ಶಿವಮೊಗ್ಗ: ಹೊಳಲೂರು ಗ್ರಾಮದ ಸರ್ಕಾರಿ ಆಸ್ಪತ್ರೆ ಬಳಿ ಮಹಿಳೆಯ ಸರವನ್ನು ಕಿತ್ತು ಪರಾರಿಯಾಗಿದ್ದ ಇಬ್ಬರು ಸರಗಳ್ಳರನ್ನು ಶಿವಮೊಗ್ಗ ಗ್ರಾಮಾಂತರ ಠಾಣೆ ಪೊಲೀಸರು ಕೇವಲ 24 ಗಂಟೆಗಳಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಘಟನೆಯ ವಿವರ
ಏಪ್ರಲ್ 24 ರಂದು ಶಿವಮೊಗ್ಗ ನಗರದ ಇಬ್ಬರು ಮಹಿಳೆಯರು ಹೊಳಲೂರು ಗ್ರಾಮ ಪಂಚಾಯ್ತಿಯ ಮಹಿಳಾ ಸಂಘದ ಸಭೆಗೆ ತೆರಳುತ್ತಿದ್ದರು. ಈ ವೇಳೆ ಸರ್ಕಾರಿ ಆಸ್ಪತ್ರೆಯ ಸಮೀಪ ನಡೆದುಕೊಂಡು ಹೋಗುತ್ತಿದ್ದಾಗ, ಬೈಕ್‌ನಲ್ಲಿ ಬಂದ ಅಪರಿಚಿತ ವ್ಯಕ್ತಿಯೊಬ್ಬ ಮಹಿಳೆಯ ಕೊರಳಿನಲ್ಲಿದ್ದ ಸುಮಾರು 35 ಗ್ರಾಂ ತೂಕದ ಮಾಂಗಲ್ಯ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದನು. ಈ ಬಗ್ಗೆ ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಜಿಲ್ಲಾ ಪೊಲೀಸ್ ಅಧೀಕ್ಷಕ ನಿಖಿಲ್ ಬಿ. ಅವರ ಮಾರ್ಗದರ್ಶನದಲ್ಲಿ, ಗ್ರಾಮಾಂತರ ಇನ್ಸ್‌ಪೆಕ್ಟರ್ ರಾಘವೇಂದ್ರ ಕಾಂಡಿಕೆ ನೇತೃತ್ವದ ವಿಶೇಷ ತಂಡವು ತನಿಖೆ ಕೈಗೊಂಡಿತ್ತು. ಕಾರ್ಯಾಚರಣೆ ನಡೆಸಿದ ತಂಡವು ಏಪ್ರಿಲ್ 24 ರಂದು ಆರೋಪಿಗಳಾದ ಮನೋಜ್ ಶಿರಮಣ ಸಿ. ಮತ್ತು ವಿಜಯ್ ಕುಮಾರ್ ಎಂಬುವವರನ್ನು ಬಂಧಿಸಿದೆ.
ಬಂಧಿತರಿಂದ ಕೃತ್ಯಕ್ಕೆ ಬಳಸಿದ್ದ 40,000/- ರೂ. ಮೌಲ್ಯದ ಸ್ಪ್ಲೆಂಡರ್ ಬೈಕ್ ಹಾಗೂ ಸುಮಾರು 2.50 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಸರವನ್ನು ವಶಪಡಿಸಿಕೊಳ್ಳಲಾಗಿದೆ.
Shivamogga Rural Police Arrest Chain Snatchers
