ಭದ್ರಾವತಿ: ಪೆಟ್ರೋಲ್ ಹಾಕಿಸಲು ಹೋದ ಯುವಕನ ಮೇಲೆ ಚಾಕು ಇರಿತ; ಪ್ರಾಣಾಪಾಯದಿಂದ ಪಾರು

ಹಂಚಿಕೊಳ್ಳಿ
WhatsApp Facebook X Telegram
Shimoga
Shimoga

ಭದ್ರಾವತಿ:  ಮದುವೆ ಸಮಾರಂಭಕ್ಕೆಂದು ಭದ್ರಾವತಿಗೆ ಬಂದಿದ್ದ ಯುವಕನೊಬ್ಬನ ಮೇಲೆ ತಡರಾತ್ರಿ ಅಪರಿಚಿತ ದುಷ್ಕರ್ಮಿಗಳು ಚಾಕುವಿನಿಂದ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿರುವ ಘಟನೆ ಭದ್ರಾವತಿ ನಗರದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಬಳಿ ನಡೆದಿದೆ. 

ಶಿವಮೊಗ್ಗ: ವೆಂಕಟೇಶ್ ನಗರದಲ್ಲಿ ಮಟಮಟ ಮಧ್ಯಾಹ್ನವೇ ಕಳ್ಳತನ, 19 ಲಕ್ಷ ಮೌಲ್ಯದ ಚಿನ್ನ, ದುಡ್ಡು ಮಾಯ! ಹೇಗಾಯ್ತು ಘಟನೆ

Bhadravathi Crime ಘಟನೆ ವಿವರ

ಪೈಜಾನ್ ಖಲಂದರ್ ಹಲ್ಲೆಗೊಳಗಾದ ಯುವಕ. ಮೇ 8ರ ಮಧ್ಯರಾತ್ರಿ ಸುಮಾರು 12:15ರ ಸಮಯದಲ್ಲಿ ಪೈಜಾನ್ ತನ್ನ ಸ್ನೇಹಿತರಾದ ಮಹಮ್ಮದ್ ಇರ್ಫಾನ್ ಮತ್ತು ಮಹಮ್ಮದ್ ಖಾಲಿದ್ ಅವರೊಂದಿಗೆ ಬೈಕಿನಲ್ಲಿ ಸಿದ್ಧಾಪುರ ಹೊಸೂರಿನಲ್ಲಿ ನಡೆಯುತ್ತಿದ್ದ ಕವಾಲಿ ಕಾರ್ಯಕ್ರಮಕ್ಕೆ ತೆರಳುತ್ತಿದ್ದರು. ಈ ವೇಳೆ ಬೈಕಿಗೆ ಪೆಟ್ರೋಲ್ ಹಾಕಿಸಲು ಬಸ್ ನಿಲ್ದಾಣದ ಎದುರಿನ ಬಂಕ್‌ಗೆ ತೆರಳಿದಾಗ ಅಲ್ಲಿ ಯಾರೂ ಇಲ್ಲದ ಕಾರಣ, ಹೋಟೆಲ್ ಪಕ್ಕದ ಬಂಕ್‌ಗೆ ಹೋಗಲು ನಿರ್ಧರಿಸಿದ್ದರು. 

ಯುವಕರು ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಬಳಿಯ ಕ್ಯಾಂಟೀನ್ ಒಂದರ ಮುಂಭಾಗದಲ್ಲಿ ಸಾಗುತ್ತಿದ್ದಾಗ, ಅಲ್ಲೇ ನಿಂತಿದ್ದ ಆಟೋದಲ್ಲಿದ್ದ ಇಬ್ಬರು ಅಪರಿಚಿತ ವ್ಯಕ್ತಿಗಳು ಇವರನ್ನು ಕೂಗಿ ಕರೆದಿದ್ದಾರೆ. ಪರಿಚಯದವರೇ ಇರಬಹುದೆಂದು ಭಾವಿಸಿ ಯುವಕರು ಹತ್ತಿರ ಹೋದಾಗ, ದುಷ್ಕರ್ಮಿಗಳು ಅವಾಚ್ಯ ಶಬ್ದಗಳಿಂದ ನಿಂದಿಸಲು ಆರಂಭಿಸಿದ್ದಾರೆ. ಇದನ್ನು ಪ್ರಶ್ನಿಸಿದ್ದಕ್ಕೆ ಆಕ್ರೋಶಗೊಂಡ ವ್ಯಕ್ತಿಗಳ ಪೈಕಿ ಒಬ್ಬ ನಿಮ್ಮನ್ನು ಇಂದು ಮುಗಿಸುತ್ತೇನೆ ಎಂದು ಕಿರುಚುತ್ತಾ ಚಾಕುವಿನಿಂದ ಪೈಜಾನ್ ಅವರ ಎದೆಯ ಬಲಬದಿಗೆ ಇರಿದಿದ್ದಾನೆ ಎನ್ನಲಾಗಿದೆ. 

ಘಟನೆಯಿಂದ ಪೈಜಾನ್ ರಕ್ತದ ಮಡುವಿನಲ್ಲಿ ಬಿದ್ದಿದ್ದು, ಮತ್ತೊಬ್ಬ ವ್ಯಕ್ತಿ ಕಲ್ಲಿನಿಂದ ಹೊಡೆಯಲು ಮುಂದಾಗಿದ್ದಾನೆ. ಕೂಡಲೇ ಸ್ನೇಹಿತರು ಜಗಳ ಬಿಡಿಸಲು ಬಂದಾಗ, ಇವತ್ತು ಬದುಕಿಕೊಂಡಿದ್ದೀರಾ, ಇನ್ನೊಮ್ಮೆ ಸಿಕ್ಕರೆ ಜೀವ ಸಹಿತ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ ದುಷ್ಕರ್ಮಿಗಳು ಆಯುಧಗಳನ್ನು ಅಲ್ಲೇ ಬಿಸಾಡಿ ಆಟೋದಲ್ಲಿ ಪರಾರಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ,

ತಕ್ಷಣ ಸ್ನೇಹಿತರು ಗಾಯಾಳುವನ್ನು ಭದ್ರಾವತಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಸಂಬಂಧ ಭದ್ರಾವತಿ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

Bhadravathi Crime Youth Stabbed Near Bus Stand

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor