ಕುಮಾರ್​ ಬಂಗಾರಪ್ಪರಿಗೆ ಹಗ್ಗ ಕಟ್ಟಿದವರು ಯಾರು? ಕಾಂಗ್ರೆಸೋ !? ಬಿಜೆಪಿಯೋ? ಜೋರಿದೆ ವಿಚಾರ

SHIVAMOGGA  Feb 26, 2024   ಸದ್ಯ ಶಿವಮೊಗ್ಗದಲ್ಲಿ ಲೋಕಸಭಾ ಚುನಾವಣೆಯ ಕಾಂಗ್ರೆಸ್​ ಅಭ್ಯರ್ಥಿಯ ಬಗ್ಗೆ ಜೋರು ಚರ್ಚೆಯಾಗುತ್ತಿದೆ. ಇದಕ್ಕೆ ಕಾರಣವಾಗಿದ್ದು ಮಾತ್ರ ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ. 

ಬೇಳೂರು ಗೋಪಾಲಕೃಷ್ಣರವರ ಮಾತುಗಳು ಯಾರನ್ನೋ ಗುರಿ ಮಾಡಿರುತ್ತವೆ. ಇನ್ಯಾರಿಗೋ ತಗಲುತ್ತದೆ ಎಂಬುದಕ್ಕೆ ಇತ್ತೀಚಿನ ಅವರ ರಾಜಕಾರಣದ ಡೈಲಾಗ್​ಗಳಲೇ ಸಾಕ್ಷಿಯಾಗಿದ್ದವು. ಮೊನ್ನೆ ಮೊನ್ನೆವರೆಗೂ ಮಧು ಬಂಗಾರಪ್ಪರವರ ಜೊತೆಗೆ ಮುನಿಸು ತರವೆ ಎನ್ನುತ್ತಿದ್ದ ಅವರು, ಇದೀಗ ಬಂಗಾರಪ್ಪನವರ ಪುತ್ರನಿಗೆ ಜೈ ಎಂದು ಬಿಟ್ಟಿದ್ದಾರೆ. 

 

ಮಧು  ಬಂಗಾರಪ್ಪರವರು ಸಹ ಬೇಳೂರು ಗೋಪಾಲಕೃಷ್ಣರ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿ, ಸಲ್ಲದ ಮಾತುಗಳಿಗೆ ಇತಿಶ್ರೀ ಹಾಡಿದ್ದಾರೆ. ಇದರ ಬೆನ್ನಲ್ಲೆ ಬೇಳೂರು ಗೋಪಾಲಕೃಷ್ಣರರವರು ಗ್ಯಾರಂಟಿ ಫಲಾನುಭವಿಗಳ ಸಮಾವೇಶದಲ್ಲಿ ಬಿಜೆಪಿ ಮಾಜಿ ಶಾಸಕ ಕುಮಾರ್ ಬಂಗಾರಪ್ಪ  ಕಾಂಗ್ರೆಸ್​ ಬರುತ್ತಾರೆ ಅವರನ್ನ ಬಿಎಸ್​ ಯಡಿಯೂರಪ್ಪ ಹಿಡಿದಿಟ್ಟಿದ್ದಾರೆ ಎಂದಿದ್ದಾರೆ 

 

ಕುಮಾರ ಬಂಗಾರಪ್ಪ ಅವರು ಕಾಂಗ್ರೆಸ್ ಸೇರ್ಪಡೆ ಬಗ್ಗೆ ಮಾತುಕತೆ ನಡೆಯುತ್ತಿದೆ ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಅವರು ಪಕ್ಷ ಬಿಡದಂತೆ ಕಟ್ಟಿಹಾಕಿದ್ದಾರೆ. ನಾವು ಹಗ್ಗ ಕಟ್ಟಲು ಹೋಗಿದ್ದೆವು. ಹಗ್ಗ ಕಟ್ ಆಗಿದೆ. ಪಕ್ಷ ಅಂತ ಬಂದಾಗ ಸಹೋದರ ಅಂತ ಬರಲ್ಲ. ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಅಚ್ಚರಿ ಅಭ್ಯರ್ಥಿ ಆಯ್ಕೆಯಾಗುವ ಸಾಧ್ಯತೆ  ಇದೆ ಎಂದಿದ್ದಾರೆ. 

 

ಇನ್ನೂ ಇದೇ ವಿಚಾರದಲ್ಲಿ ಪ್ರತಿಕ್ರಿಯೆ ನೀಡಿರುವ ಸಂಸದ ಬಿ.ವೈ.ರಾಘವೇಂದ್ರ ಕುಮಾರ್ ಬಂಗಾರಪ್ಪ ಬಿಜೆಪಿಯಲ್ಲಿ ಇದ್ದಾರೆ ಮುಂದು ಕೂಡ ಬಿಜೆಪಿಯಲ್ಲೇ ಇರುತ್ತಾರೆ . ಕುಮಾರ್ ಬಂಗಾರಪ್ಪ ಬಿಜೆಪಿಯ ಸಿದ್ಧಾಂತವನ್ನು ಒಪ್ಪಿದ್ದಾರೆ . ಕುಮಾರ್ ಬಂಗಾರಪ್ಪ ಮಗನ ಫಿಲಂ ಶೂಟಿಂಗ್ನಲ್ಲಿ ಬ್ಯುಸಿಯಲ್ಲಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆಯ ಪ್ರಚಾರಗಳಲ್ಲಿ ಪಾಲ್ಗೊಳ್ಳಲಿದ್ದಾರೆ  ಎಂದಿದ್ದಾರೆ. 

 

ಒಟ್ಟಾರೆ ಸದ್ಯ ಕುಮಾರ್ ಬಂಗಾರಪ್ಪರವರು ಬಿಜೆಪಿ ಹಾಗೂ ಕಾಂಗ್ರೆಸ್​ ನಡುವಿನ ಟ್ರಂಪ್ ಕಾರ್ಡ್​ ಆಗಿ ಬಳಕೆಯಾಗುತ್ತಿದ್ದು, ಅವರು ಮಾತ್ರ ಮೌನ ಮುರಿಯುತ್ತಿಲ್ಲ. 

Leave a Comment