ಶಿಕಾರಿಪುರದಲ್ಲಿರುವ ಬಿಎಸ್.ಯಡಿಯೂರಪ್ಪನವರ ನಿವಾಸದ ಮೇಲೆ ಬಂಜಾರ ಸಮುದಾಯದ ಉದ್ವಿಗ್ನ ಗುಂಪು ಕಲ್ಲುತೂರಾಟ ನಡೆಸಿದ ಬೆನ್ನಲ್ಲೆ ಸ್ಥಳದಲ್ಲಿ 144 ಸೆಕ್ಷನ್ ಜಾರಿಗೊಳಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿತ್ತು. ಆದರೆ ಇದೀಗ ಎಸ್ಪಿ ಮಿಥುನ್ ಕುಮಾರ್ ಈ ಬಗ್ಗೆ ಸ್ಪಷ್ಟನೆ ನೀಡಿದ್ದು ನಿಷೆದಾಜ್ಞೆ ಜಾರಿ ಮಾಡಿಲ್ಲ ಎಂದು ತಿಳಿಸಿದ್ದಾರೆ. ಅಂಬೇಡ್ಕರ್ ಸರ್ಕಲ್ ನಲ್ಲಿ ನಡೆಯುತ್ತಿದ್ದ ಬಂಜಾರ ಸಮುದಾಯದ ಪ್ರತಿಭಟನೆಯು, ನೇರವಾಗಿ ಬಿಎಸ್ವೈ ನಿವಾಸದತ್ತ ತಿರುಗಿತ್ತು. ಪ್ರತಿಭಟನೆ ಇಂತಹದ್ದೊಂದು ತಿರುವು ಪಡೆದುಕೊಳ್ಳುತ್ತದೆ ಎಂಬ ಸುಳಿವು ಪೊಲೀಸರಿಗೂ ಸಿಕ್ಕಿರಲಿಲ್ಲ.
ಬಂದೋಬಸ್ತ್ಗಿದ್ದ ಪೊಲೀಸರ ಸಂಖ್ಯೆಯು ಸಹ ಕಡಿಮೆಯಿತ್ತು. ಹೀಗಾಗಿ ಪ್ರತಿಭಟನಾಕಾರರು ಒಳ ಮೀಸಲಾತಿ ಪರಿಷ್ಕರಣೆ ವಿಚಾರದಲ್ಲಿ ಅಸಮಾಧಾನ ವ್ಯಕ್ತಪಡಿಸಿ ನೇರವಾಗಿ ಬಿಎಸ್ ಯಡಿಯೂರಪ್ಪನವರ ಮನೆಯ ಬಳಿಗೆ ದೌಡಾಯಿಸಿದ್ರು. ಈ ವೇಳೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಸಂಸದ ಬಿ.ವೈ. ರಾಘವೇಂದ್ರ, ಬಿವೈ ವಿಜಯೇಂದ್ರ ಹಾಗೂ ವಿವಿಧ ಮುಖಂಡರ ಭಾವಚಿತ್ರ ಸುಟ್ಟು ಆಕ್ರೋಶವನ್ನು ಹೊರಹಾಕಲಾಗಿದೆ. ನೂತನವಾಗಿ ಪರಿಷ್ಕರಿಸಿರುವ ಒಳ ಮೀಸಲಾತಿ ರದ್ದುಪಡಿಸುವಂತೆ ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.

ಶಿಕಾರಿಪುರದಲ್ಲಿರುವ ಬಿಎಸ್ವೈ ಮನೆಯ ಮುಂದೆ ನಡೆದಿದ್ದೇನು?
ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ದ ದಿಕ್ಕಾರ ಘೋಷಣೆ ಕೂಗಿದ ಜನರು ಬಿಎಸ್ವೈ ಮನೆಗೆ ಕಲ್ಲು ತೂರಿದ್ದಾರೆ. ಅಲ್ಲದೆ, ಮತದಾರರಿಗೆ ನೀಡಲು ತಂದಿದ್ದ ಸೀರೆಗಳನ್ನು ಬೆಂಕಿಗೆ ಹಾಕಿದರು. ಒಂದು ಗಂಟೆಗೂ ಹೆಚ್ಚು ಕಾಲ ನಡೆದ ಈ ಆಕ್ರೋಶದಲ್ಲಿ ಪರಿಸ್ಥಿತಿಯನ್ನು ಪೊಲೀಸರು ಸಹ ಕೆಲಹೊತ್ತು ನಿಯಂತ್ರಿಸಲು ಸಾದ್ಯವಾಗಲಿಲ್ಲ.
ಬಳಿಕ ಪೊಲೀಸರು ಹೆಚ್ಚುವರಿ ಪೊಲೀಸರುನ್ನ ಸ್ಥಳಕ್ಕೆ ಕರೆಸಿಕೊಂಡಿದ್ದಾರೆ. ಅಲ್ಲದೆ ಲಾಠಿ ಚಾರ್ಜ್ ನಡೆಸಿದ್ದಾರೆ. ಲಾಠಿ ಚಾರ್ಜ್ ವೇಳೇ ಆಕ್ರೋಶಿತ ಗುಂಪು ಪೊಲೀಸರ ಮೇಲೆ ಹಲ್ಲೆ ಮಾಡಿದೆ. ಪರಿಣಾಮ ಕೆಲ ಪೊಲೀಸರಿಗೂ ಗಾಯಗಳಾಗಿವೆ. ಲಾಠಿ ಚಾರ್ಜ್ನಲ್ಲಿ ಕೆಲವು ಜನರಿಗೂ ಪೆಟ್ಟು ಬಿದ್ದಿದೆ. ಸದ್ಯ ಪರಿಸ್ಥಿತಿ ತಿಳಿಯಾಗುತ್ತಿದ್ದು, ಸ್ತಳಕ್ಕೆ ಹೆಚ್ಚುವರಿ ಪೊಲೀಸ್ ತುಕಡಿಗಳನ್ನ ರವಾನಿಸಲಾಗಿದ್ದು ಉನ್ನತ ಅಧಿಕಾರಿಗಳು ಭೇಟಿ ನೀಡುತ್ತಿದ್ದಾರೆ.
ಇನ್ನೂ ಘಟನೆಯ ಹಿಂದೆ ರಾಜಕಾರಣದ ಕೈವಾಡ ಇದೆ ಎಂಬ ಮಾತುಗಳು ಕೇಳಿಬಂದಿದ್ದು, ಈ ಸಂಬಂಧ ಮಾತನಾಡಿದ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಶಾಸಕ ಅಶೋಕ್ ನಾಯ್ಕ್ರವರು ಇದು ಪ್ರತಿಪಕ್ಷ ಕಾಂಗ್ರೆಸ್ನವರ ಕುಮ್ಮಕ್ಕಿನಿಂದ ನಡೆದಿರಬಹುದಾದ ಕೃತ್ಯ. ಎಲೆಕ್ಷನ್ ಸಂದರ್ಭದಲ್ಲಿ ಜನರನ್ನ ದಾರಿ ತಪ್ಪಿಸಲಾಗುತ್ತಿದೆ ಎಂದು ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಆರೋಪಿಸಿದ್ದಾರೆ.
ಇನ್ನೊಂದೆಡೆ ಇವತ್ತು ಪ್ರತಿಭಟನೆ ನಡೆಸ್ತಿದ್ದ ಸಂದರ್ಭದಲ್ಲಿ ತಾಲ್ಲೂಕು ಆಡಳಿತ ಮನವಿಯನ್ನು ಸ್ವಿಕರಿಸಲು ಅವಕಾಶ ಕೊಡಲಿಲ್ಲ, ಅಲ್ಲಿನ ತಹಶೀಲ್ದಾರ್ರವರು ಮನವಿ ಸ್ವೀಕರಿಸಿದೇ, ಗೇಟು ಹಾಕಿಸಿದ್ರು. ಸಮುದಾಯದ ಸ್ವಾಮೀಜಿಗಳ ನೇತೃತ್ವದಲ್ಲಿ ಶಾಂತಿಯುತವಾಗಿ ನಡೆಯುತ್ತಿದ್ದ ಪ್ರತಿಭಟನೆಯಲ್ಲಿ ಮನವಿಯನ್ನ ಸ್ವೀಕರಿಸಿದ್ದರೇ ಏನು ಸಹ ಆಗುತ್ತಿರಲಿಲ್ಲ. ಆದರೆ ಮನವಿ ಸ್ವೀಕರಿಸುವ ಬದಲಾಗಿ ಶಿಕಾರಿಪುರದ ಅಧಿಕಾರಿಗಳು ಬ್ಯಾರಿಕೇಡ್ ಹಾಕಿ ಪ್ರತಿಭಟನೆಯನ್ನು ತಡೆಯುವ ಪ್ರಯತ್ನ ಮಾಡಿದರು. ಈ ವೇಳೆ ಸಮುದಾಯದವರು ಪಕ್ಕದಲ್ಲಿಯೇ ಇರುವ ಬಿಎಸ್ವೈರವರ ಮನೆಯತ್ತ ತೆರಳಿದರು, ಅಲ್ಲಿ ಮಾರ್ಗಮಧ್ಯೆ ಪೊಲೀಸರು ಲಾಠಿ ಚಾರ್ಜ್ ಮಾಡಿದ್ರಿಂದ ಪರಿಸ್ಥಿತಿ ವಿಕೋಪಕ್ಕೆ ಹೋಯಿತು ಎಂದು ಬಂಜಾರ ಸಮುದಾಯದ ಮುಖಂಡ ಗಿರೀಶ್ ರವರು ಆರೋಪಿಸಿದ್ದಾರೆ.
ಸುದ್ದಿ ಅಪ್ಡೇಟ್
ಇನ್ನೂ ಶಿಕಾರಿಪುರದಲ್ಲಿ ನಿಷೇದಾಜ್ಞೆ ಜಾರಿ ಮಾಡಲಾಗಿದೆ ಎಂಬ ಮಾಹಿತಿಯ ಬಗ್ಗೆ ಶಿವಮೊಗ್ಗ ಎಸ್ಪಿ ಮಿಥುನ್ ಕುಮಾರ್ ಸ್ಪಷ್ಟನೆ ನೀಡಿದ್ದು, ಸ್ಥಳದಲ್ಲಿ 144 ಸೆಕ್ಷನ್ ವಿಧಿಸಲಾಗಿಲ್ಲ ಎಂದು ಮಾಧ್ಯಮ ಸಂದೇಶ ರವಾನಿಸಿದ್ದಾರೆ.