗಲೇ ಇಂತಹದ್ದೇ ಮನೆಯನ್ನು ದರೋಡೆ ಮಾಡಬೇಕು, ಅಲ್ಲಿ ಸಿಕ್ಕಾಪಟ್ಟೆ ದುಡ್ಡಿದೆ ಎಂದು ಹೊರಗಿನವರಿಗಂತೂ ಗೊತ್ತಿರುವುದಿಲ್ಲ… ಸ್ಥಳೀಯರ ಸಹಕಾರವಿಲ್ಲದೆ ಈ ದರೋಡೆ ಮಾಡಲು ಸಾಧ್ಯವಿಲ್ಲ ಎಂಬ ಕನ್‌ಕ್ಲೂಷನ್‌ಗೆ (ತೀರ್ಮಾನಕ್ಕೆ) ಬಂದ ಪೊಲೀಸರು ತನಿಖೆಯ ಆಯಾಮವನ್ನೇ ಬದಲಿಸಿದರು.
ನಮ್ಮ ಮಲೆನಾಡು ಟುಡೆಯ ವಿಡಿಯೋಗಳನ್ನು ನೀವಿಲ್ಲಿ ನೋಡಬಹುದು: https://www.youtube.com/shorts/x8I63rpLvyw
