ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಅಪ್ಪನ ಮನೆಯಿಂದ ದುಡ್ಡು ತಂದಿದ್ದಾರಾ?: Shivamogga Airport

ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಅಪ್ಪನ ಮನೆಯಿಂದ ದುಡ್ಡು ತಂದಿದ್ದಾರಾ?:

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಶಿವಮೊಗ್ಗ ವಿಮಾನ ನಿಲ್ದಾಣವನ್ನು ಕೇಂದ್ರ ಸರ್ಕಾರದ ಸುಪರ್ದಿಗೆ ವಹಿಸಬೇಕು ಎಂಬ ಸಂಸದ ಬಿ.ವೈ. ರಾಘವೇಂದ್ರ ಅವರ ಹೇಳಿಕೆಗೆ ಜಿಲ್ಲಾ ಉಸ್ತುವಾರಿ ಹಾಗೂ ಶಿಕ್ಷಣ ಸಚಿವ ಮಧು ಬಂಗಾರಪ್ಪ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಮಾನ ನಿಲ್ದಾಣ ನಿರ್ಮಿಸಲು ಇವರ ಅಪ್ಪನ ಮನೆಯಿಂದ ದುಡ್ಡು ತಂದಿದ್ದಾರೆಯೇ ಎಂದು ಅವರು ಖಾರವಾಗಿ ಪ್ರಶ್ನಿಸಿದ್ದಾರೆ.

ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರದ ಅನುದಾನ ಹಾಗೂ ರೈತರ ಬೆವರ ಹನಿಯಿಂದ ನಿರ್ಮಾಣವಾಗಿರುವ ಆಸ್ತಿಯನ್ನು ಕೇಂದ್ರ ಸರ್ಕಾರಕ್ಕೆ ಏಕಾಏಕಿ ಒಪ್ಪಿಸಲು ಹೇಗೆ ಸಾಧ್ಯ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಇವರಿಗೆ ಮಾನ ಮರ್ಯಾದೆ ಇದೆಯೇ? ಕರ್ನಾಟಕ ರಾಜ್ಯ ಸರ್ಕಾರದ ಆಸ್ತಿಯನ್ನು ಕೇಂದ್ರಕ್ಕೆ ವಹಿಸಿಬಿಡಬೇಕಂತೆ, ಯಾಕೆ ವಹಿಸಬೇಕು? ಇವರೇನಾದರೂ ಅಪ್ಪನ ಮನೆಯಿಂದ ದುಡ್ಡು ತಂದಿದ್ದಾರಾ? ಇಲ್ಲಿನ ರೈತರು ತಮ್ಮ ರಕ್ತ, ಬೆವರನ್ನು ಸುರಿಸಿ ವಿಮಾನ ನಿಲ್ದಾಣಕ್ಕಾಗಿ ಜಮೀನು ನೀಡಿದ್ದಾರೆ. ಆ ರೈತರ ಜಮೀನನ್ನು ಕಿತ್ತುಕೊಂಡು, ಹಾಳುಮಾಡಿ ಈಗ ಕೇಂದ್ರಕ್ಕೆ ನೀಡಲು ಹೊರಟಿದ್ದೀರಲ್ಲ, ಈ ವಿಮಾನ ನಿಲ್ದಾಣ ಮಾಡುವ ಮುಂಚೆಯೇ ಈ ವಿಚಾರವನ್ನು ನೀವು ಹೇಳಬೇಕಿತ್ತಲ್ಲವೇ ಎಂದು ತರಾಟೆಗೆ ತೆಗೆದುಕೊಂಡರು.

ಇದೇ ವೇಳೆ ವಿಮಾನ ನಿಲ್ದಾಣದ ಅಭಿವೃದ್ಧಿ ಕುರಿತು ಮಾತನಾಡಿದ ಅವರು, ಕೆಲವರು ನಾನು ಅಲ್ಲಿಗೆ ಫೋನ್ ಮಾಡಿದ್ದೇನೆ, ಇಲ್ಲಿಗೆ ಫೋನ್ ಮಾಡಿದ್ದೇನೆ, ನಾಳೆ ಫೋನ್ ಮಾಡುತ್ತೇನೆ ಎಂದು ಸುಮ್ಮನೆ ವೇದಿಕೆ ಮೇಲೆ ಭಾಷಣ ಮಾಡುತ್ತಿದ್ದಾರೆ. ವಿಮಾನ ನಿಲ್ದಾಣದಲ್ಲಿ ನೈಟ್ ಲ್ಯಾಂಡಿಂಗ್ (ರಾತ್ರಿ ವಿಮಾನ ಇಳಿಯುವ) ವ್ಯವಸ್ಥೆಗೆ ಸಂಬಂಧಿಸಿದಂತೆ ಶೀಘ್ರದಲ್ಲೇ ಅನುದಾನ ಬರಲಿದೆ. ಇನ್ನು ಕೇವಲ ಒಂದು ಅಥವಾ ಎರಡು ತಿಂಗಳೊಳಗೆ ನೈಟ್ ಲ್ಯಾಂಡಿಂಗ್ ವ್ಯವಸ್ಥೆ ಸಂಪೂರ್ಣವಾಗಿ ಸಿದ್ಧಗೊಳ್ಳಲಿದೆ. ಈ ಕುರಿತು ಸಂಬಂಧಪಟ್ಟ ಸಮಿತಿಯ ಅಧ್ಯಕ್ಷರೊಂದಿಗೆ ತಾವೇ ಖುದ್ದಾಗಿ ಚರ್ಚೆ ನಡೆಸಿದ್ದು, ಕಾಮಗಾರಿಗೆ ಹಣ ಬಂದಿದೆ ಹಾಗೂ ಕೆಲಸಗಳು ನಡೆಯುತ್ತಿವೆ. ರಾಜ್ಯದ ಆಸ್ತಿಯನ್ನು ಅಚ್ಚುಕಟ್ಟಾಗಿ ನಿರ್ವಹಣೆ ಮಾಡುವುದು ನಮ್ಮ ಕರ್ತವ್ಯವೇ ಹೊರತು, ಅದನ್ನು ಕೇಂದ್ರಕ್ಕೆ ಧಾರೆಯೆರೆಯುವುದಲ್ಲ ಎಂದು ಮಧು ಬಂಗಾರಪ್ಪ ಸ್ಪಷ್ಟಪಡಿಸಿದರು.

Madhu Bangarappa vs BY Raghavendra, Shivamogga Airport night landing, Karnataka politics Kannada, Congress vs BJP Shivamogga, Shivamogga news today, Malenadu Today news, #MadhuBangarappa #BYRaghavendra #ShivamoggaAirport #KarnatakaPolitics #ShivamoggaNews #Congress #BJPKarnataka #KannadaNews